ರಾಮನಗರ, ನವೆಂಬರ್ 23: ರಾಮನಗರ ಜಿಲ್ಲೆಗೆ (Ramanagara) ಬೆಂಗಳೂರು ದಕ್ಷಿಣ ಎಂದು ಹೆಸರಿಡುವ ಮತ್ತು ಆರೋಗ್ಯ ವಿವಿ ಕನಕಪುರಕ್ಕೆ ಸ್ಥಳಾಂತರಿಸುವ ವಿಚಾರವಾಗಿ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಅವರನ್ನು ರಾಮನಗರ ವಕೀಲರು ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಶಾಸಕರನ್ನು ಪ್ರಶ್ನಿಸಿದ ವಕೀಲರು, ನೀವು ಪ್ರತಿನಿಧಿಸುತ್ತಾ ಇರುವುದು ರಾಮನಗರ. ಅದನ್ನು ನೆನಪಲ್ಲಿಟ್ಟುಕೊಳ್ಳಿ ಎಂದು ತಾಕೀತು ಮಾಡಿದರು.
ಯಾವನೋ ಹೇಳಿದ ಹಾಗೆ ಕೇಳಲು ಹೋಗಬೇಡಿ. ನಿಮ್ಮನ್ನು ಅವರು ಆಯ್ಕೆ ಮಾಡಿಲ್ಲ. ಜಿಲ್ಲೆಯ ಮರುನಾಮಕರಣ ಮತ್ತು ಆರೋಗ್ಯ ವಿವಿ ಸ್ಥಳಾಂತರ ವಿಚಾರದಲ್ಲಿ ನೀವು ಪ್ರತಿಭಟಿಸುತ್ತಾ ಇಲ್ಲ. ನಮ್ಮ ಪರವಾಗಿ ನಿಲ್ಲುತ್ತಾ ಇಲ್ಲ. ಕನಕಪುರವನ್ನು ರಿಪಬ್ಲಿಕ್ ಮಾಡ್ತಾ ಇದ್ದೀರಾ? ಕರ್ನಾಟಕ ರಾಜ್ಯ ತೆಗೆದು ಕನಕಪುರ ರಾಜ್ಯ ಮಾಡ್ತಾ ಇದ್ದೀರಾ? ಏನ್ ಮಾಡೋಕೆ ಹೊರಟಿದ್ದಿರಾ ನೀವು ಎಂದು ಶಾಸಕರನ್ನು ವಕೀಲರು ಪ್ರಶ್ನಿಸಿದ್ದಾರೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುತ್ತೇವೆ ಎನ್ನುತ್ತೀರಿ. ಆರೋಗ್ಯ ವಿವಿ ಸ್ಥಳಾಂತರ ಮಾಡುತ್ತೇವೆ ಎನ್ನುತ್ತೀರಿ. ಈ ಮೂಲಕ ಏನು ಸಂದೇಶ ಕೊಡುವುದಕ್ಕೆ ಹೊರಟ್ಟೀದ್ದೀರಿ ಎಂದು ಶಾಸಕರ ಬಳಿ ವಕೀಲರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿಖಿಲ್ಗೆ ಆಹ್ವಾನ, ಹಳೇ ಸೇಡು ತೀರಿಸಿಕೊಳ್ಳಲು ಪ್ಲ್ಯಾನ್
ಆರೋಗ್ಯ ವಿವಿಯನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವ ವಿಚಾರ ಬಹಳ ಚರ್ಚೆಯಲ್ಲಿದೆ. ಈ ಮಧ್ಯೆ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಬಹಿರಂಗವಾಗಿ ಹೇಳಿದ್ದರು. ಇದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡುವಣ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ