ಹಾಲು ಖರೀದಿ ದರ ಕಡಿತ: ಕೋಲಾರದಲ್ಲಿ ಭುಗಿಲೆದ್ದ ರೈತರ ಆಕ್ರೋಶ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 05, 2024 | 6:33 PM

ಹಾಲು ದರ ಇಳಿಕೆ ಮಾಡಿರುವುದು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತಂದು ಮನುಷ್ಯರಿಂದ ಹಿಡಿದು ಪಶುಗಳ ಆಹಾರದವರೆಗೆ ಎಲ್ಲಾ ದರಗಳನ್ನು ಏರಿಕೆ ಮಾಡಿದೆ. ಈಗ ರೈತರಿಗೆ ಕೊಡುವ ದವರನ್ನು ಕಡಿಮೆ ಮಾಡುವ ಮೂಲಕ ಸರ್ಕಾರ ತಮ್ಮ ರೈತ ವಿರೋಧಿ ಧೋರಣೆ ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಲು ಖರೀದಿ ದರ ಕಡಿತ: ಕೋಲಾರದಲ್ಲಿ ಭುಗಿಲೆದ್ದ ರೈತರ ಆಕ್ರೋಶ
ಹಾಲು ಖರೀದಿ ದರ ಕಡಿತ: ಕೋಲಾರದಲ್ಲಿ ಭುಗಿಲೆದ್ದ ರೈತರ ಆಕ್ರೋಶ
Follow us on

ಕೋಲಾರ, ಜುಲೈ 05: ಕಳೆದೊಂದು ವಾರದ ಹಿಂದಷ್ಟೇ ನಂದಿನ ಹಾಲಿನ (Milk) ಮಾರಾಟ ದರ ಹೆಚ್ಚಿಗೆ ಮಾಡಿದ್ದ ಸರ್ಕಾರದ ಕ್ರಮದ ಬೆನ್ನಲ್ಲೇ, ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ ಎರಡು ರೂ. ಕಡಿತ ಮಾಡಿದೆ. ಇದು ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದ್ದು ಒಕ್ಕೂಟದ ಕ್ರಮಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಕೋಲಾರದಲ್ಲಿ (Kolar) ರೈತರ ಆಕ್ರೋಶ ಭುಗಿಲೆದ್ದಿದೆ. ಈ ಮೊದಲು ಕೋಲಾರ ಹಾಲು ಒಕ್ಕೂಟ ಹಾಲು ಉತ್ಪಾದಕರ ರೈತರಿಗೆ ಪ್ರತಿ ಲೀಟರ್ ಹಾಲಿಗೆ 33.40 ರೂ. ನೀಡುತ್ತಿತ್ತು. ಆದರೆ ಇಂದಿನಿಂದ ಒಕ್ಕೂಟ ಏಕಾಏಕಿ ಹಾಲು ಉತ್ಪಾದಕರಿಂದ ಹಾಲಿನ ಖರೀದಿ ದರವನ್ನು 2 ರೂ. ಕಡಿತ ಮಾಡಿದ್ದು 33.40 ಇದ್ದ ಹಾಲು ದರ 31.40 ರೂ. ಕುಸಿದಿದೆ.

ಗ್ಯಾರಂಟಿ ಬೇಡ ನಮ್ಮ ಶ್ರಮಕ್ಕೆ ಸರಿಯಾದ ಬೆಲೆ ಕೊಡಿ

ಹಾಲು ದರ ಇಳಿಕೆ ಮಾಡಿರುವುದು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತಂದು ಮನುಷ್ಯರಿಂದ ಹಿಡಿದು ಪಶುಗಳ ಆಹಾರದವರೆಗೆ ಎಲ್ಲಾ ದರಗಳನ್ನು ಏರಿಕೆ ಮಾಡಿದೆ. ಈಗ ರೈತರಿಗೆ ಕೊಡುವ ದವರನ್ನು ಕಡಿಮೆ ಮಾಡುವ ಮೂಲಕ ಸರ್ಕಾರ ತಮ್ಮ ರೈತ ವಿರೋಧಿ ಧೋರಣೆ ಅನುಸರಿಸಿದೆ. ಸರ್ಕಾರದ ಗ್ಯಾರಂಟಿಗಳ ಮೂಲಕ ನೀಡುವ ಹಣವೂ ಬೇಡ, ಉಚಿತ ಪ್ರವಾಸವೂ ಬೇಡ, ನಮ್ಮ ಕಷ್ಟಕ್ಕೆ ಸರಿಯಾದ ಬೆಲೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾಲು ಉತ್ಪಾದಕರಿಗೆ ಬಿಗ್ ಶಾಕ್; ಕೋಚಿಮುಲ್‌ನಿಂದ ಪ್ರತಿ ಲೀಟರ್​ಗೆ 2 ರೂಪಾಯಿ ಕಡಿತ

ಪಶು ಆಹಾರ ಬೆಲೆ ಏರಿಕೆಯಾಗಿದೆ. ಸರಿಯಾದ ಮಳೆ ಇಲ್ಲದೆ, ಬೆಳೆಇಲ್ಲದೆ ರೈತರಿಗೆ ಹಸಿರು ಮೇವು ಇಲ್ಲ, ಇತ್ತ ಪಶು ಆಹಾರ ಹಿಂಡಿ, ಬೂಸ, ಪೀಡ್ಸ್​ ಬೆಲೆ ಕೂಡ ಏರಿಕೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಈಗ ರೈತರಿಂದ ಹಾಲು ಖರೀದಿ ದರದಲ್ಲಿ ಎರಡು ರೂ. ಇಳಿಕೆ ಮಾಡಿರುವುದು ರೈತರ ತಲೆ ಮೇಲೆ ಸರ್ಕಾರ ಕಲ್ಲು ಎಳೆದಂತಾಗಿದೆ.

ಇನ್ನು ತಲೆ ಮೇಲೆ ಕಲ್ಲು ಹೊತ್ತ ರೈತ ಸಂಘದ ಕಾರ್ಯಕರ್ತರು ಹಸು, ಮೇವು, ಪಶು ಆಹಾರ, ಹಾಲಿನ ಕ್ಯಾನ್​, ಹಾಗೂ ಹಸುವಿನ ಸಗಣಿ ಗಂಜಲ ಸಹಿತ ಪ್ರತಿಭಟನೆ ಮಾಡಿ ಕೂಡಲೇ ಕೋಚಿಮುಲ್​ ತನ್ನ ಹಾಲು ಉತ್ಪಾದಕರಿಗೆ ಕಡಿಮೆ ಮಾಡಿರುವ ಖರೀದಿ ದರದ ಆದೇಶ ವಾಪಸ್ಸು ಪಡೆಯುವಂತೆ ರೈತ ಸಂಘದ ಮುಖಂಡ ನಾರಾಯಣಗೌಡ ಒತ್ತಾಯಿಸಿದ್ದಾರೆ. ಸರ್ಕಾರ ಈ ಕೂಡಲೇ ಹಾಲು ಉತ್ಪಾದಕರಿಗೆ ಕನಿಷ್ಠ 40 ರೂ. ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೋಚಿಮುಲ್​ ನಷ್ಟದಿಂದ ಪಾರಾಗಲು ದರ ಇಳಿಕೆ

ಇನ್ನು ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ ಎರಡು ರೂ. ಇಳಿಕೆ ಮಾಡಿರುವುದಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ತಮ್ಮದೇ ಆದ ಸಮಯಜಾಯಿಷಿ ನೀಡಿದೆ. ಇದು ಪ್ರತೀ ವರ್ಷದ ಸಂಪ್ರದಾಯದಂತೆ ಹಾಲಿನ ಸುಗ್ಗಿ ಕಾಲದಲ್ಲಿ ಹಾಲು ಉತ್ಪಾದಕರಿಂದ ಹಾಲಿನ ಖರೀದಿ ದರ ಕಡಿಮೆ ಮಾಡಿ, ಬೇಸಿಗೆಯಲ್ಲಿ ಹಾಲಿನ ಖರೀದಿ ದರವನ್ನು ಹೆಚ್ಚಿಗೆ ಮಾಡಲಾಗುತ್ತದೆ ಹೇಳಿದೆ. ಅದರಂತೆ ಈ ಬಾರಿಯೂ ಕೂಡ ಹಾಲು ಉತ್ಪಾದಕರಿಗೆ ನೀಡುವ ಹಾಲಿನ ಖರೀದಿ ದರದಲ್ಲಿ ಎರಡು ರೂ. ಇಳಿಕೆ ಮಾಡಲಾಗಿದೆ.

ಬೇಸಿಗೆಯಲ್ಲಿ ಅಂದರೆ ಮೇ ತಿಂಗಳವರೆಗೂ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಪ್ರತಿನಿತ್ಯ 9.65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಆದರೆ ಜೂನ್ ತಿಂಗಳಿನಿಂದ ಪ್ರತಿ ದಿನ ಕೋಚಿಮುಲ್ ನಲ್ಲಿ ಸುಮಾರು 12.37 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಿಂದ ಸರಾಸರಿ ಎರಡುವರೆ ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದೆ. ಸದ್ಯ ಒಕ್ಕೂಟದಲ್ಲಿ ಹತ್ತು ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು, ಉಳಿದ ಎರಡುವರೆ ಲಕ್ಷ ಲೀಟರ್ ಹಾಲು ಮಾರಾಟವಾಗದೆ.

ಇದನ್ನೂ ಓದಿ: Nandini Milk Price Hike: ನಂದಿನಿ ಹಾಲಿನ ದರ ಹೆಚ್ಚಳ; ಕೆಎಂಎಫ್​ನಿಂದ ಬೆಲೆ ಏರಿಕೆ ಬರೆ

ಹಾಲಿನ ಪೌಡರ್ ಸೇರಿದಂತೆ ಬೇರೆ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಒಕ್ಕೂಟಕ್ಕೆ ನಷ್ಟವಾಗುತ್ತಿದೆ. ಇದರಿಂದ ಕೋಲಾರ ಹಾಲು ಒಕ್ಕೂಟಕ್ಕೆ ಪ್ರತಿ ತಿಂಗಳು 6 ರಿಂದ 7 ಕೋಟಿ ರೂ. ನಷ್ಟವಾಗುತ್ತಿದೆ. ಹಾಗಾಗಿ ನಷ್ಟದ ಸುಳಿಗೆ ಸಿಲುಕೋದನ್ನು ತಪ್ಪಿಸಿಕೊಳ್ಳಲು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಮುಂದಾಗಿದೆ ಅನ್ನೋದು ಒಕ್ಕೂಟದ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಮಾತಾಗಿದೆ.

ಕೋಚಿಮುಲ್​ ಹಾಲು ಉತ್ಪಾದಕರಿಗೆ ಗಾಯದ ಮೇಲೆ ಬರೆ ಎಳೆಯುವ ನಿರ್ಧಾರದ ಮೂಲಕ ರೈತರ ಹಾಗೂ ಹಾಲು ಉತ್ಪಾದಕರ ಕೆಂಗಣ್ಣಿಗೆ ಗುರಿಯಾಗಿದ್ದು, ರಾಜ್ಯದ ಸರ್ಕಾರ ಮಹಿಳೆಯರಿಗೆ ಗ್ಯಾರಂಟಿಗಳ ಮೂಲಕ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಅನ್ನೋದು ಹಾಲು ಉತ್ಪಾದಕರ ಆಕ್ರೋಶವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.