ಬೆಂಗಳೂರು, ಜುಲೈ 05: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ (Valmiki Development Corporation scam) ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಮತ್ತು ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ಗೆ ವಿಶೇಷ ತನಿಖಾ ತಂಡದಿಂದ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಎಸ್ಐಟಿಯಿಂದ ನೋಟಿಸ್ ನೀಡಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮತ್ತು ಹಗರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆ ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದರು.
ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಬಳಿಕ ಕೂಡ ಎಸ್ಐಟಿ ಅಧಿಕಾರಿಗಳಿಂದ ಯಾವುದೇ ವಿಚಾರಣೆ ಮಾಡಿರಲಿಲ್ಲ. ಈ ಬಗ್ಗೆ ಬಿಜೆಪಿ ಯಾಕೆ ಅವರನ್ನು ವಿಚಾರಣೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮೊದಲ ಬಾರಿಗೆ ಮಾಜಿ ಸಚಿವ ನಾಗೇಂದ್ರಗೆ ಎಸ್ಐಟಿ ನೋಟಿಸ್ ನೀಡಿದು, ತನಿಖೆಗೆ ಹಾಜರಾಗುವಂತೆ ತಿಳಿಸಿದೆ. ಸದ್ಯ ನಾಗೇಂದ್ರಗೆ ಢವಢವ ಶುರುವಾಗಿದೆ.
ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆ ಚುರುಕುಗೊಂಡಿದೆ. ಒಂದು ಕಡೆ ಎಸ್ಐಟಿ ತನಿಖೆ ನಡೆಸುತ್ತಿದ್ದರೆ ಮತ್ತೊಂದು ಕಡೆ ಸಿಬಿಐ ಕೂಡ ಚಾರ್ಜ್ ತೆಗೆದುಕೊಂಡು ತನಿಖೆ ಕೈಗೆತ್ತಿಕೊಂಡಿತ್ತು. ಈಗಾಗಲೇ ಎಸ್ಐಟಿ ಅಧಿಕಾರಿಗಳು ಹಲವರನ್ನ ಬಂಧಿಸಿ ವಿಚಾರಣೆ ನಡೆಸಿದ್ದು ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಎಸ್ಟಿ ನಿಗಮದ ಹಗರಣ: ಚಂದ್ರಶೇಖರ್ ಆತ್ಮಹತ್ಯೆಯಿಂದ ನಾಗೇಂದ್ರ ರಾಜೀನಾಮೆ ತನಕ ಏನೇನು ಆಯ್ತು? ಇಲ್ಲಿದೆ ವರದಿ
ಈ ಮಧ್ಯೆ ಕಾಂಗ್ರೆಸ್ ಶಾಸಕ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಇತ್ತೀಚೆಗೆ ರಾಯಚೂರಿನಲ್ಲಿ ಬೆಚ್ಚಿ ಬೀಳಿಸುವ ಸಂಗತಿ ಬಾಯ್ಬಿಟ್ಟಿದ್ದರು. ಈ ಹಗರಣದಲ್ಲಿ ಅಂತರರಾಜ್ಯ ಜಾಲಗಳಿವೆ ಎಂಬ ಬಗ್ಗೆ ಮಾಹಿತಿ ನೀಡುವ ಮೂಲಕ ಪ್ರಕರಣಕ್ಕೆ ಮತ್ತೊಂದು ಆಯಾಮ ನೀಡಿದ್ದರು. ಸಿಬಿಐ ಹಾಗೂ ಎಸ್ಐಟಿ ಜಿತೆ ಇಡಿ ಕೂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ದದ್ದಲ್ ಹೇಳಿದ್ದರು. ಇದೆಲ್ಲಾ ವಿಚಾರವಾಗಿ ಸದ್ಯ ಇವರಿಗೂ ವಿಶೇಷ ತನಿಖಾ ತಂಡದಿಂದ ನೋಟಿಸ್ ನೀಡಿದ್ದು ತಖಿಗೆ ಹಾಜರಾಗುವಂತೆ ತಿಳಿಸಿದೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಿಗಮದ 10 ವರ್ಷದ ಆಯವ್ಯಯ ನೀಡುವಂತೆ ಸರ್ಕಾರಕ್ಕೆ ಪತ್ರ
ಇನ್ನು ಪ್ರಕರಣದಲ್ಲಿ ಪ್ರಭಾವಿಗಳನ್ನ ರಕ್ಷಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ದದ್ದಲ್ ಸ್ಪಷ್ಟನೆ ನೀಡಿದ್ದು, ಇದರಲ್ಲಿ ಯಾರೂ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಯಾರನ್ನೂ, ಮಂತ್ರಿಗಳು, ಅಧ್ಯಕ್ಷರನ್ನ ರಕ್ಷಣೆ ಮಾಡಲು ಸಾಧ್ಯವಿಲ್ಲ. ಸತ್ಯವನ್ನು ತನಿಖಾ ಸಂಸ್ಥೆಗಳು ಹೊರ ತರುತ್ತಾರೆ. ತನಿಖೆ ಬಳಿಕ ತಪ್ಪು ಮಾಡಿರುವ ಬಗ್ಗೆ ಎಲ್ಲರಿಗೂ ಗೊತ್ತಾಗತ್ತೆ ಎಂದು ಹೇಳಿದ್ದರು.
ವರದಿ: ಪ್ರಜ್ವಲ್ ಕ್ರೈಂ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.