ರಾಮನಗರ, ಸೆಪ್ಟೆಂಬರ್ 23: ಮುಸ್ಲಿಂ ಸಮಾಜ ಒಂದನ್ನೇ ನಂಬಿಕೊಂಡು ಕುಳಿತಿಲ್ಲ, ಮುಸ್ಲಿಂ ನಾಯಕರು ಪಕ್ಷ ಬಿಟ್ಟರೆ ಬಿಡಲಿ ಎಂಬ ಜೆಡಿಎಸ್ (JDS) ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರ ಹೇಳಿಕೆಗೆ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಸ್ಲಿಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಹೇಳಿಕೆಯಿಂದ ಮುಸ್ಲಿಂ ಸಮುದಾಯಕ್ಕೆ ಬೇಸರವಾಗಿದೆ. ಇಂತಹ ಹೇಳಿಕೆಯೇ ಕಾಂಗ್ರೆಸ್ 135 ಸ್ಥಾನ ಗೆಲ್ಲಲು ಕಾರಣವಾಯ್ತು ಎಂದು ಜೆಡಿಎಸ್ ಮುಖಂಡ ಮುಕ್ರಂ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇನ್ನಾರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಹೇಳಿದ್ದಾರೆ. ಮೊದಲು ನಿಮ್ಮ ಆರೋಗ್ಯ ಸರಿಯಿಲ್ಲ, ನೋಡಿಕೊಳ್ಳಿ ಎಂದು ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಮುಕ್ರಂ ಹೇಳಿದ್ದಾರೆ.
ತಮ್ಮ ಅಕ್ಕಪಕ್ಕದ ಮನೆಯವರಿಗೇ ಕುಮಾರಸ್ವಾಮಿ ಏನೂ ಮಾಡಿಲ್ಲ. ಇನ್ನು ನಮ್ಮ ಸಮುದಾಯಕ್ಕೆ ಏನ್ ಮಾಡ್ತಾರೆ ಎಂದು ಮುಕ್ರಂ ಪ್ರಶ್ನೆ ಮಾಡಿದರು. ಚುನಾವಣಾ ಫಲಿತಾಂಶ ಬಂದಿರಲಿಲ್ಲ, 150 ಸ್ಥಾನ ಗೆಲ್ತೀವಿ ಅಂದಿದ್ದಿರಿ. ಬಿಜೆಪಿ ಜೊತೆ ನೀವು ಮೈತ್ರಿ ಮಾಡಿಕೊಂಡಿದ್ದಕ್ಕೆ ನಮಗೆ ಬೇಸರವಿಲ್ಲ. ನಿಮ್ಮ ಮಾತಿನಿಂದ ನಮ್ಮ ಇಡೀ ಸಮುದಾಯಕ್ಕೆ ಬೇಸರವಾಗಿದೆ. ಹೆಚ್ಡಿಕೆ ಮುಸ್ಲಿಂ ಮತಗಳಿಂದಲೇ ಗೆದ್ದು, ಈಗ ವಿರುದ್ಧ ನಿಂತಿದ್ದಾರೆ. ಮತ್ತೊಮ್ಮೆ ಮುಸ್ಲಿಂ ಸಮುದಾಯ ಬಗ್ಗೆ ಹೇಳಿಕೆ ನೀಡಿದ್ರೆ ಸುಮ್ಮನಿರಲ್ಲ ಎಂದು ಮುಕ್ರಂ ಎಚ್ಚರಿಕೆ ನೀಡಿದ್ದಾರೆ.
ಅಲ್ಪಸಂಖ್ಯಾತರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದು, ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ತೀರ್ಪು ನೀಡಿದ್ದಾರೆ ಎಂದು ಹೇಳಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಮೈತ್ರಿ ಪವಿತ್ರವೋ ಅಪವಿತ್ರವೋ ಎಂದು ಜನ ತೀರ್ಮಾನಿಸುತ್ತಾರೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರ ಮೇಲಿನ ಕೇಸ್ಗಳ ಬಗ್ಗೆ ಮಾಧ್ಯಮದಲ್ಲಿ ಪ್ರಸಾರವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಸಮಾಜ ಒಂದನ್ನೇ ನಂಬಿಕೊಂಡು ಕುಳಿತಿಲ್ಲ; ಹೆಚ್ಡಿ ಕುಮಾರಸ್ವಾಮಿ ತಿರುಗೇಟು
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಜೆಡಿಎಸ್ನಿಂದ ಮುಸ್ಲಿಂ ಮುಖಂಡರು ದೂರ ಸರಿಯುತ್ತಿರುವ ಬಗ್ಗೆ ‘ಟಿವಿ9’ ಕನ್ನಡ ವಾಹಿನಿಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ಮುಸ್ಲಿಂ ಸಮಾಜ ಒಂದನ್ನೇ ನಂಬಿಕೊಂಡು ಕೂತಿಲ್ಲ. ಅದೊಂದು ಸಮುದಾಯವನ್ನು ನೆಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ. ಕರ್ನಾಟಕದ ಆರೂವರೆ ಕೋಟಿ ಜನತೆಯ ಪ್ರತಿನಿಧಿಯಾಗಿ ನಮ್ಮ ಪಕ್ಷವಿದೆ ಎಂದು ಹೇಳಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ