Ramanagara Accident: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇಯಲ್ಲಿ ಸರಣಿ ಅಪಘಾತ; ಮೂವರು ಸ್ಪಾಟ್ ಡೆತ್

|

Updated on: May 01, 2023 | 3:39 PM

ಬೆಂಗಳೂರು-ಮೈಸೂರು ಎಕ್ಸ್​​​ಪ್ರೆಸ್​ವೇಯಲ್ಲಿ ಅಪಘಾತಗಳು ಮುಂದುವರಿದಿದ್ದು, ಇದೀಗ ಮತ್ತೊಂದು ದುರಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ರಾಮನಗರ ತಾಲೂಕಿನ ಜಯಪುರ ಗೇಟ್ ಬಳಿ ಈ ಘಟನೆ ನಡೆದಿದೆ.

Ramanagara Accident: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇಯಲ್ಲಿ ಸರಣಿ ಅಪಘಾತ; ಮೂವರು ಸ್ಪಾಟ್ ಡೆತ್
ರಾಮನಗರದ ಜಯಪುರ ಗೇಟ್ ಬಳಿಯ ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ವೇಯಲ್ಲಿ ಅಪಘಾತ
Follow us on

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್​​​ಪ್ರೆಸ್​ವೇಯಲ್ಲಿ (Bengaluru-Mysuru Expressway) ಅಪಘಾತಗಳಿಗೆ ಬ್ರೇಕ್ ಬೀಳುತ್ತಿಲ್ಲ. ಅಲ್ಲೊಂದು ಇಲ್ಲೊಂದು ದರ್ಘಟನೆಗಳು ಸಂಭವಿಸುತ್ತಲೇ ಇವೆ. ಇದೀಗ ರಾಮನಗರ ತಾಲೂಕಿನ ಜಯಪುರ ಗೇಟ್ ಬಳಿ ನಡೆದ ದುರಂತದಲ್ಲಿ ಮೂವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಮೂವರು ಒಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಕಾರಿಗೆ ಡಿಕ್ಕಿ (Accident) ಹೊಡೆದು ನೆಲಕ್ಕೆ ಅಪ್ಪಳಿಸಿದ್ದಾರೆ. ಈ ವೇಳೆ ಮತ್ತೊಂದು ಕಾರು ಬಂದು ಅವರಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ಒಂದೇ ಬೈಕ್​ನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಮೂವರು ಮುಂಭಾಗದಲ್ಲಿ ಕೆಟ್ಟು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್​ನಲ್ಲಿದ್ದ ಮೂವರು ಹೆದ್ದಾರಿಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂಬದಿಯಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಹೆದ್ದಾರಿಗೆ ಬಿದ್ದ ಮೂವರು ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಾಮನಗರ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅಪಘಾತಗಳಲ್ಲಿ ಉಂಟಾಗುವ ಅಧಿಕ ರಕ್ತಸ್ರಾವ ನಿಲ್ಲಿಸಲು 2 ಘಟಕಗಳನ್ನು ಅಭಿವೃದ್ಧಿಪಡಿಸಿದ MIT ಸಂಶೋಧಕರು

ಇತ್ತೀಚೆಗಷ್ಟೇ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡಾ ಬಳಿ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟಿದ್ದರು. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಆಲ್ಟೊ ಕಾರು ಟೈರ್​ ಸ್ಫೋಟಗೊಂಡು ನಿಯಂತ್ರಣತಪ್ಪಿ ಡಿವೈಡರ್ ದಾಟಿ ಪಕ್ಕದ ರಸ್ತೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿತ್ತು. ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿದ್ದ ರವಿ ಪೂಜಾರ್​ ಕುಟುಂಬಸ್ಥರು ಬೆಂಗಳೂರಿನಿಂದ ಟಿ.ನರಸೀಪುರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಕೆಎಸ್‌ಆರ್‌ಟಿಸಿ ಬಸ್ ಕಣಿಮಿಣಿಕೆ ಬಳಿ ಟೋಲ್ ಕಟ್ಟುವುದನ್ನು ತಪ್ಪಿಸಲು ಹೋಗಿ ಬೈಕ್​ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಕಳೆದ ತಿಂಗಳು ಸಂಭವಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Mon, 1 May 23