ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9ಗೆ ರಮೇಶ್ ಜಾರಕಿಹೊಳಿ ಸಹೋದರ, ಅರಭಾವಿ ಬಿಜೆಪಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದು, ಈ ಸಿಡಿ ಫೇಕ್, ಇದೊಂದು ಸೃಷ್ಟಿ ಮಾಡಿರುವಂತಹ ನಕಲಿ ಸಿಡಿಯಾಗಿದೆ. ಸಿಬಿಐ ತನಿಖೆಗೆ ನೀಡುವಂತೆ ಮುಖ್ಯಮಂತ್ರಿಗೆ ಒತ್ತಾಯ ಮಾಡಿದ್ದೇನೆ. ರಮೇಶ್ ಜಾರಕಿಹೊಳಿ ತಪ್ಪು ಮಾಡಿದ್ದರೆ ಕ್ಷಮೆ ಕೇಳಬೇಕು ಮತ್ತು ರಾಜೀನಾಮೆ ನೀಡಬೇಕು ಸರಿ. ಆದರೆ ಅವರು ತಪ್ಪು ಮಾಡಿಲ್ಲ. ಹೀಗಾಗಿ ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಯುಟ್ಯೂಬ್‌ನಲ್ಲೂ ವಿಡಿಯೋ ಅಪ್‌ಲೋಡ್ ಮಾಡಿದ್ದು, ಇದು ದುಬೈ, ರಷ್ಯಾ, ಸಿಂಗಾಪುರದಿಂದ ಅಪ್‌ಲೋಡ್ ಆಗಿರುವಂತಹ ವಿಡಿಯೋ. ಹೀಗಾಗಿ ಸಿಡಿ ಬಗ್ಗೆ ಸಿಐಡಿ ಅಥವಾ ಸಿಬಿಐ ತನಿಖೆಯಾಗಲಿ. ಈ ರೀತಿ ಮಾಡಿದವರ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ. ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿಯೇ ಇದ್ದಾರೆ. ಹೈಕಮಾಂಡ್ ಭೇಟಿಗಾಗಿ ರಮೇಶ್ ದೆಹಲಿಗೆ ಹೋಗಲ್ಲ. ನಕಲಿ ಸಿಡಿಗಾಗಿ ರಾಜೀನಾಮೆ ಕೊಟ್ಟರೆ ಸಂಪುಟವೇ ಇರುವುದಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಜಾರಕಿಹೊಳಿ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ. ಕಾಣದ ಶಕ್ತಿಗಳು ನಮ್ಮ ಹಿಂದೆ ಈ ಷಡ್ಯಂತ್ರ ಮಾಡುತ್ತಿವೆ. ಇಂದು ಮಧ್ಯಾಹ್ನ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತಾರೆ. ಅಗತ್ಯಬಿದ್ದರೆ ರಮೇಶ್ ಸುದ್ದಿಗೋಷ್ಠಿ ಕೂಡ ಮಾಡುತ್ತಾರೆ. ನಾವು ರಮೇಶ್ ಜಾರಕಿಹೊಳಿ ಬೆಂಬಲವಾಗಿ ನಿಲ್ಲುತ್ತೇವೆ. ಬಿಜೆಪಿಯ ಎಲ್ಲ ಶಾಸಕರು ರಮೇಶ್‌ಗೆ ಬೆಂಬಲವಾಗಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಈ ನಕಲಿ ವಿಡಿಯೋ ವಿಚಾರವಾಗಿ ನಾವು ಸುಮ್ಮನ್ನೆ ಕುಳಿತರೆ ಆಗುವುದಿಲ್ಲ, ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ.
ದಿನೇಶ್ ಕಲ್ಲಹಳ್ಳಿಗೆ ಕಬ್ಬನ್‌ಪಾರ್ಕ್ ಪೊಲೀಸರಿಂದ ನೋಟಿಸ್:
ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿಗೆ ಕಬ್ಬನ್‌ಪಾರ್ಕ್ ಪೊಲೀಸರಿಂದ ನೋಟಿಸ್ ನೀಡಲಾಗಿದ್ದು, ಇಂದು ಠಾಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಕೋರಿ ನೋಟಿಸ್ ನೀಡಲಾಗಿದೆ. ನಿನ್ನೆ ದಿನೇಶ್ ಕಲ್ಲಳ್ಳಿ ದೂರು ನೀಡುವಾಗ ಅಪೂರ್ಣ ಮಾಹಿತಿ ನೀಡಿದ್ದು, ತನಿಖೆಗೆ ಮತ್ತಷ್ಟು ಮಾಹಿತಿ ಬೇಕಾಗಿರುವ ಹಿನ್ನೆಲೆಯಲ್ಲಿ ಕಬ್ಬನ್‌ಪಾರ್ಕ್ ಇನ್ಸ್ಪೆಕ್ಟರ್ ನೋಟಿಸ್ ನೀಡಿದ್ದಾರೆ.
ಸಂತ್ರಸ್ತೆಯ ಬಗ್ಗೆ ಮಾಹಿತಿ ನೀಡದ ದಿನೇಶ್ ಕಲ್ಲಳ್ಳಿ, ಸಂತ್ರಸ್ತೆಯ ಸಂಬಂಧಿ, ಸ್ನೇಹಿತರ ಮೂಲಕ ಈ ಬಗ್ಗೆ ಮಾಹಿತಿ ಬಂದಿದೆ ಎಂದು ತಿಳಿಸಿದ್ದರು. ಆದರೆ ಸ್ನೇಹಿತನ ಹೆಸರು ತಿಳಿಸಿರಲಿಲ್ಲ. ಹೀಗಾಗಿ ಸಂತ್ರಸ್ತೆ ಬಗ್ಗೆ ಹಾಗೂ ಸಿಡಿ ಬಗ್ಗೆ ಮತ್ತಷ್ಟು ಸ್ಪಷ್ಟವಾದ ಮಾಹಿತಿ ತಿಳಿಸುವಂತೆ ಕೋರಿ ದಿನೇಶ್ ಕಲ್ಲಳ್ಳಿಗೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಸ್ಫೋಟ; ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ