ಗೋ ಸಾಗಾಟ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ: ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಿಷ್ಟು

|

Updated on: Apr 04, 2023 | 1:38 PM

ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆದು ನಿಲ್ಲಿಸಿ ಜಾನುವಾರಗಳನ್ನು ರಕ್ಷಣೆ ಮಾಡಿದ್ದ ವಾಹನದಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದು ಈ ಬಗ್ಗೆ ರಾಮನಗರ ಎಸ್ಪಿ ಮಾಹಿತಿ ನೀಡಿದ್ದಾರೆ.

ಗೋ ಸಾಗಾಟ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ: ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಿಷ್ಟು
ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ
Follow us on

ರಾಮನಗರ: ಹಿಂದೂಪರ ಸಂಘಟನೆ ಕಾರ್ಯಕರ್ತರು ತಡರಾತ್ರಿ ವಾಹನವನ್ನ ತಡೆದು ಜಾನುವಾರುಗಳನ್ನ ರಕ್ಷಣೆ ಮಾಡಿದ್ದರು. ಆದ್ರೆ ಈ ಘಟನೆ ವೇಳೆ ವಾಹನದಲ್ಲಿದ್ದ ಇದ್ರಿಸ್ ಪಾಷ ಎಂಬ ವ್ಯಕ್ತಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ. ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ಈ ಘಟನೆ ಸಂಬಂಧ ಟಿವಿ9ಗೆ ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.

ಮಾರ್ಚ್ 31 ರ ರಾತ್ರಿ ಪುನೀತ್ ಕೆರೆಹಳ್ಳಿ ಹಾಗೂ ಇತರೆ ನಾಲ್ವರು ಸಾನತೂರು ಬಳಿ ಜಾನುವಾರು ಇವೆ ಎಂದು ಕ್ಯಾಂಟರ್​ಗೆ ಅಡ್ಡ ಹಾಕಿ ವಾಹನ ನಿಲ್ಲಿಸಿದ್ದರು. ಈ ಸಂಬಂಧ ಮೂರು‌ ಪ್ರಕರಣ ದಾಖಲಾಗಿದೆ. ಪುನೀತ್ ಕೆರೆಹಳ್ಳಿ ದೂರು ಕೊಟ್ಟಿದ್ದಾರೆ. ಆಕ್ರಮ ಜಾನುವಾರು ಸಾಗಾಣಿಕೆ ಬಗ್ಗೆ ದೂರ ಕೊಟ್ಟಿದ್ದರು. ಜೊತೆಗೆ ಕ್ಯಾಂಟರ್ ಗೆ ಅಡ್ಡ ಹಾಕಿದ್ದಕ್ಕೆ ಚಾಲಕ ಕೂಡ ಪುನೀತ್ ಮೇಲೆ ದೂರು ಕೊಟ್ಟಿದ್ದರು. ಮಾರನೇ ದಿನ ಇದ್ರಿಸ್ ಎಂಬುವವರ ಮೃತದೇಹ ಸಿಕ್ಕಿದೆ. ಈ ಬಗ್ಗೆ ಇದ್ರಿಸ್ ಸಹೋದರ ಯುನಿಸ್ ಕೂಡ ದೂರು ಕೊಟ್ಟಿದ್ದಾನೆ. ಈ ಬಗ್ಗೆ ತನಿಖೆ ಮಾಡುತ್ತೇವೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ಇದರಿಂದ ಸಾವಿನ ಕಾರಣ ತಿಳಿಯಲಿದೆ. ಪುನೀತ್ ‌ಕೆರೆಹಳ್ಳಿ ಹಾಗೂ ಆತನ ಸ್ನೇಹಿತರ ಬಂಧನಕ್ಕೆ ನಾಲ್ಕು ವಿಶೇಷ ತಂಡ ರಚನೆ ಮಾಡಿದ್ದೇವೆ. 16 ಜಾನುವಾರುಗಳ ರಕ್ಷಣೆ ಮಾಡಿದ್ದೇವೆ ಎಂದು ಎಸ್​ಪಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದರು.

ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರನ್ನ ಬಂಧಿಸುವಂತೆ ಆಗ್ರಹ

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರಿನಲ್ಲಿ ಅನಮಾನಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಇದಕ್ಕೆ ಹಿಂದೂಪರ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರು ಕಾರಣವೆಂದು ಆರೋಪಿಸಿ ಮುಸ್ಲಿಂ ಸಮುದಾಯದವರು ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ರು. ಮಂಡ್ಯ ಮೂಲದ ಇದ್ರಿಸ್ ಪಾಷ(45) ಎಂಬಾತ ಸಾವನ್ನಪ್ಪಿದ್ದ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಮಳವಳ್ಳಿ ಕಡೆಗೆ ಜಾನುವಾರುಗಳನ್ನ ಸಾಗಿಸುತ್ತಿದ್ದ ಕ್ಯಾಂಟರ್ ಅನ್ನ ಅಡ್ಡಗಟ್ಟಿದ ಪುನೀತ್ ಹಾಗೂ ತಂಡ ಸುಮಾರು 16 ಜಾನುವಾರುಗಳನ್ನ ರಕ್ಷಣೆ ಮಾಡಿ, ಚಾಲಕ ಸೈಯದ್ ಎಂಬಾತನನ್ನ ಹಿಡಿದುಕೊಂಡಿದ್ರು. ಆದರೆ ಈ ವೇಳೆ ವಾಹನದಲ್ಲಿ ಇದ್ರಿಸ್ ಪಾಷ ಹಾಗೂ ಮತ್ತೊಬ್ಬ ಪರಾರಿಯಾಗಿದ್ರು.

ಇದನ್ನೂ ಓದಿ: ರಾಮನಗರ: ಕಸಾಯಿಖಾನೆಗೆ ಜಾನುವಾರು ಸಾಗಾಟ ವಾಹನದ ಮೇಲೆ ದಾಳಿ, ವಾಹನದಲ್ಲಿದ್ದ ವ್ಯಕ್ತಿ ನಿಗೂಢ ಸಾವು

ಈ ಸಂಬಂಧ ಸಾತನೂರು ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆದ್ರೆ ಬೆಳಗ್ಗೆ ಸಾತನೂರು ಸಮೀಪವೇ ಅನುಮಾನಸ್ಪದ ರೀತಿಯಲ್ಲಿ ಇದ್ರಿಸ್ ಪಾಷ ಮೃತದೇಹ ಪತ್ತೆಯಾಗಿತ್ತು. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಸಾವಿಗೆ ಪುನೀತ್ ಕೆರೆಹಳ್ಳಿ ಅಂಡ್ ಟೀಂ ಕಾರಣವೆಂದು ಆರೋಪಿಸಲಾಗಿದೆ.
ಇದ್ರಿಸ್ ಪಾಷ ಮೃತದೇಹ ಪೊಲೀಸ್ ಠಾಣೆ ಸಮೀಪವೇ ಸಾತನೂರು ಸರ್ಕಲ್ ಬಳಿ ಪತ್ತೆಯಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಮುಸ್ಲಿಂ ಸಮುದಾಯದ ಮುಖಂಡರು ಸಾತನೂರು ಪೊಲೀಸ್ ಠಾಣೆ ಮುಂಭಾಗ ಜಮಾವಣೆಗೊಂಡು ಪುನೀತ್ ಕೆರೆಹಳ್ಳಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

ಅಲ್ಲದೆ ಸಾವಿಗೆ ಕಾರಣವಾದ ಪುನೀತ್ ನನ್ನ ಬಂಧಿಸಬೇಕು ಎಂದು ಒತ್ತಾಯ ಮಾಡಿದ್ರು. ಇನ್ನು ಇದ್ರಿಸ್ ಪಾಷ, ಜಾನುವಾರುಗಳನ್ನ ಕಸಾಯಿಖಾನೆಗೆ ಸಾಗಿಸುತ್ತಿರಲಿಲ್ಲ. ಸಂತೆಗೆ ತೆಗೆದುಕೊಂಡು ಹೋಗುತ್ತಿದ್ದರು. ಇವರು ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿನ ಸತ್ಯಾಸತ್ಯತೆ ತಿಳಿಯಲಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ