‘ಪಠ್ಯ ಪುಸ್ತಕ ವಿವಾದ’ದ ಜನಾಭಿಪ್ರಾಯ: ಯಾರು ಏನು ಹೇಳಿದರು? ಇಲ್ಲಿವೆ ಅಭಿಪ್ರಾಯಗಳು

| Updated By: Rakesh Nayak Manchi

Updated on: Jun 03, 2022 | 9:00 AM

ಟಿವಿ9 ಕನ್ನಡವು ಪಠ್ಯ ಪುಸ್ತಕ ವಿವಾದದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಳ್ಳುವಂತೆ ಸೂಚಿಸಿತ್ತು. ಅದರಂತೆ ಬಂದ ಅಭಿಪ್ರಾಯಗಳ ಪೈಕಿ ಸೂಕ್ತವೆನಿಸಿದ ಕೆಲವೊಂದು ಅಭಿಪ್ರಾಯಗಳನ್ನು ಪ್ರಕಟಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ.

ಪಠ್ಯ ಪುಸ್ತಕ ವಿವಾದದ ಜನಾಭಿಪ್ರಾಯ: ಯಾರು ಏನು ಹೇಳಿದರು? ಇಲ್ಲಿವೆ ಅಭಿಪ್ರಾಯಗಳು
ಸಾಂಕೇತಿಕ ಚಿತ್ರ
Follow us on

ರಾಜ್ಯದಲ್ಲಿ ನಡೆಯುತ್ತಿರುವ ಪಠ್ಯ ಪುಸ್ತಕ (Textbook)ದ ವಿವಾದ (Controversy) ಜೋರಾಗಿಯೇ ಇದ್ದು, ರಾಜಕೀಯವಾಗಿ ಪರ ವಿರೋಧ ಚರ್ಚೆಗಳು, ಟೀಕೆಗಳು ವ್ಯಕ್ತವಾಗುತ್ತಿದೆ. ಅದಾಗ್ಯೂ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಜನ್ಸ್ ತಮ್ಮದೇ ಅಭಿಪ್ರಾಯ (Opinion)ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಂತೆ ಟಿವಿ9 ಕನ್ನಡವು ಪಠ್ಯ ಪುಸ್ತಕ ವಿವಾದದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಳ್ಳುವಂತೆ ಸೂಚಿಸಿತ್ತು. ಈ ಪೈಕಿ ಸೂಕ್ತವೆನಿಸಿದ ಕೆಲವೊಂದು ಅಭಿಪ್ರಾಯಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗುತ್ತಿದೆ. ಅವುಗಳು ಈ ಕೆಳಗಿನಂತಿವೆ.

ಇದನ್ನೂ ಓದಿ: ಬಸವೇಶ್ವರರ ಕುರಿತು ಪಠ್ಯದಲ್ಲಿ ತಪ್ಪು ಮಾಹಿತಿ ಆರೋಪ; ದೋಷ ಸರಿಪಡಿಸದಿದ್ದರೆ ಸರ್ಕಾರ ವಿರುದ್ಧ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಕೆ ಕೊಟ್ಟ ಬಸವರಾಜ ರೊಟ್ಟಿ

”ಕಲಿಯುವ ಮಕ್ಕಳಿಗೆ ಬೇಕಾಗಿರುವುದು ಬದುಕುವ ಪಂಥವೇ ಹೊರತು ಎಡಪಂಥ, ಬಲಪಂಥ ಅಲ್ಲ. ಅಷ್ಟಕ್ಕೂ ಮಕ್ಕಳಿಗೆ ಏನು ಬೇಕು ಎಂದು ನಿರ್ಧರಿಸುವವರು ಯಾರಾಗಬೇಕು? ಸುದೀರ್ಘ ಕಾಲ ಮಕ್ಕಳ ಒಡನಾಟದಲ್ಲಿದ್ದುಕೊಂಡು ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಂಡ ಪರಿಣಿತ ಶಿಕ್ಷಕರಿರಬೇಕು. ಅದನ್ನು ಬಿಟ್ಟು ಯಾವುದೋ ಹಿತಾಸಕ್ತಿಗಾಗಿ ಯಾರ್ಯಾರನ್ನೋ ಸೇರಿಸಿ ಏನನ್ನೋ ಸಿದ್ಧಪಡಿಸಿ ಮಕ್ಕಳ ಮೇಲೆ ಹೇರಲು ಪ್ರಯತ್ನಿಸಿದರೆ ಅವರ ಭವಿಷ್ಯ ಹಾಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಧ್ವಜ, ಭಾಷೆ, ಸಾಹಿತ್ಯದ ಕುರಿತು ಪೂರ್ವಾಗ್ರಹವನ್ನಿಟ್ಟುಕೊಂಡವರಿಂದ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಪೂರಕವಾದ ಪಠ್ಯವನ್ನು ನಿರೀಕ್ಷಿಸುವದಾದರೂ ಹೇಗೆ? ಈ ವರ್ಷದ ಮಟ್ಟಿಗೆ ಹಳೆಯ ಪಠ್ಯವನ್ನೇ ಮುಂದುವರೆಸಿ, ನಂತರ ಅನುಭವಿ ಶಿಕ್ಷಕರನ್ನಿಟ್ಟುಕೊಂಡು ಪಠ್ಯ ಪರಿಷ್ಕರಣೆ ಮಾಡುವುದು ಒಳಿತು”.

– ಶ್ರೀಧರ್ ನಾಯಕ್

”ಹಿರಿಯರ ಮನಸ್ಸಿನಲ್ಲಿರುವ ಕೋಮು-ದ್ವೇಷದ ಬೀಜಗಳನ್ನು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರಿಸಲು ನಡೆದಿರುವ ಒಳಸಂಚು ಇಂದು ಲೋಕದ ಮುಂದೆ ಬೆತ್ತಲಾಗಿದೆ. ಮಕ್ಕಳು ತಾವು ಓದಿದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೋ ಅಥವಾ ಬೇಡವೋ ಎಂಬ ಸಂಶಯ ಹುಟ್ಟು ಹಾಕಿರುವುದಂತು ಸುಳ್ಳಲ್ಲ. ತಮಗೆ ಇಷ್ಟವಾದುದ್ದನ್ನು ಓದಲು ಎಲ್ಲರಿಗೂ ಮುಕ್ತವಾದ ಅವಕಾಶ ಮತ್ತು ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಲಭ್ಯವಿರುವಾಗ ಶಾಲೆಯಲ್ಲಿ ಇದನ್ನೇ ಓದಬೇಕೆನ್ನುವುದು ಮೂರ್ಖತನದ ಪರಮಾವಧಿಯೇ ಸರಿ”.

– ಅನಿಲ್ ಕುಮಾರ್

ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಸಾಹಿತಿ ಎಸ್ ಎಲ್ ಭೈರಪ್ಪ ಹೇಳಿದ್ದೇನು?

”ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ಹಾಗಾಗಿ ಯಾವುದೇ ಜಾತಿ ಹಾಗೂ ಧರ್ಮದ ಆದರದ ಮೇಲೆ ಪಠ್ಯ ಪುಸ್ತಕಗಳ ರಚನೆ ಮಾಡುವುದು ಸೂಕ್ತವಲ್ಲ. ಕುವೆಂಪು ಅವರು ರಾಷ್ಟ್ರಕವಿ, ಇವರು ರಚಸಿರುವ ನಾಡಗೀತೆಗೆ ಯಾವುದೇ ಲೋಪದೋಷ ಉಂಟಾಗಬಾರದು. ಸಮಾನತೆಯ ನೇರ ದೃಷ್ಟಿಯಿಂದ ಪಠ್ಯಪುಸ್ತಕಗಳು ರಚಿಸಬೇಕು. ಶಾಲಾ ಕಾಲೇಜು ಮಕ್ಕಳಲ್ಲಿ ಜಾತಿಯ ಅಭಿಪ್ರಾಯ ಮೂಡಬಾರದು. ಲಿಂಗ ತಾರತಮ್ಯವನ್ನು ಹೋಗಲಾಡಿಸಬೇಕು. ಇಂತಹ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಪಠ್ಯಪುಸ್ತಕ ರಚನಾ ಸಮಿತಿ ಪಠ್ಯಪುಸ್ತಕಗಳನ್ನು ರಚಿಸಬೇಕೆಂದು ನನ್ನ ಮನವಿ”.

– ಪ್ರಮೋದ್ ಸಿ, ಹುಲಿಯೂರುದುರ್ಗದ ವಿದ್ಯಾರ್ಥಿ

”ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ಶಾಲೆಯಲ್ಲಿಯೇ ಕಲಿಯುವುದು ಹೆಚ್ಚು. ಶಿಕ್ಷಕರು ಪಠ್ಯ ಪುಸ್ತಕಗಳ ಅನುಸಾರವಾಗಿ ಬೋಧನೆ ಮಾಡುತ್ತಾರೆ. ಮಕ್ಕಳಲ್ಲಿ ದೇಶಾಭಿಮಾನ, ಸ್ವಾತಂತ್ರ ಹೋರಾಟಗಾರರು ಮತ್ತು ನೀತಿ ಕಥೆ ಬಗ್ಗೆ ಹೇಳುವ ಕೆಲಸ ಆಗಬೇಕಾಗಿದೆ. ಇದರಿಂದ ನೆಹರೂ ಅವರು ಹೇಳಿದ “ಇಂದಿನ ಮಕ್ಕಳು ನಾಳಿನ ಪ್ರಜೆಗಳು” ಎಂಬ ಮಾತು ಸತ್ಯವಾಗುತ್ತದೆ. ಪಠ್ಯ ಪುಸ್ತಕಗಳ ವಿಚಾರದಲ್ಲಿ ರಾಜಕೀಯ ಪಕ್ಷಗಳು ಟಿಪ್ಪು ಸುಲ್ತಾನ್, ಕುವೆಂಪು, ಬಸವಣ್ಣ ಅವರ ವಿಚಾರಗಳನ್ನು ಮುಂದಿಟ್ಟುಕೊಂಡು ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ ಉಂಟುಮಾಡುವ ಸಾಧ್ಯತೆಗಳಿವೆ. ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ದೊರತಿಲ್ಲ. ಕೂಡಲೇ ಸರ್ಕಾರ ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು”.

– ಆನಂದ್ ಜೇವೂರ್ ಕಲಬುರಗಿ, ಪತ್ರಿಕೋದ್ಯಮ ವಿದ್ಯಾರ್ಥಿ, ಆಳ್ವಾಸ್ ಕಾಲೇಜು 

ಇದನ್ನೂ ಓದಿ: ಪಠ್ಯಕ್ರಮದ ಬಗ್ಗೆ ಲೇಖನ ಬರೆದಿದ್ದ ಶಿಕ್ಷಣ ತಜ್ಞ ಡಾ.ಸುಧಾಕರ್ ಹೊಸಳ್ಳಿಗೆ ಜೀವ ಬೆದರಿಕೆ

”ಪ್ರೌಢ ಶಾಲೆ ಮತ್ತು ಪ್ರಾಥಮಿಕ ಪಠ್ಯ ಪುಸ್ತಕದ ಪರೀಷ್ಕರಣೆಗೆ ದಿನೆ ದಿನೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದಕ್ಕಾಗಿ ಕೆಲವು ಸಾಹಿತಿಗಳು ತಮ್ಮ ಉನ್ನತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಾಹಿತಿಗಳು ರಾಜೀನಾಮೆ ನೀಡುವ ಬದಲು ತಮ್ಮ ವಿಚಾರಧಾರೆಯನ್ನು ಮಂಡಿಸಬೇಕು. ಇದಕ್ಕೆ ರಾಜೀನಾಮೆ ಉತ್ತರವಲ್ಲ. ಇಷ್ಟು ದಿನ ಕುವೆಂಪು ಹಾಗೂ ಟಿಪ್ಪು ಬಗೆಗಿನ ವಿಚಾರಗಳು ಮುನ್ನಲೆಯಲ್ಲಿದ್ದವು. ಈಗ ಬಸವಣ್ಣ ಪಠ್ಯ ಕೂಡ ಚರ್ಚೆಗೆ ಗ್ರಾಸವಾಗಿದೆ. ಸಮಾಜದಲ್ಲಿ ಜಾತಿ ತಾರತಮ್ಯ ತಲೆಯೆತ್ತಿದೆ. ಈ ವಿಷಯದಿಂದ ಸ್ವಾಮಿಜಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಪಠ್ಯ ಪುಸ್ತಕದಲ್ಲಿ ಮಕ್ಕಳಿಗೆ ಇತಿಹಾಸವನ್ನು ಇತಿಹಾಸವಾಗಿ ಬೋಧಿಸಬೇಕು. ಇತಿಹಾಸವನ್ನು ತಿದ್ದಬಾರದು ಯಾವುದೇ ಇತಿಹಾಸವನ್ನು ವೈಭವೀಕರಿಸುವುದು ಅಥವಾ ಚುಟುಕುಗೊಳಿಸುವುದಕ್ಕೆ ಇದು ಕಥೆಯಲ್ಲ. ಪಠ್ಯದಲ್ಲಿ ಜೀವನ ಮೌಲ್ಯವನ್ನು ಅಳವಡಿಸಿರಬೇಕು. ವಿದ್ಯಾರ್ಥಿಗಳಿಗೆ ಸಾಧಕರ ಮೇಲೆ ಗೌರವ ಮೂಡುವ ಪಠ್ಯಕ್ರಮವನ್ನು ಅಳವಡಿಸಿ. ವಿನಾ ಕಾರಣ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಬೇಡಿ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನಿಮ್ಮ ನಡವಳಿಕೆಗಳು ತೊಡಕಾಗದಿರಲಿ”.

ಎಂ. ಎಸ್. ಉಷಾ ಪ್ರಕಾಶ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ