ರಾಮನಗರ: ರಾಮದೇವರ ಬೆಟ್ಟದಲ್ಲಿ ರಾಮಮಂದಿರದ ಮಾದರಿ ವಿಡಿಯೋ ಬಿಡುಗಡೆ
ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟದಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಮಾದರಿ ವಿಡಿಯೋವನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ರಾಮ ಮಂದಿರಕ್ಕೆ ಶಂಕುಸ್ಥಾಪನೆ ಮಾಡುವ ದಿನಾಂಕವನ್ನು ನಾವು ಇನ್ನೂ ನಿರ್ಧರಿಸಿಲ್ಲ. ಒಂದು ಅಥವಾ ಎರಡು ವರ್ಷಗಳಲ್ಲಿ ದೇವಸ್ಥಾನ ಸಿದ್ಧವಾಗಲಿದೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.
ರಾಮನಗರ: ಜಿಲ್ಲೆಯ ರಾಮದೇವರ ಬೆಟ್ಟದಲ್ಲಿ (Ramadevara Hill) ನಿರ್ಮಾಣವಾಗಲಿರುವ ರಾಮ ಮಂದಿರದ ಮಾದರಿ ವಿಡಿಯೋವನ್ನು (Ram temple Model video) ಕರ್ನಾಟಕ ಸರ್ಕಾರ ಇಂದು ಬಿಡುಗಡೆ ಮಾಡಿದೆ. ರಾಮಮಂದಿರ ನಿರ್ಮಾಣ ಆರಂಭಿಸಲು ಅನುಮೋದನೆ ಪಡೆಯಲು ಸರ್ಕಾರ ವಿವಿಧ ಇಲಾಖೆಗಳಿಗೆ ಪ್ರಸ್ತಾವನೆಗಳನ್ನು ಕಳುಹಿಸಿದೆ. 120 ಕೋಟಿ ವೆಚ್ಚದಲ್ಲಿ ಮಂದಿರ ನಿರ್ಮಾಣವಾಗಲಿರುವ ಈ ಮಂದಿರದ ನಿರ್ಮಾಣ ಕಾಮಗಾರಿಯು ಸರಕಾರದ ಎಲ್ಲ ಇಲಾಖೆಗಳಿಂದ ಒಪ್ಪಿಗೆ ಪಡೆದು ಆರಂಭಿಸಲಾಗುತ್ತದೆ. ಈ ಬಗ್ಗೆ ಮಾತನಾಡಿದ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ (Dr. C.N. Ashwath Narayan), ರಾಮ ಮಂದಿರಕ್ಕೆ ಶಂಕುಸ್ಥಾಪನೆ ಮಾಡುವ ದಿನಾಂಕವನ್ನು ನಾವು ಇನ್ನೂ ನಿರ್ಧರಿಸಿಲ್ಲ. ದೇವಾಲಯ ನಿರ್ಮಾಣದಿಂದ ಸುತ್ತಮುತ್ತಲಿನ ಪರಿಸರಕ್ಕೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲಾಗುವುದು. ದೇಗುಲ ನಿರ್ಮಾಣಕ್ಕೆ ಈಗಾಗಲೇ ಕೆಲವು ಇಲಾಖೆಗಳಿಂದ ಅನುಮತಿ ಪಡೆದಿದ್ದೇವೆ ಎಂದರು.
ದೇವಸ್ಥಾನವು ಒಂದು ಅಥವಾ ಎರಡು ವರ್ಷಗಳಲ್ಲಿ ಸಿದ್ಧವಾಗಲಿದೆ. ಅದು ದಕ್ಷಿಣದ ಅಯೋಧ್ಯೆಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಭರವಸೆ ನೀಡಿದಂತೆ ದೇವಾಲಯವು ಸಾಕಾರಗೊಳ್ಳಲಿದೆ. ಯೋಜನೆ ಆರಂಭಿಸಲು 40 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು. ರಾಮದೇವರ ಬೆಟ್ಟ ಬೆಂಗಳೂರಿನಿಂದ 50 ಕಿಮೀ ದೂರದಲ್ಲಿದೆ. ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು.
ರಾಮನಗರದ ಶ್ರೀರಾಮ ದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ತಯಾರಿ ನಡೆಸುತ್ತಿದೆ.ರಾಮನಗರದ ರಾಮದೇವರಬೆಟ್ಟ ವಿನಾಶದ ಅಂಚಿನಲ್ಲಿರುವ ರಣಹದ್ದುಗಳ ವನ್ಯಜೀವಿಧಾಮ. ಇನ್ನು ಈ ಬೆಟ್ಟಕ್ಕೆ ಸಾಕಷ್ಟು ಇತಿಹಾಸವಿದೆ. ಬೆಟ್ಟದ ಮೇಲೆ ಶ್ರೀ ಪಟ್ಟಾಭಿರಾಮ ದೇವಸ್ಥಾನವಿದ್ದು, ತನ್ನದೆ ಆದ ಇತಿಹಾಸವಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀ ರಾಮ ದೇವನು, ಏಕಶಿಲೆಯಲ್ಲಿ ಕುಳಿತ ಭಂಗಿಯಲ್ಲಿ ಕೆತ್ತತ್ತಾದ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ವಿಗ್ರಹದ ಎಡಭಾಗದ ತೊಡೆಯ ಮೇಲೆ ಸೀತಾ ದೇವಿ ಕುಳಿತಿದ್ದರೇ, ಬಲ ಭಾಗದಲ್ಲಿ ಲಕ್ಷಣ ದೇವರ ವಿಗ್ರಹವಿದೆ. ಇನ್ನು ಪಾದದ ಬಳಿ ಆಂಜನೇಯ ಸ್ವಾಮಿಯ ವಿಗ್ರಹವಿದೆ. ಇನ್ನು ಈ ಹಿಂದೆ ಸುಗ್ರೀವ ಈ ರಾಮನ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬ ಪ್ರತೀತಿ ಇದೆ. ರಾಮನು ಇದೇ ಸ್ಥಳದಲ್ಲಿ ನಾಲ್ಕೈದು ವರ್ಷಗಳ ಕಾಲ ಸೀತೆಯೊಂದಿಗೆ ವನವಾಸವನ್ನ ಕಳೆದಿರುತ್ತಾನೆ.
ಇದನ್ನೂ ಓದಿ: ಉರಿಗೌಡ ನಂಜೇಗೌಡ ಹೆಸರಿನಲ್ಲಿ ಆಧಾರ್ ಕಾರ್ಡ್: ತಂದೆ ಸಿಟಿ ರವಿ, ತಾಯಿ ಅಶ್ವತ್ಥ ನಾರಾಯಣ
ವನವಾಸವನ್ನ ಮುಗಿಸಿ ಹೋದನಂತರ ಪಟ್ಟಾಭಿಷೇಕ ಆಗುತ್ತದೆ. ಆನಂತರ ರಾಮನ ಮೂರ್ತಿಯನ್ನ ಸುಗ್ರೀವ ಅಯೋಧ್ಯೆಯಿಂದ ಕಿಷ್ಕಿಂದೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸುಗ್ರೀವನ ಮೇಲೆ ಸುಖಾಸುರ ಎಂಬ ರಾಕ್ಷಸ ದಾಳಿ ಮಾಡುತ್ತಾನೆ. ಈ ವೇಳೆ ಸುಗ್ರೀವ ಆ ಮೂರ್ತಿಯನ್ನ ಕೆಳಗೆ ಇಡುತ್ತಾನೆ. ಈ ವೇಳೆ ಸುಗ್ರೀವನಿಗೂ ಸುಖಾಸುರ ಎಂಬ ರಾಕ್ಷಸನಿಗೂ ಯುದ್ಧ ನಡೆದು ಸುಖಾಸುರನ್ನ ಸಂಹಾರ ಮಾಡುತ್ತಾನೆ. ಆದ್ರೆ ಆನಂತರ ಮೂರ್ತಿಯನ್ನ ಎತ್ತಿಕೊಳ್ಳಲು ಮುಂದಾದರೂ ಸಾಧ್ಯವಾಗುವುದಿಲ್ಲ. ಜಾಗ ಪ್ರಶಾಂತವಾಗಿದೆ. ಇಲ್ಲಿಯೇ ಇರಲಿ ಎಂದು ಸುಗ್ರೀವಾ ಪ್ರತಿಷ್ಠಾಪನೆ ಮಾಡಿದ ಎಂಬ ಪ್ರತೀತಿ ಇದೆ.
ಇನ್ನು ದೇವಸ್ಥಾನದ ಮುಂಭಾಗ ರಾಮತೀರ್ಥ ಎಂಬ ಕಲ್ಯಾಣಿ ಸಹಾ ಇದ್ದು, ವನವವಾಸದ ಕಾಲದಲ್ಲಿ ಸೀತೆಗೆ ಬಾಯರಿಕೆ ಆದಾಗ ಎಲ್ಲೂ ನೀರು ಸಿಗದೇ ಇದ್ದಾಗ, ರಾಮ ಬಾಣ ಬಿಟ್ಟು ನೀರು ಬರಿಸಿದ ಎಂಬ ನಂಬಿಕೆ. ಹೀಗಾಗಿ ಇದಕ್ಕೆ ರಾಮತೀರ್ಥ ಎಂದು ಕರೆಯಲಾಗುತ್ತದೆ. ಇಂತಹ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಮುಂದಾಗಿದೆ. ರಾಮನಗರ ನಾಮಕರಣ ಆಗಿರುವುದೇ ರಾಮನ ಹೆಸರಲ್ಲಿ. ರಾಮಮಂದಿರ ನಿರ್ಮಾಣಕ್ಕೆ ಸಿಎಂ ಭರವಸೆ ನೀಡಿದ್ದಾರೆ. ಶ್ರೀರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಈ ಹಿಂದೆಯೂ ಅಶ್ವತ್ಥ ನಾರಾಯಣ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:23 pm, Tue, 28 March 23