ಚಿಕ್ಕಬಳ್ಳಾಪುರ: ಮೂರು ತಿಂಗಳಿಂದ ನಮಗೆ ಗೌರವಧನ ಬಿಡುಗಡೆಯಾಗಿಲ್ಲ. ಜೀವನ ನಡೆಸುವುದು ಹೇಗೆ. ದಯವಿಟ್ಟು ನಮ್ಮ ಸಮಸ್ಯೆ ಪರಿಹರಿಸಿ ಎಂದು ಆಶಾ ಕಾರ್ಯಕರ್ತೆಯರು ಜಿಲ್ಲೆಯ ಮಂಚೇನಹಳ್ಳಿ ಗ್ರಾಮದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಸುಧಾಕರ್ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಫೋನ್ ಮಾಡಿ ತಕ್ಷಣ ಗೌರವಧನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ‘ವೈದ್ಯರ ನಡೆ ಹಳ್ಳಿಗಳ ನಡೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಈ ಘಟನೆ ನಡೆಯಿತು. ಕಳೆದ ಎರಡು ತಿಂಗಳಿಂದ ಕೊವಿಡ್ ನಿರ್ವಹಣೆ ಭತ್ಯೆ ಕೊಟ್ಟಿಲ್ಲ, ಮೂರು ತಿಂಗಳಿನಿಂದ ಗೌರವಧನ ಬಿಡುಗಡೆಯಾಗಿಲ್ಲ. ನಾವು ಹೇಗೆ ಬದುಕೋದು ಎಂದು ಆಶಾ ಕಾರ್ಯಕರ್ತೆಯರು ಪ್ರಶ್ನಿಸಿದರು. 24 ಗಂಟೆಯೊಳಗೆ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡಬೇಕು ಎಂದು ಸಚಿವರು ಆರೋಗ್ಯ ಇಲಾಖೆ ಆಯುಕ್ತರಿಗೆ ತಾಕೀತು ಮಾಡಿದರು.
ಪ್ರತಿ ತಿಂಗಳಿಗೆ ₹ 4 ಸಾವಿರ ಗೌರವಧನ ನೀಡಬೇಕು. ಕಳೆದ ಮೂರು ತಿಂಗಳಿಂದ ಪ್ರತಿ ಆಶಾ ಕಾರ್ಯಕರ್ತೆಯರಿಗೆ ₹ 12 ಸಾವಿರ ಬಾಕಿಯಿದೆ. ಇದನ್ನು ಪರಿಹರಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಒತ್ತಾಯಿಸಿದರು. ಈ ವೇಳೆ ಸ್ಪಷ್ಟನೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ, ಖಜಾನೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದಿಂದ ಇಂದು ಕರ್ನಾಟಕಕ್ಕೆ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದೆ.
ಒಟ್ಟು ಕೋವ್ಯಾಕ್ಸಿನ್ ಪೂರೈಕೆ: 17.8 ಲಕ್ಷ ಡೋಸ್
ಕೇಂದ್ರ ಸರ್ಕಾರದಿಂದ: 15.86 ಲಕ್ಷ ಡೋಸ್
ರಾಜ್ಯ ಸರ್ಕಾರದ ಖರೀದಿ: 1.94 ಲಕ್ಷ ಡೋಸ್
ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು.
— Dr Sudhakar K (@mla_sudhakar) May 31, 2021
ಕರ್ನಾಟಕಕ್ಕೆ ಇಂದು 1.64 ಲಕ್ಷ ಡೋಸ್ ಕೊವ್ಯಾಕ್ಸಿನ್
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸೋಮವಾರ ಒಟ್ಟು 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ. ಈವರೆಗೆ ರಾಜ್ಯಕ್ಕೆ ಒಟ್ಟು 17.8 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದೆ. ಈ ಪೈಕಿ ಕೇಂದ್ರ ಸರ್ಕಾರದಿಂದ 15.86 ಲಕ್ಷ ಡೋಸ್ ಬಂಬಿದ್ದರೆ, ರಾಜ್ಯ ಸರ್ಕಾರವು 1.94 ಲಕ್ಷ ಡೋಸ್ ಖರೀದಿಸಿದೆ. ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಬಾಕಿ ಇರುವವರಿಗೆ ಆದ್ಯತೆ ಮೇರೆಗೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
(Release Remuneration for Asha Workers Immediately Says Health Minister Dr K Minister)
ಇದನ್ನೂ ಓದಿ: ಮಕ್ಕಳ ಮೇಲೂ ಲಸಿಕೆಯ ಪ್ರಯೋಗ ನಡೆಯುತ್ತಿದೆ, ಎಲ್ಲರಿಗೂ ಲಸಿಕೆ ಸಿಗುವವರೆಗೂ ಮಾಸ್ಕ್ ಕಡ್ಡಾಯ; ಸಚಿವ ಡಾ.ಕೆ.ಸುಧಾಕರ್ ಮನವಿ
ಇದನ್ನೂ ಓದಿ: ಸ್ಟಿರಾಯ್ಡ್ ನೀಡುತ್ತಿರುವುದರಿಂದ ಬ್ಲ್ಯಾಕ್ ಫಂಗಸ್ ಹೆಚ್ಚಳ: ಆರೋಗ್ಯ ಸಚಿವ ಡಾ. ಸುಧಾಕರ್
Published On - 8:02 pm, Mon, 31 May 21