ರಾಮನಗರ, ನವೆಂಬರ್ 27: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಅಪಘಾತ ತಡೆಗೆ ಎಷ್ಟೇ ಕ್ರಮ ಕೈಗೊಂಡರೂ ಅವಘಡಗಳು ನಿಲ್ಲುತ್ತಿಲ್ಲ. ಈಗ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಗುದ್ದಿದ ಕಾರು ಎದುರು ಬದಿಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿಗೆ ಗುದ್ದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಇಬ್ಬರು ಪುರುಷರು, ಹಾಗೂ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಬಳಿ ಮಂಗಳವಾರ ರಾತ್ರಿ 9.30ರ ಸುಮಾರಿಗೆ ಘಟನೆ ಸಂಭವಿಸಿದೆ.
ಡೆಲ್ಲಿ ಪಾಸಿಂಗ್ ನಂಬರ್ ಹೊಂದಿರುವ ಹ್ಯೂಂಡಯ್ ಐ ಟೆನ್ ಕಾರು ಹಳೆಯ ಮಾಡೆಲ್ ಆಗಿದ್ದು, ಬೆಂಗಳೂರಿನ ಶಿವಾಜಿನಗರದ ನಿವಾಸಿಗಳಾದ ಲಿಯಾಕತ್ (50), ಅಸ್ಮಾ (38), ನೂರ್ (40) ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕುಟುಂಬ, ಸಂಬಂಧಿಕರ ಕಾರ್ಯಕ್ರಮವೊಂದಕ್ಕೆ ತೆರಳುತ್ತಿತ್ತು. ಕಾರು ಡಿವೈಡರ್ಗೆ ಕಾರು ಗುದ್ದಿದ ಪರಿಣಾಮ ಕಾರು ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರನ್ನು ಹೊರ ತೆಗೆಯಲು ಹರಸಾಹಸಪಡಬೇಕಾಯಿತು.
ಅಪಘಾತ ಕಾರಣ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ರಾಮನಗರ ಟ್ರಾಫಿಕ್ ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರ ತೆಗೆದು ರಾಮನಗರ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಮತ್ತೊಂದು ಕಂಟಕ: ಪ್ರಯಾಣಿಕರಿಗೆ ಪ್ರಾಣ ಭಯ
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಷ್ಟೇ ಮುತುವರ್ಜಿ ವಹಿಸಿದರೂ ಅಪಘಾತಗಳು ನಿಲ್ಲುತ್ತಿಲ್ಲ. ಇರಲಿಲ್ಲ, ಹೀಗಾಗಿ ರಾಜ್ಯದ ಪೊಲೀಸ್ ಇಲಾಖೆಯೇ ಜೀವ ಉಳಿಸುವಂತಹ ನಿಟ್ಟಿನಲ್ಲಿ ಸ್ಪೀಡ್ ಡಿಟೆಕ್ಟರ್ಗಳನ್ನು ಅಳವಿಡಿಸಿ ಗಂಟೆಗೆ 100 ಕಿಲೋಮೀಟರ್ಗಿಂತ ಹೆಚ್ಚು ವೇಗವಾಗಿ ಹೋದರೆ ದಂಡ ವಿಧಿಸುವಂತೆ ಮಾಡಿದ್ದಾರೆ. ಆದರೆ ಈ ಅಪಘಾತದ ಸಂದರ್ಭದಲ್ಲಿ ಕಾರಿನ ವೇಗದ ಮಿತಿ ಗಂಟೆಗೆ 70 ಕಿಲೋಮೀಟರ್ ಕೂಡ ದಾಟಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಅಪಘಾತಕ್ಕೆ ನಿಖರ ಕಾರಣವೇನೆಂಬುದರ ಬಗ್ಗೆ ರಾಮನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 am, Wed, 27 November 24