ರಾಮನಗರ: ಜಿಲ್ಲೆಯ ಕನಕಪುರ ನಗರದಲ್ಲಿರುವ ದೇಗುಲ ಮಠದಿಂದ ಮೂವರು ಬಾಲಕರು ನಾಪತ್ತೆಯಾಗಿದ್ದಾರೆ. ನ.9ರ ರಾತ್ರಿ ಮಠದಿಂದ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಕುಮಾರ್(15), ಪ್ರತಾಪ್(16), ಕಾರ್ತಿಕ್(15) ನಾಪತ್ತೆಯಾದವರು.
ದೇಗುಲ ಮಠದಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕರು ಹಾಸ್ಟೆಲ್ನಲ್ಲಿ ಊಟ ಮುಗಿಸಿ ನಂತರ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಮಠದ ಸಿಬ್ಬಂದಿ ಮಹದೇವಸ್ವಾಮಿ ನ.11ರಂದು ಕನಕಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂವರು ಬಾಲಕರಿಗಾಗಿ ಕನಕಪುರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಕೆರೆಗೆ ಬಿದ್ದು ಸಾವು
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಅಕ್ಕಿ ಹೆಬ್ಬಾಳು ಬಳಿ ಪಾಂಡಿಚೇರಿಯ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಅಲ್ಹರ್ಶ್ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಬಹಿರ್ದೆಸೆಗೆಂದು ಹೊರಹೋಗಿದ್ದಾಗ ಕೆರೆಗೆ ಜಾರಿ ಬಿದ್ದಿದ್ದಾರೆ. ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದೇ ಘಟನೆಗೆ ಕಾರಣ ಎಂದು ಕ್ರೀಡಾ ಆಯೋಜಕರ ವಿರುದ್ಧ ಸ್ಥಳೀಯ ನಿವಾಸಿಗಳು ಆರೋಪ ಮಾಡಿದ್ದಾರೆ.
ಕೆ.ಆರ್ ಪೇಟೆಯ ಅಕ್ಕಿ ಹೆಬ್ಬಾಳಿನಲ್ಲಿ ನಡೆಯುತ್ತಿರುವ ಸೈಕಲ್ ಪೋಲೊ ಕ್ರೀಡಾ ಕೂಟದಲ್ಲಿ ಭಾಗಿಯಾಗಲು ಅಲ್ಹರ್ಶ್ ಪಾಂಡಿಚೇರಿಯಿಂದ ಕೆ.ಆರ್ ಪೇಟೆಗೆ ಆಗಮಿಸಿದ್ದರು. ತಡರಾತ್ರಿ ಬಹಿರ್ದೆಸೆಗೆಂದು ಆಚೆ ಹೋದಾಗ ಘಟನೆ ನಡೆದಿದೆ. ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿಂದು ಮರಣೋತ್ತರ ಪರೀಕ್ಷೆ ನಡೆಯಲಿದ್ದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನಲ್ಲಿ ಮತ್ತೆ ಕಾಣಿಸಿಕೊಂಡ ಮೊಸಳೆ
ಅಗ್ರಹಾರದ ರಾಮಾನುಜ ರಸ್ತೆಯ ಮೋರಿಯಲ್ಲಿ ಕರುವನ್ನು ಕೊಂದು ಹಾಕಿದ ಮೊಸಳೆ ಕಾಣಿಸಿಕೊಂಡಿದೆ. ಕಳೆದ ಒಂದು ತಿಂಗಳಿನಿಂದ ಕಣ್ಣಾ ಮುಚ್ಚಾಲೆಯಾಡುತ್ತಿದ್ದ ಮೊಸಳೆ 15 ದಿನದ ಹಿಂದೆ ಮೋರಿಯಿಂದ ಮೇಲೆ ಬಂದಿತ್ತು. ಇಂದು ಮೋರಿಯಲ್ಲಿ ಕರುವಿನ ಮೃತದೇಹ ಪತ್ತೆಯಾಗಿದೆ. ಸುತ್ತ ಮುತ್ತಲಿನ ಜನರು ಆತಂಕದಲ್ಲಿದ್ದು ಮೊಸಳೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.