ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಸಂಗಮದ ಬಳಿ ಇಂದು(ಫೆ.1) ರೈತ ಸಂಘಗಳಿಂದ ಪ್ರತಿಭಟನೆ ನಡೆಸಿ ಗುದ್ದಲಿ ಪೂಜೆಗೆ ಮುಂದಾಗಿದ್ದು, ಮುಂಜಾಗ್ರತಾ ಕ್ರಮವಾಗಿ ತಹಶೀಲ್ದಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಮೇಕೆದಾಟು ಯೋಜನೆ (Mekedatu project) ಅನುಷ್ಠಾನಕ್ಕೆ ಆಗ್ರಹಿಸಿ ಜನವರಿ 31ರಂದು ದೆಹಲಿ ಚಲೋಗೆ ನಿರ್ಧಾರ ಮಾಡಲಾಗಿತ್ತು, ದೆಹಲಿ ಚಲೋ ಕೈಗೊಂಡ ಯೋಜನೆ ಅನುಷ್ಠಾನಗೊಳಿಸುವಂತೆ ಕೇಂದ್ರಕ್ಕೆ ಒತ್ತಾಯಿಸಿ ಇಂದು(ಫೆ.1) ದೆಹಲಿಯ ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸಲಾಗುವುದು ನಂತರ ರಾಷ್ಟ್ರಪತಿಯವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸುತ್ತೇವೆ ಎಂದು ಮೇಕೆದಾಟು ಹೋರಾಟಗಾರರ ಸಮಿತಿ ರಾಮನಗರದಲ್ಲಿ ಹೇಳಿಕೆ ನೀಡಿತ್ತು. ಈ ಬೆನ್ನಲ್ಲೆ ಇಂದು ಮೇಕೆದಾಟು ಸಂಗಮದ ಬಳಿ ರೈತ ಸಂಘಟನೆಗಳಿಂದ ಪ್ರತಿಭಟನೆಗೆ ಮುಂದಾಗಿದೆ.
ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ದಶಕಗಳ ಕಾಲ ಹೊಗೆಯಾಡುತ್ತಿರುವ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಬಹು ವರ್ಷಗಳಿಂದ ಹೋರಾಟ ನಡೆಯುತ್ತಲೇ ಬಂದಿದ್ದು, ಇದೀಗ ಮತ್ತೆ ಇದರ ಕಾವು ಜೋರಾಗಿದೆ. ಇನ್ನು ಜ.28 ರಂದು ಮಾತನಾಡಿದ್ದ ಸಿಡಬ್ಲ್ಯುಎಂಎ ಅಧ್ಯಕ್ಷ ಸೌಮಿತ್ರ ಕುಮಾರ್ ಹಲ್ದಾರ್, ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೇಕೆದಾಟು ಎಂಬಲ್ಲಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಯೋಜಿಸಿದೆ, ಅದರ ನಂತರ ತಮಿಳುನಾಡು ಕರ್ನಾಟಕದ ಯೋಜನೆಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ.
ಈ ನಡುವೆ, ತಮಿಳುನಾಡು ಮತ್ತು ಕರ್ನಾಟಕದ ನಡುವೆ ವಿವಾದಕ್ಕೆ ಕಾರಣವಾಗಿರುವ ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಅನುಸರಿಸುವುದಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹೇಳಿದೆ. ತಮಿಳುನಾಡು ಪಿಡಬ್ಲ್ಯೂಡಿ ಅಧಿಕಾರಿಗಳ ಜೊತೆ ಸಿಡಬ್ಲ್ಯೂಎಂಎ ಅಧಿಕಾರಿಗಳ ತಂಡವು ಪುದುಚೇರಿ-ತಮಿಳುನಾಡು ಗಡಿಯಲ್ಲಿ ಸಿಡಬ್ಲ್ಯೂಎಂಎ ಸ್ಥಾಪಿಸಿದ ಗೇಜಿಂಗ್ ಸ್ಟೇಷನ್‌ಗೆ ಭೇಟಿ ನೀಡಿ ಕಾವೇರಿ ಜಲಾನಯನ ಪ್ರದೇಶದ ಇತರ ಪ್ರದೇಶಗಳನ್ನು ಪರಿಶೀಲಿಸಿದ ನಂತರ ಈ ಹೇಳಿಕೆ ಬಂದಿದೆ. ವಿಷಯವು ಈಗ ಸುಪ್ರೀಂಕೋರ್ಟ್ನಲ್ಲಿ ಇರುವುದರಿಂದ ಕೋರ್ಟ್ ಏನು ಆದೇಶ ನೀಡುತ್ತದೆಯೋ ಅದನ್ನು ಪಾಲಿಸುತ್ತೇವೆ. ಒಂದು ವೇಳೆ, ಕೋರ್ಟ್ ನಮಗೆ ಅಧಿಕಾರ ನೀಡಿದರೆ ಪ್ರಾಧಿಕಾರವು ವಿವಾದ ಹೊಂದಿರುವ ರಾಜ್ಯಗಳೊಂದಿಗೆ ಸಮಸ್ಯೆ ಬಗ್ಗೆ ಚರ್ಚಿಸುತ್ತೇವೆ ಎಂದು ಸಿಡಬ್ಲ್ಯುಎಂಎ ಅಧ್ಯಕ್ಷ ಸೌಮಿತ್ರ ಕುಮಾರ್ ಹಲ್ದಾರ್ ಹೇಳಿದ್ದಾರೆ.
ಏನಿದು ಮೇಕೆದಾಟು ಯೋಜನೆ?
ಕರ್ನಾಟಕ ಸರ್ಕಾರ ಮೊದಲು ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾಪವನ್ನು 2013ರ ಸೆಪ್ಟೆಂಬರ್‌ನಲ್ಲಿ ಮುಂದಿಟ್ಟಿತು. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಹೀಗಾಗಿ ಆ ನೀರನ್ನು ಸಂಗ್ರಹಿಸಿ, ಬೇಸಿಗೆ ಕಾಲದಲ್ಲಿ ಉಂಟಾಗುವ ನೀರಿನ ಕೊರತೆಯನ್ನು ನೀಗಿಸಿ, ಮೈಸೂರು, ಬೆಂಗಳೂರು ನಗರಗಳಿಗೆ ಕುಡಿಯುವ ನೀರಿಗಾಗಿ ಉಪಯೋಗಿಸಿಕೊಳ್ಳುವುದು ಹಾಗೂ ಅಗತ್ಯಬಿದ್ದಾಗ ಕೃಷಿಗೂ ಬಳಸಿಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಬೃಹತ್ ಪ್ರಮಾಣದ ವಿದ್ಯುತ್ ಉತ್ಪಾದನೆಗೂ ರಾಜ್ಯ ಸರ್ಕಾರ ಯೋಜನೆ ಹಾಕಿಕೊಂಡಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ