ತರೀಕೆರೆ: ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ವೈದ್ಯರು ಮಧ್ಯಾಹ್ನ ಊಟಕ್ಕೆಂದು ಆಸ್ಪತ್ರೆಯಿಂದ ಮನೆಗೆ ಸೈಕಲ್ನಲ್ಲಿ ತೆರಳುತ್ತಿದ್ದಾಗ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಯಿತು. ಹಲ್ಲೆ ಬಳಿಕ ದುಷ್ಕರ್ಮಿಗಳು ವೈದ್ಯರನ್ನು ರಸ್ತೆ ಬದಿಗೆ ತಳ್ಳಿ ಪರಾರಿಯಾದರು.
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ವೈದ್ಯ ಡಾ.ದೀಪಕ್ ಮೇಲೆ ಲಾಂಗ್, ಮಚ್ಚುಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ವೈದ್ಯರು ಮಧ್ಯಾಹ್ನ ಊಟಕ್ಕೆಂದು ಆಸ್ಪತ್ರೆಯಿಂದ ಮನೆಗೆ ಸೈಕಲ್ನಲ್ಲಿ ತೆರಳುತ್ತಿದ್ದಾಗ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಯಿತು. ಹಲ್ಲೆ ಬಳಿಕ ರಸ್ತೆ ಬದಿಗೆ ತಳ್ಳಿ ಪರಾರಿಯಾದರು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಿದ್ದ ಡಾ.ದೀಪಕ್ ಅವರನ್ನು ಸ್ಥಳೀಯರು ರಕ್ಷಿಸಿದರು. ಪ್ರಸ್ತುತ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಲಾಕ್ಡೌನ್ ಮಾರ್ಗಸೂಚಿ ಪರಿಷ್ಕರಣೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಾಕ್ಡೌನ್ ಮಾರ್ಗಸೂಚಿ ಪರಿಷ್ಕರಿಸಲಾಗಿದೆ. ಹೊಸ ಮಾರ್ಗಸೂಚಿಯು ನಾಳೆ (ಜೂನ್ 1) ಬೆಳಿಗ್ಗೆ 6ರಿಂದ ಜಾರಿಗೆ ಬರಲಿದೆ. ಜೂನ್ 6ರವರೆಗೆ ಹೊಸ ಮಾರ್ಗಸೂಚಿ ಜಾರಿಯಲ್ಲಿರುತ್ತದೆ. ಹೊಸ ಮಾರ್ಗಸೂಚಿಯ ಪ್ರಕಾರ ದಿನಸಿ ಅಂಗಡಿ, ಮೀನು-ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮದ್ಯದ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಮದ್ಯದಂಗಡಿಗಳು ಬಂದ್ ಆಗಿದ್ದವು. ಬೆಳಗ್ಗೆ 6ರಿಂದ 10 ಗಂಟೆಯವರೆಗೂ ವ್ಯಾಪಾರಕ್ಕೆ ಅವಕಾಶವಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ತಳ್ಳುವ ಗಾಡಿಯಲ್ಲಿ ಹಣ್ಣು-ತರಕಾರಿ ಮಾರಾಟಕ್ಕೆ ಅವಕಾಶವಿದೆ.
ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಚಿಕ್ಕಮಗಳೂರು ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು, ಸಂಬಂಧಿಕರು, ಸೋಂಕಿನಿಂದ ಮೃತಪಟ್ಟವರ ದೇಹ ಒಂದೇ ವಾರ್ಡ್‌ನಲ್ಲಿ ಇದೆ. ಪಕ್ಕದ ಬೆಡ್‌ನಲ್ಲಿಯೇ ಶವವಿದ್ದರೂ ಊಟ, ಉಪಾಹಾರ ಮಾಡುವ ಅಸಹಾಯಕ ಸ್ಥಿತಿಯಲ್ಲಿ ಸೋಂಕಿತರು ಇದ್ದಾರೆ. ಸೋಂಕಿತರನ್ನು ನೋಡಲೆಂದು ಬರುವ ಸಂಬಂಧಿರನ್ನು ತಡೆಯಲು ಯಾರೂ ಮುಂದಾಗುತ್ತಿಲ್ಲ. ಪಿಪಿಇ ಕಿಟ್ ಧರಿಸದೆ ಸಂಬಂಧಿಗಳು ಸೋಂಕಿತರನ್ನು ಭೇಟಿಯಾಗುತ್ತಿದ್ದಾರೆ. ಜಿಲ್ಲಾ ಕೊವಿಡ್ ಆಸ್ಪತ್ರೆಯ ಅವ್ಯವಸ್ಥೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
(Attack on Private Doctor in Tarikere Change in Lockdown Rules in Chikmagalur)
ಇದನ್ನೂ ಓದಿ: ಚಿಕ್ಕಮಗಳೂರು ರೈತರಲ್ಲಿ ಆತಂಕ; ಲಾಕ್ಡೌನ್ ಹಿನ್ನೆಲೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲು
ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಹೋದ 128 ಜನರಿಗೆ ಕೊರೊನಾ ಪಾಸಿಟಿವಿ; ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿದ ಆತಂಕ