ಅದು ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ, ರಾಜ್ಯದ ಉಪಮುಖ್ಯಮಂತ್ರಿ, ಪ್ರಭಾವೀ ಕಾಂಗ್ರೆಸ್ ನಾಯಕ (DK Shivakumar) ಸೇರಿದಂತೆ ಸಹಸ್ರಾರು ಭಕ್ತರು ತಮ್ಮ ಮನೆ ದೇವರನ್ನಾಗಿಸಿಕೊಂಡ ದೇವತೆಯ ಕ್ಷೇತ್ರ, ಆದರೆ ಅಲ್ಲಿ ಅದೊಂದು ಸಮಸ್ಯೆ ಬಹಳಷ್ಟು ಹೆಚ್ಚಾಗಿತ್ತು. ಅದಕ್ಕೆ ಆ ಎಂಟು ನೂರು ವಿದ್ಯಾರ್ಥಿಗಳು ಸೇರಿ ಮಾಡಿದ್ದೇನು ಈ ಸ್ಟೋರಿ ನೋಡಿ… ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳುವಿನ ಕಬ್ಬಾಳಮ್ಮ ಕ್ಷೇತ್ರದಲ್ಲಿ (Kabbalamma temple, Kanakapura) ಎಂಟು ನೂರು ವಿದ್ಯಾರ್ಥಿಗಳು (Students) ಶ್ರಮದಾನ (Shramdaan) ಮಾಡೋ ಮೂಲಕ ತಮ್ಮ ಭಕ್ತಿಯನ್ನು ತೋರಿಸಿದ್ದಾರೆ.
ರಾಜ್ಯದ ಐತಿಹಾಸಿಕ, ಧಾರ್ಮಿಕ ಕ್ಷೇತ್ರ ಕಬ್ಬಾಳುವಿನ ಕಬ್ಬಾಳಮ್ಮ ದೇವಸ್ಥಾನಕ್ಕೆ ಪ್ರತಿದಿನ ನೂರಾರು ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ. ಕೇವಲ ರಾಜ್ಯ ಮಾತ್ರವಲ್ಲದೆ ಬೇರೆ ರಾಜ್ಯಗಳಿಂದಲೂ ಆಗಮಿಸುವ ಭಕ್ತರು ಕಬ್ಬಾಳಮ್ಮನ ಆಶೀರ್ವಾದ ಪಡೆದು ಹೋಗ್ತಾರೆ. ಆದರೆ ಬಂದಿರುವ ಭಕ್ತರಿಗೆಲ್ಲರಿಗೂ ಕಿರಿಕಿರಿ ಉಂಟು ಮಾಡುವ ಸಂಗತಿ ಅಂದ್ರೆ ಇಲ್ಲಿ ಒಣ ಕಸ, ಹಸಿ ಕಸ ಹಾಗೂ ಮಾಂಸದ ತುಣುಕುಗಳು ಎಲ್ಲೆಂದರಲ್ಲಿ ಬಿಸಾಕುವುದು, ಅದರ ಪರಿಣಾಮ ಇಡೀ ಪ್ರದೇಶ ಮಲಿನವಾಗಿತ್ತು. ಅದನ್ನೆಲ್ಲಾ ಕ್ಲೀನ್ ಮಾಡಲೇಬೇಕು ಎಂದು ವಿದ್ಯಾರ್ಥಿಗಳು ಒಕ್ಕೊರಲಿಂದ ಡಿಸೈಡ್ ಮಾಡಿ, ನಿನ್ನೆ ಗುರುವಾರ ಇಡೀ ದಿನ ಶ್ರಮದಾನ ಮಾಡಿದ್ದಾರೆ.
ಕಬ್ಬಾಳುವಿಗೆ ಬಂದು ಅಮ್ಮನವರ ದರ್ಶನ ಪಡೆಯಲು ಬಂದಿದ್ದ. ಮಾಜಿ ಪೊಲೀಸ್ ಅಧಿಕಾರಿ ಉಮೇಶ್, ಇಲ್ಲಿನ ಪರಿಸ್ಥಿತಿ ಕಂಡು ಇದನ್ನು ಬದಲಾಯಿಸಬೇಕು ಅಂತ ನಿಶ್ವಯ ಮಾಡಿದ್ದರು. ಅದಕ್ಕೆ ವಿದ್ಯಾರ್ಥಿಗಳ ಬೆಟಾಲಿಯನ್ ಪಡೆ ತೆಗೆದುಕೊಂಡು ಶ್ರಮದಾನ ಶುರು ಮಾಡಿದರು. ಉಮೇಶ್ ಹಾಗೂ ತಂಡ ಕಬ್ಬಾಳು ಕ್ಷೇತ್ರದ ಕಂಸಾಗರದಿಂದ ಅರೇಕಟ್ಟೆ ದೊಡ್ಡಿ ವರೆಗಿನ ಪ್ರದೇಶ ಹಾಗೂ ಐತಿಹಾಸಿಕ ಕಬ್ಬಾಳುದುರ್ಗ ಬೆಟ್ಟದ ಮೇಲೆ ಭಕ್ತರು ಬೇಕಾಬಿಟ್ಟಿ ಬಿಸಾಡಿದ್ದ ಪ್ಲಾಸ್ಟಿಕ್ ಕವರ್‌ಗಳು, ವಾಟರ್ ಬಾಟೆಲ್, ಮದ್ಯದ ಬಾಟೆಲ್‌ಗಳು, ಪೌಚ್‌ಗಳು ಮೊದಲಾದ ಪರಿಸರಕ್ಕೆ ಹಾನಿಕಾರಕ ತ್ಯಾಜ್ಯಗಳನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಶಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಣೆ ಮಾಡಿ ಸೂಕ್ತವಾಗಿ ವಿಲೇ ಮಾಡಲಾಯಿತು. ಪ್ಲಾಸ್ಟಿಕ್ ತ್ಯಾಜ್ಯದಿಂದ ಮಲಿನವಾಗುತ್ತಿರುವ ಕಬ್ಬಾಳು ಪುಣ್ಯ ಕ್ಷೇತ್ರವನ್ನು ಸ್ವಚ್ಛಗೊಳಿಸುವ ಮೂಲಕ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿದರು. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಂಗಡಿಮುಂಗಟ್ಟುಗಳಿಗೆ ತೆರಳಿ ’ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ -ಕಬ್ಬಾಳು ಕ್ಷೇತ್ರ ಉಳಿಸಿ’ ಎಂದು ಅರಿವು ಮೂಡಿಸುವ ಕರಪತ್ರವನ್ನು ಹಂಚಿಕೆ ಮಾಡಿದರು. ಅಲ್ಲದೆ ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಬ್ಯಾಗ್ ಅನ್ನು ತರುವಂತೆಯೂ ಭಕ್ತರಿಗೆ ಇದೇ ವೇಳೆ ತಾಕೀತು ಮಾಡಿದ್ದಾರೆ. ಒಟ್ಟಾರೆಯಾಗಿ ಮಾಜಿ ಪೊಲೀಸ್ ಅಧಿಕಾರಿ ಹಾಗೂ ವಿದ್ಯಾರ್ಥಿಗಳ ಈ ಶ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ