ಮುಸ್ಲಿಂ ಸಮಾಜ ಒಂದನ್ನೇ ನಂಬಿಕೊಂಡು ಕುಳಿತಿಲ್ಲ; ಹೆಚ್ಡಿ ಕುಮಾರಸ್ವಾಮಿ ತಿರುಗೇಟು
ಹಿಜಾಬ್ ವಿವಾದ, ಹಲಾಲ್ ಕಟ್ ವಿವಾದ ಆದಾಗ ಮುಸ್ಲಿಂ ಸಮುದಾಯದ ಬೆನ್ನಿಗೆ ನಿಂತಿದ್ದೇ ಜೆಡಿಎಸ್. ಆವಾಗ ಕಾಂಗ್ರೆಸ್ ಎಲ್ಲೋಗಿತ್ತು? ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಗೋಲಿಬಾರ್ ಆದಾಗ ಆ ಸಮುದಾಯದ ಪರ ವಹಿಸಿದ್ದೆವು. ಆವಾಗಲೂ ಕಾಂಗ್ರೆಸ್ ಚಕಾರ ಎತ್ತಿರಲಿಲ್ಲ. ಇಷ್ಟೆಲ್ಲ ಆದರೂ ಅವರು (ಮುಸ್ಲಿಮರು) ನಮ್ಮನ್ನು ಬೆಂಬಲಿಸಲಿಲ್ಲ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು, ಸೆಪ್ಟೆಂಬರ್ 28: ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಜೆಡಿಎಸ್ನಿಂದ ಮುಸ್ಲಿಂ ಮುಖಂಡರು (Muslim Leaders) ದೂರ ಸರಿಯುತ್ತಿರುವ ಬಗ್ಗೆ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ. ‘ಟಿವಿ9’ ಕನ್ನಡ ವಾಹಿನಿಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮಾಜ ಒಂದನ್ನೇ ನಂಬಿಕೊಂಡು ಕೂತಿಲ್ಲ. ಅದೊಂದು ಸಮುದಾಯವನ್ನು ನೆಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ. ಕರ್ನಾಟಕದ ಆರೂವರೆ ಕೋಟಿ ಜನತೆಯ ಪ್ರತಿನಿಧಿಯಾಗಿ ನಮ್ಮ ಪಕ್ಷವಿದೆ ಎಂದು ಹೇಳಿದ್ದಾರೆ.
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ನಂತರ ಮುಸ್ಲಿಂ ನಾಯಕರು ಪಕ್ಷದಿಂದ ದೂರ ಸರಿಯುತ್ತಿದ್ದಾರಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗಿದ್ದರೆ ಅವರು 2019 ರಲ್ಲಾಗಲೀ 2023 ರಲ್ಲಾಗಲೀ ಯಾಕೆ ನಮ್ಮನ್ನು ಬೆಂಬಲಿಸಿಲ್ಲ ಎಂದು ಮರು ಪ್ರಶ್ನೆ ಹಾಕಿದರು. ಹಿಜಾಬ್ ವಿವಾದ, ಹಲಾಲ್ ಕಟ್ ವಿವಾದ ಆದಾಗ ಮುಸ್ಲಿಂ ಸಮುದಾಯದ ಬೆನ್ನಿಗೆ ನಿಂತಿದ್ದೇ ಜೆಡಿಎಸ್. ಆವಾಗ ಕಾಂಗ್ರೆಸ್ ಎಲ್ಲೋಗಿತ್ತು? ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಗೋಲಿಬಾರ್ ಆದಾಗ ಆ ಸಮುದಾಯದ ಪರ ವಹಿಸಿದ್ದೆವು. ಆವಾಗಲೂ ಕಾಂಗ್ರೆಸ್ ಚಕಾರ ಎತ್ತಿರಲಿಲ್ಲ. ಇಷ್ಟೆಲ್ಲ ಆದರೂ ಅವರು (ಮುಸ್ಲಿಮರು) ನಮ್ಮನ್ನು ಬೆಂಬಲಿಸಲಿಲ್ಲ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಯಾವ ಕಾರಣಕ್ಕೆ ಅವರು ಜನತಾ ದಳವನ್ನು ಬೆಂಬಲಿಸಲಿಲ್ಲ ಎಂದು ಪ್ರಶ್ನಿಸಿದರು.
ರಾಜೀನಾಮೆ ಕೊಡುವವರು ಕೊಡಲಿ ಬೇಡ ಅಂದವರು ಯಾರು; ಕುಮಾರಸ್ವಾಮಿ ಪ್ರಶ್ನೆ
ಯಾರು ಬೇಕಾದರೂ ರಾಜೀನಾಮೆ ಕೊಡಲಿ, ಅದನ್ನು ಇಟ್ಟುಕೊಳ್ಳುವವರು ಯಾರು? ಹೋಗುವವರು ಹೋಗಲಿ. ನಾನು ಯಾವುದೇ ಒಂದು ಸಮಾಜದ ಪ್ರತಿನಿಧಿಯಲ್ಲ. ನಮ್ಮ ಸಮಾಜ, ಒಕ್ಕಲಿಗ ಸಮಾಜ ನನಗೆ ಬೆಂಬಲ ಕೊಟ್ಟಿರಬಹುದು. ಹಾಗೆಂದು ನಾನು ಅದೊಂದು ಸಮಾಜದ ಪ್ರತಿನಿಧಿಯಲ್ಲ. ಕರ್ನಾಟಕದ ಆರೂವರೆ ಕೋಟಿ ಜನತೆಯ ಪ್ರತಿನಿಧಿ. ರಾಜ್ಯದ ಒಳಿತಿಗಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಆರು ತಿಂಗಳಲ್ಲಿ ಪತನವಾಗುತ್ತೆ ಕಾಂಗ್ರೆಸ್ ಸರ್ಕಾರ; ಹೆಚ್ಡಿಕೆ ಬಾಂಬ್
ನನ್ನ ಸರ್ಕಾರ ತೆಗೆದರಲ್ಲ, ಅದೇ ರೀತಿ ಈ ಸರ್ಕಾರ ಉರುಳುತ್ತೆ ಎಂದು ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಜಾಸ್ತಿ ದಿನ ಈ ಸರ್ಕಾರ ಇರುವುದಿಲ್ಲ. ಆವಾಗ ಮುಸ್ಲಿಂ ಸಮುದಾಯದ ರಕ್ಷಣೆಗೆ ಯಾರು ಇರುತ್ತಾರೆ? ಕಾಂಗ್ರೆಸ್ನವರು ಬರುತ್ತಾರೆಯೇ? ಮತ್ತೆ ನಾನೇ ಅವರಿಗೆ ಬೇಕಾಗಲಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲೂ ಜೆಸಿಬಿ ಬರುತ್ತದೆ, ನಾನು ಆ ಸ್ಥಾನಕ್ಕೆ ಬಂದೇ ಬರುತ್ತೇನೆ: ಯತ್ನಾಳ್ ಹೇಳಿಕೆಯ ಮರ್ಮ ಇಲ್ಲಿದೆ
ಆಪರೇಷನ್ ಹಸ್ತ ಅಲ್ಲ ಕೋ ಆಪರೇಷನ್ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ಅವರು ಸರ್ಕಾರ ಬಂದಮೇಲೆ ಕಾಂಗ್ರೆಸ್ ಬಿಟ್ಟು, ಬಿಜೆಪಿ, ಜೆಡಿಎಸ್ ಬಾಗಿಲು ಕಾಯ್ತಿದ್ದಾರೆ. ಏನೇನು ಆಗುತ್ತದೆಯೋ ನೋಡೋಣ ಎಂದಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ