ಬೂಟು ಏಟು ತಿಂದ ದಿನವನ್ನೇ ಜನ್ಮದಿನ ಎಂದು ಆಚರಣೆ ಮಾಡಿಕೊಳ್ಳುತ್ತಾರೆ ವಾಟಾಳ್ ನಾಗರಾಜ್!

Vatal Nagaraj Birthday: ವಾಟಾಳ್ ನಾಗರಾಜ್, ಹುಟ್ಟುಹಬ್ಬದ ದಿನದಂದು ಕೇಟ್ ಕಟ್ ಮಾಡಿ, ತಮ್ಮ ಬರ್ತೇಡೆ ಆಚರಣೆ ಮಾಡಿಕೊಳ್ಳಲಿಲ್ಲ. ಬದಲಾಗಿ ಬಸ್ ನಿಲ್ದಾಣದಲ್ಲಿಯೇ ಸಾರ್ವಜನಿಕರಿಗೆ ಕಡಲೆಕಾಯಿ ಹಂಚುವ ಮೂಲಕ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡರು.

ಬೂಟು ಏಟು ತಿಂದ ದಿನವನ್ನೇ ಜನ್ಮದಿನ ಎಂದು ಆಚರಣೆ ಮಾಡಿಕೊಳ್ಳುತ್ತಾರೆ ವಾಟಾಳ್ ನಾಗರಾಜ್!
ವಾಟಾಳ್ ನಾಗರಾಜ್ ಹುಟ್ಟುಹಬ್ಬ ಆಚರಣೆ

ರಾಮನಗರ: ವಿಭಿನ್ನ ವ್ಯಕ್ತಿತ್ವ, ವಿಶೇಷ ರೀತಿಯ ಪ್ರತಿಭಟನೆಗಳು, ನಾಡು ನುಡಿ, ಭಾಷೆ, ಜಲದ ವಿಚಾರವಾಗಿ ಸಾಕಷ್ಟು ಹೋರಾಟ ಮಾಡಿಕೊಂಡು, ಐದು ಬಾರಿ ಶಾಸಕರಾಗಿ ರಾಜ್ಯ ಹಾಗೂ ದೇಶದಲ್ಲಿ ಸಾಕಷ್ಟು ಗಮನಸೆಳೆದಿರುವ ಕನ್ನಡಪರ ಹೋರಾಟಗಾರ, ವಾಟಾಳ್ ಪಕ್ಷದ ಅಧ್ಯಕ್ಷ, ವಾಟಾಳ್ ನಾಗರಾಜ್ ಇವತ್ತು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ವಿಶೇಷ ಎಂದರೆ ನಾವು ನಮ್ಮ ಹುಟ್ಟಿದ ದಿನವನ್ನು ಜನ್ಮದಿನವನ್ನಾಗಿ ಆಚರಣೆ ಮಾಡಿಕೊಳ್ಳುತ್ತೇವೆ. ಆದ್ರೆ ವಾಟಾಳ್ ನಾಗರಾಜ್, ತಾವು ಬೂಟಿನ ಏಟು ತಿಂದ ಸೆಪ್ಟೆಂಬರ್ 7ನೇ ತಾರೀಕನ್ನು ತಮ್ಮ ಹುಟ್ಟುಹಬ್ಬವನ್ನಾಗಿ ಆಚರಣೆ ಮಾಡಿಕೊಂಡು ಬಂದಿದ್ದಾರೆ.

ಅದರಂತೆ ಇವತ್ತು ವಾಟಾಳ್ ನಾಗರಾಜ್ ತಮ್ಮ ಹುಟ್ಟುಹಬ್ಬವನ್ನು ರಾಮನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಆಚರಣೆ ಮಾಡಿಕೊಂಡರು. ಅದೂ ಕೂಡ ವಿಭಿನ್ನ ಮತ್ತು ವಿಶೇಷವಾಗಿ. ವಾಟಾಳ್ ನಾಗರಾಜ್, ಹುಟ್ಟುಹಬ್ಬದ ದಿನದಂದು ಕೇಟ್ ಕಟ್ ಮಾಡಿ, ತಮ್ಮ ಬರ್ತೇಡೆ ಆಚರಣೆ ಮಾಡಿಕೊಳ್ಳಲಿಲ್ಲ. ಬದಲಾಗಿ ಬಸ್ ನಿಲ್ದಾಣದಲ್ಲಿಯೇ ಸಾರ್ವಜನಿಕರಿಗೆ ಕಡಲೆಕಾಯಿ ಹಂಚುವ ಮೂಲಕ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡರು. ವಾಟಾಳ್ ಅಭಿಮಾನಿಗಳಿಂದ ಹೂವಿನ ಸುರಿಮಳೆ ಸುರಿಸಿ, ಪೇಟ ತೊಡಿಸಿ, ಹಾರ ಸಂಭ್ರಮಾಚರಣೆ ನಡೆಸಲಾಯಿತು.

ಅಂದಹಾಗೆ ಸೆಪ್ಟೆಂಬರ್ ಏಳರಂದು ವಾಟಾಳ್ ನಾಗರಾಜ್ ಯಾಕಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಸಾಕಷ್ಟು ಕೂತೂಹಲ ಎಲ್ಲರಲ್ಲಿದೆ. ವಾಟಾಳ್ ನಾಗರಾಜ್, 1962 ರ ಸೆಪ್ಟೆಂಬರ್ 7 ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಇದ್ದ ಅಲಂಕಾರ್ ಟಾಕೀಸ್​ಗೆ ನುಗ್ಗಿ, ಹಿಂದಿ ಚಿತ್ರ ಬೇಡ, ಕನ್ನಡ ಚಿತ್ರ ಬೇಕು ಎಂದು ಹೋರಾಟ ನಡೆಸಿದ್ದರು. ಆಗ ವಾಟಾಳ್ ನಾಗರಾಜ್ ಅವರಿಗೆ ಪೊಲೀಸರು ಬೂಟು ಕಾಲಿನ ಏಟು ಹೊಡೆದಿದ್ದರು. ಅಂದಿನಿಂದ ವಾಟಾಳ್ ನಾಗರಾಜ್, ಎಂದೂ ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಲ್ಲ. ಆದರೆ ಬೂಟು ಏಟು ಬಿದ್ದ ದಿನವನ್ನೇ ಜನ್ಮ ದಿನ ಎಂದು ಆಚರಣೆ ಮಾಡಿಕೊಂಡು ಬಂದಿದ್ದಾರೆ.

1962 ರ ಸೆಪ್ಟೆಂಬರ್ 7 ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಇದ್ದ ಅಲಂಕಾರ್ ಟಾಕೀಸ್​ಗೆ ನುಗ್ಗಿ, ಹಿಂದಿ ಚಿತ್ರಗಳ ವಿರುದ್ದ ತೀವ್ರ ಹೋರಾಟ ನಡೆಸಿದ್ದೆ. ಸ್ಕ್ರೀನ್​ಗೆ ಬೆಂಕಿ ಇಟ್ಟು ಗಲಾಟೆ ಮಾಡಿದ್ದೆ. ಹೀಗಾಗಿ ನನ್ನನ್ನು ಬಂಧಿಸಿದ್ದರು. ಅಂದು ಬೂಟ್ ಏಟು ಬಿದ್ದಿತ್ತು. ಆ ಬಳಿಕ ನನ್ನ ಜನ್ಮದಿನಾಚರಣೆ ಮಾಡಿಕೊಳ್ಳುತ್ತಿಲ್ಲ. ಆದ್ರೆ ಬೂಟು ಏಟು ಬಿದ್ದ ದಿನವನ್ನೇ ಜನ್ಮದಿನಾಚರಣೆಯನ್ನಾಗಿ ಆಚರಣೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಾಟಾಳ್ ನಾಗರಾಜ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.

ವರದಿ: ಪ್ರಶಾಂತ್ ಹುಲಿಕೆರೆ, ರಾಮನಗರ

ಇದನ್ನೂ ಓದಿ: ತಮಿಳು ನಾಮಫಲಕ ತೆಗೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಬಂಧನ

ಇದನ್ನೂ ಓದಿ: ಕಾಸರಗೋಡಿನ ಕೆಲ ಊರುಗಳ ಹೆಸರು ಮಲಯಾಳಂಗೆ.. ಪ್ರತಾಪ್ ಸಿಂಹ, ವಾಟಾಳ್ ನಾಗರಾಜ್ ಆಕ್ರೋಶ

Click on your DTH Provider to Add TV9 Kannada