ಎಸ್ಟಿ ನಿಗಮದ ಹಗರಣ: ಚಂದ್ರಶೇಖರ್ ಆತ್ಮಹತ್ಯೆಯಿಂದ ನಾಗೇಂದ್ರ ರಾಜೀನಾಮೆ ತನಕ ಏನೇನು ಆಯ್ತು? ಇಲ್ಲಿದೆ ವರದಿ
ರಾಜ್ಯ ವಾಲ್ಮೀಕಿ ನಿಗಮದಲ್ಲಿ ನಡೆದ ಕೋಟ್ಯಂತರ ರೂಪಾಯಿ ಹಗರಣ ಕೇಸ್ಗೆ ಸಂಬಂಧಿಸಿದಂತೆ ಎಸ್ಐಟಿ ಅಖಾಡಕ್ಕಿಳಿದು ತನಿಖೆ ಶುರುಮಾಡಿದೆ. ಇದರ ಮೊದಲ ಭಾಗವಾಗಿ, ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ ಹಾಗೂ ಹಿರಿಯ ಅಧಿಕಾರಿ ಪರುಶುರಾಮ್ನನ್ನ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಇನ್ನು ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಹಿನ್ನಲ್ಲೆ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಕರಣದ ಸಂಪೂರ್ಣ ವರದಿ ಇಲ್ಲಿದೆ.
ಬೆಂಗಳೂರು, ಜೂನ್ 06: ಕಾಂಗ್ರೆಸ್ ಪಕ್ಷದ ಸರ್ಕಾರ ಬಂದ ಬಳಿಕ ಬೆಳಕಿಗೆ ಬಂದಿರುವ ಅತಿದೊಡ್ಡ ಹಗರಣವೆಂದರೆ ಅದು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation scam) ನಡೆದಿರುವ ಹಗರಣ. ಸುಮಾರು 187 ಕೋಟಿ ರೂ. ಗೋಲ್ ಮಾಲ್ ನಡೆದಿತ್ತು. ಇದರಿಂದ ಮನನೊಂದು ನಿಗಮದ ಅಧೀಕ್ಷಕ ಚಂದ್ರಶೇಖರ್ ಶಿವಮೊಗ್ಗದ (Shivamogga) ವಿನೋಬ ನಗರದ ಕೆಂಚಪ್ಪ ಲೇಔಟ್ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಮೇ 26ರ ಸಂಜೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೇ 27 ರಂದು ಮೃತ ಅಧೀಕ್ಷಕ ಚಂದ್ರಶೇಖರ್ ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಕ್ರಿಯೆ ಮಾಡಲಾಗಿದೆ. ಬಳಿಕ ಪ್ರಕರಣವು ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಅದನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ಸಿಐಡಿಗೆ ತನಿಖೆಗೆ ಆಗ್ರಹಿಸಿ ಹೋರಾಟಗಳನ್ನು ಮಾಡಿತ್ತು.
ಇದನ್ನೂ ಓದಿ: ಎಸ್ಟಿ ನಿಗಮದ ಹಗರಣ: ಡಿಕೆಶಿ ಸಮ್ಮುಖದಲ್ಲೇ ಸಿಎಂಗೆ ರಾಜೀನಾಮೆ ಪತ್ರ ನೀಡಿದ ನಾಗೇಂದ್ರ
ಬಳಿಕ ಮೇ. 28 ರಂದು ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ನಂತರ ತನಿಖೆ ಆರಂಭಿಸಿದ್ದ ಸಿಐಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಹಿತಿಯನ್ನು ಕಲೆಹಾಕಿದ್ದರು.
ಮೇ 29 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಡಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸೇರಿದಂತೆ ಹಲವರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಅಂದೇ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಮೇ 31 ರಂದು ಸಿಎಂ ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ನೀಡಲಾಗಿತ್ತು. ತನಿಖೆ ಆರಂಭಿಸಿದ್ದ ಎಸ್ಐಟಿ ಅಧಿಕಾರಿಗಳು ಅಭಿವೃದ್ಧಿ ನಿಗಮದ ಎಂಡಿ ಪದ್ಮನಾಭ ಮತ್ತು ಅಕೌಂಟೆಂಟ್ ಪರುಶುರಾಮ್ರನ್ನು ಅರೆಸ್ಟ್ ಮಾಡಿತ್ತು.
ಅಧೀಕ್ಷಕ ಚಂದ್ರಶೇಖರ್ ಬರೆದಿಟ್ಟ ಡೆತ್ ನೋಟ್ಲ್ಲಿ ಸಚಿವರ ಹೆಸರು ಉಲ್ಲೇಖ ಹಿನ್ನಲ್ಲೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಬಿಜೆಪಿ ಎಂದು ಆಗ್ರಹಿಸಿತ್ತು. ಇನ್ನು ಹಗರಣದಲ್ಲಿ ಸಚಿವ ನಾಗೇಂದ್ರ ಹೆಸರು ಕೂಡ ಕೇಳಿಬಂದಿತ್ತು.
ಇದನ್ನೂ ಓದಿ: ಬಿ ನಾಗೇಂದ್ರ ಹಿಸ್ಟರಿ: ಒಂದೇ ವರ್ಷದಲ್ಲಿ ಸಚಿವ ಸ್ಥಾನ ಕಳೆದಕೊಂಡ ನಾಗೇಂದ್ರ ಬಗ್ಗೆ ಒಂದಿಷ್ಟು ತಿಳಿಯಿರಿ
ನಿಗಮದಲ್ಲಿ ಅವ್ಯವಹಾರದಲ್ಲಿ ಸಚಿವ ನಾಗೇಂದ್ರ ಹೆಸರು ಕೇಳಿಬರುತ್ತಿದ್ದಂತೆ ಬಿಜೆಪಿ ಅವರ ರಾಜೀನಾಮೆಗೆ ಆಗ್ರಹಿಸಿತ್ತು. ಅದರಂತೆ ಜೂನ್ 06ರಂದು ಸಚಿವ ನಾಗೇಂದ್ರ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಮಾರ್ಚ್ ತಿಂಗಳಲ್ಲಿ ಯುನಿಯನ್ ಬ್ಯಾಂಕ್ ಅಕೌಂಟ್ನಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಲ್ಲಿ ಇದ್ದ 187.33 ಕೋಟಿ ರೂ. ಹಣದ ಪೈಕಿ ಮೇ 22 ರಲ್ಲಿ ಪರಿಶೀಲನೆ ನಡೆಸಿದಾಗ 94,73,08,500 ಕೋಟಿ ರೂ. ಹಣ ಎಲ್ಲಿ ಹೋಗಿದೆ ಅನ್ನೋದೆ ಗೊತ್ತಾಗಲ್ಲಾ, ಈ ಹಂತಕ್ಕೆ ವ್ಯವಹಾರ ನಡೆದು ಹೋಗಿತ್ತು. ಅಷ್ಟರಲ್ಲಿ ಮುಖ್ಯ ಲೆಕ್ಕಾಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಮತ್ತೊಂದು ಕಡೆ ಬ್ಯಾಂಕ್ನವರದ್ದೆ ತಪ್ಪು ಅನ್ನೋವ ರೀತಿಯಲ್ಲಿಯೇ ದೂರು ನೀಡಲಾಗಿತ್ತು.
18 ಖಾತೆಗಳಿಗೆ ಸುಮಾರು 94.73 ಕೋಟಿ ರೂ. ಜಮೆ
ತನಿಖೆ ಆರಂಭಿಸಿರುವ ವಿಶೇಷ ತನಿಖಾ ತಂಡದ ಅಂದ್ರೆ ಎಸ್ಐಟಿ ಅಧಿಕಾರಿಗಳು ಹೈದರಾಬಾದ್ ಮೂಲದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಇ. ಸತ್ಯನಾರಾಯಣ್ ಎಂಬುವರನ್ನು ಮಂಗಳವಾರ ಬಂಧಿಸಿತ್ತು. ಪ್ರಕರಣದ ತನಿಖೆ ವೇಳೆ ಎಫ್ಎಫ್ಸಿಸಿಎಲ್ನ 18 ಖಾತೆಗಳಿಗೆ ಸುಮಾರು 94.73 ಕೋಟಿ ರೂ. ಜಮೆ ಆಗಿರುವ ಸಂಗತಿಯನ್ನು ಪತ್ತೆ ಹಚ್ಚಿರುವ ಎಸ್ಐಟಿ ಅಧಿಕಾರಿಗಳು ಅದರ ಅಧ್ಯಕ್ಷ ಸತ್ಯನಾರಾಯಣ್ರನ್ನು ಬಂಧಿಸಿದ್ದರು. ಹೈದರಾಬಾದ್‌ನ ಸತ್ಯನಾರಾಯಣ್ ಹಣ ಅಕ್ರಮ ವರ್ಗಾವಣೆ ಕೃತ್ಯದಲ್ಲಿ ಭಾಗಿಯಾಗಿರುವುದರ ಕುರಿತು ಪುರಾವೆಗಳು ಲಭ್ಯವಾಗಿರುವುದರಿಂದ ಬಂಧಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:01 pm, Thu, 6 June 24