ಉಡುಪಿಯಲ್ಲೊಂದು ಚಿಕ್ಕ ಪ್ರಾಣಿ ಸಂಗ್ರಹಾಲಯ: ಮಾಜಿ ಸೈನಿಕನ ಮನೆಯಲ್ಲಿದೆ ಅಪರೂಪ ತಳಿಯ ಶ್ವಾನಗಳು

| Updated By: ಸಾಧು ಶ್ರೀನಾಥ್​

Updated on: Mar 05, 2021 | 11:28 AM

ಈ ಪ್ರಾಣಿಗಳ ಲಾಲನೆ ಪಾಲನೆ ನವೀನ್ ಅವರೇ ಮಾಡುತ್ತಿದ್ದು, ಆಹಾರ ಮೆಡಿಸಿನ್ ಎಂದು ದಿನಕ್ಕೆ ಕಡಿಮೆ ಅಂದರೂ ಒಂದು ಸಾವಿರದಷ್ಟು ಖರ್ಚು ಇದೆ. ಈ ಖರ್ಚನ್ನು ನಿಭಾಯಿಸಲು ಸ್ವಂತ ಉದ್ಯಮದಿಂದ ಬಂದ ಹಣವನ್ನು ವಿನಿಯೋಗ ಮಾಡುತ್ತಿದ್ದಾರೆ.

ಉಡುಪಿಯಲ್ಲೊಂದು ಚಿಕ್ಕ ಪ್ರಾಣಿ ಸಂಗ್ರಹಾಲಯ: ಮಾಜಿ ಸೈನಿಕನ ಮನೆಯಲ್ಲಿದೆ ಅಪರೂಪ ತಳಿಯ ಶ್ವಾನಗಳು
ಅಪರೂಪ ತಳಿಯ ಶ್ವಾನಗಳನ್ನು ಸಾಕುತ್ತಿರುವ ಮಾಜಿ ಸೈನಿಕ ನವೀನ್
Follow us on

ಉಡುಪಿ: ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಶ್ವಾನ. ಹೀಗಾಗಿಯೇ ಮನುಷ್ಯರಿಗೂ ಶ್ವಾನಕ್ಕೂ ಅವಿನಾಭಾವ ಸಂಬಂಧವಿದೆ. ಶ್ವಾನದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅವುಗಳ ವಿನಯತೆ ನಿಜಕ್ಕೂ ಖುಷಿ ನೀಡುತ್ತದೆ ಎನ್ನುವ ಮಾಜಿ ಸೈನಿಕರೊಬ್ಬರು ಅಪರೂಪದಲ್ಲೇ ಅಪರೂಪದ ತಳಿಯ ಶ್ವಾನಗಳನ್ನು ತಮ್ಮ ಮನೆಯಲ್ಲಿ ಸಾಕುತ್ತಿದ್ದಾರೆ. ಮಿನಿ ಜೂನಂತೆ ತಮ್ಮ ವಸತಿಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ.

ರಾಕ್ವಾರ್, ಅಮೇರಿಕನ್ ಬುಲ್ಲಿ, ಸೈಬೀರಿಯನ್ ಹಸ್ಕಿ ಹೀಗೆ ದೈತ್ಯಾಕಾರ ಶ್ವಾನಗಳು, ಅದರಲ್ಲೂ ಅಪರೂಪದ 13 ತಳಿಯ 15 ಶ್ವಾನಗಳು ಮಾಜಿ ಸೈನಿಕರ ಮನೆಯಲ್ಲಿ ಇದೆ. ಇಷ್ಟೇ ಅಲ್ಲ ವಿವಿಧ ತಳಿಯ ‌ಬೆಕ್ಕುಗಳು, ಮೊಲ, ಪಕ್ಷಿಗಳು, ಆಮೆ, ಮೀನುಗಳು ಎಲ್ಲಾ ಇದ್ದು, ಚಿಕ್ಕ ಪ್ರಾಣಿ ಸಂಗ್ರಹಾಲವನ್ನೇ ನಿರ್ಮಿಸಿದ್ದಾರೆ. ಇನ್ನು ಈ ಪ್ರಾಣಿಗಳನ್ನು ಸಾಕಿ ಸಲಹುತ್ತಿರುವವರು ಉಡುಪಿ ಕಡೇಕಾರ್ ನಿವಾಸಿ ನವೀನ್.

ಮಾಜಿ ಸೈನಿಕರಾದ ನವೀನ್ 10 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಆರೋಗ್ಯ ಸಮಸ್ಯೆ ಎದುರಾದಾಗ ಸ್ವಯಂ ನಿವೃತ್ತಿ ಪಡೆದು ಊರಿಗೆ ಮರಳಿದ್ದಾರೆ. ನವೀನ್ ನೆಮ್ಮದಿಗಾಗಿ ಕಳೆದ ಕೆಲವು ವರ್ಷಗಳಿಂದ ಶ್ವಾನ ಸಾಕುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಕೆಲವು ಶ್ವಾನಗಳನ್ನು ಹಣ ಕೊಟ್ಟು ಖರೀದಿ ಮಾಡಿದ್ದು, ಇನ್ನು ಇತರರ ಮನೆಯಲ್ಲಿ ಸಾಕಲು ಕಷ್ಟವಾಗುವ ಶ್ವಾನಗಳನ್ನು ಕೂಡ ನವೀನ್ ತಂದು ಸಾಕುತ್ತಿದ್ದಾರೆ.

ನವೀನ್ ಮನೆಯಲ್ಲಿರುವ ಶ್ವಾನದ ಚಿತ್ರಣ

ಈ ಪ್ರಾಣಿಗಳ ಲಾಲನೆ ಪಾಲನೆ ನವೀನ್ ಅವರೇ ಮಾಡುತ್ತಿದ್ದು, ಆಹಾರ ಮೆಡಿಸಿನ್ ಎಂದು ದಿನಕ್ಕೆ ಕಡಿಮೆ ಅಂದರೂ ಒಂದು ಸಾವಿರದಷ್ಟು ಖರ್ಚು ಇದೆ. ಈ ಖರ್ಚನ್ನು ನಿಭಾಯಿಸಲು ಸ್ವಂತ ಉದ್ಯಮದಿಂದ ಬಂದ ಹಣವನ್ನು ವಿನಿಯೋಗ ಮಾಡುತ್ತಿದ್ದಾರೆ. ನವೀನ್ ಅವರ ಈ ವಿಶೇಷ ಹವ್ಯಾಸಕ್ಕೆ ಕುಟುಂಬದವರು ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ.

ನವೀನ್ ಪಾಲನೆಯಲ್ಲಿರುವ ಬೆಕ್ಕುಗಳು

ಮನೆಗೆ ಹೊಂದಿಕೊಳ್ಳುವ ನಾಯಿಗಳನ್ನು ತನ್ನಿ. ಯಾವುದೇ ನಾಯಿಗಳ ಬಗ್ಗೆ ತಿಳಿಯದೇ ಅದನ್ನು ಮನೆಗೆ ತೆಗೆದುಕೊಂಡು ಬರಬೇಡಿ, ಹೀಗೆ ತಂದ ನಾಯಿಗಳನ್ನು ಹೊಂದಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಬೀದಿ ಬದಿಯಲ್ಲಿ ಬಿಟ್ಟುಹೋಗುವ ಸನ್ನಿವೇಶಗಳು ಸಾಕಷ್ಟು ಇವೆ. ಈ ರೀತಿ ಮಾಡುವ ಬದಲು ಮೊದಲೇ ತಿಳಿಯುವುದು ಮುಖ್ಯ. ನಾಯಿಗಳನ್ನು ಪ್ರೀತಿಯಿಂದ ಸಾಕಿ, ಮಕ್ಕಳಿಗೆ ಮೊಬೈಲ್ ಕೊಡುವ ಬದಲು ನಾಯಿಗಳನ್ನು ಕೊಟ್ಟು ನೋಡಿ ಒಳ್ಳೆಯ ಗುಣಗಳನ್ನು ಬೆಳೆಸಲು ಇದು ಸಹಾಯಕವಾಗುತ್ತದೆ ಎಂದು ಮಾಜಿ ಸೈನಿಕ ನವೀನ್ ಹೇಳಿದ್ದಾರೆ.

ಮಾಜಿ ಸೈನಿಕರ ಮನೆಯಲ್ಲಿರುವ ಪಕ್ಷಿಗಳು

ಅಪರೂಪವಾದ ಶ್ವಾನಗಳು ಮತ್ತು ಇನ್ನಿತರ ಪ್ರಾಣಿಗಳನ್ನು ಒಂದೇ ಕಡೇ ನೋಡಲು ಮಾಜಿ ಸೈನಿಕ ಅವಕಾಶ ಮಾಡಿಕೊಟ್ಟಿದ್ದು, ಉಡುಪಿ ಜಿಲ್ಲೆಯ ಅಕ್ಕಪಕ್ಕದಿಂದ ನವೀನ್ ಮನೆಗೆ ಈ ಮಿನಿ ಪ್ರಾಣಿ ಸಂಗ್ರಹಾಲಯವನ್ನು ನೋಡಲು ಆಗಮಿಸುತ್ತಾರೆ. ಎಲ್ಲವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ನವೀನ್, ಶ್ವಾನ ಖರೀದಿ ಮಾಡುವ ಇತರರಿಗೂ ಕೂಡ ಉತ್ತಮ ಸಲಹೆಗಳನ್ನು ನೀಡುತ್ತಾರೆ.

ಅಪರೂಪ ತಳಿಯ ಶ್ವಾನ

ಮಾಜಿ ಸೈನಿಕ ನವೀನ್ ಮನೆಯಲ್ಲಿರುವ ಶ್ವಾನ

ಇದನ್ನೂ ಓದಿ: ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿ ಮರೀಚಿಕೆ.. ಪ್ರಾಣಿಗಳು ಸಂಕಷ್ಟದಲ್ಲಿ..