Waqf Property Dispute: ಕರ್ನಾಟಕದಲ್ಲಿ ಕಂದಾಯ ಭೂಮಿ, ದಟ್ಟಾರಣ್ಯ ಕೂಡ ವಕ್ಫ್ ಆಸ್ತಿ, ಹುರುಳಿಲ್ಲದ ಸರಕಾರದ ವಾದ

| Updated By: Ganapathi Sharma

Updated on: Nov 08, 2024 | 12:52 PM

ಕರ್ನಾಟಕ ವಕ್ಫ್ ವಿವಾದ: ವಕ್ಫ್ ಆಸ್ತಿ ಕಾಯಿದೆ ತಿದ್ದುಪಡಿ ವಿವಾದ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲಿ, ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿ ಮೀಸಲು ಅರಣ್ಯವನ್ನು ಮತ್ತು ಕಂದಾಯ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.

Waqf Property Dispute: ಕರ್ನಾಟಕದಲ್ಲಿ ಕಂದಾಯ ಭೂಮಿ, ದಟ್ಟಾರಣ್ಯ ಕೂಡ ವಕ್ಫ್ ಆಸ್ತಿ, ಹುರುಳಿಲ್ಲದ ಸರಕಾರದ ವಾದ
ಸರ್ಕಾರಿ ಕಂದಾಯ ಭೂಮಿ ಸರ್ವೆ ನಂಬರ್ 12ರಲ್ಲಿ ವಕ್ಫ್ ಹೊಂದಿರುವ ಆಸ್ತಿ
Follow us on

ಬೆಂಗಳೂರು, ನವೆಂಬರ್ 8: ವಕ್ಫ್ ಆಸ್ತಿ ಕಾಯಿದೆಗೆ ಎನ್​​ಡಿಎ ಸರಕಾರ ತಿದ್ದುಪಡಿ ತರುವ ಮೊದಲೇ ಕರ್ನಾಟಕದಲ್ಲಿನ ವಕ್ಫ್ ಆಸ್ತಿಯೆಲ್ಲವನ್ನೂ ವಕ್ಫ್ ಬೋರ್ಡ್ ಕಬ್ಜಾಗೆ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ರೈತರಿಗೆ ನೋಟಿಸ್​ಗಳನ್ನು ನೀಡಲಾಗಿದೆ. ಹೀಗೆ ನೋಟಿಸ್​ ಕೊಡಿಸುವಂತೆ ಮಾಡಿ ಮಂಗಳಾರತಿ ಮಾಡಿಸಿಕೊಂಡ ವಕ್ಫ್ ಮಂತ್ರಿ ಜಮೀರ್ ಅಹ್ಮದ್ ಖಾನ್ ಅವರ ನಡೆ ಚರ್ಚೆಯಲ್ಲಿರುವಾಗಲೇ, ಈಗ ಮತ್ತೊಂದು ವಿವಾದ ಮುನ್ನಲೆಗೆ ಬಂದಿದೆ. ಮೀಸಲು ಅರಣ್ಯ (Reserved forest) ಮತ್ತು ಕಂದಾಯ ಭೂಮಿಯನ್ನು (Revenue land) ಪಡೆದು ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿರುವ ವಕ್ಫ್ ಬೋರ್ಡ್​​ನ ನಡೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ವಿವಾದ ಏನು?

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಸಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಮಲೆನಾಡಿನ ಅಮೂಲ್ಯ ದಟ್ಟ ಅರಣ್ಯಕ್ಕೆ ಸೇರಿದ ಪ್ರದೇಶವನ್ನು ವಕ್ಫ್ ಬೋರ್ಡ್ ವಶ ಮಾಡಿಕೊಂಡಿರುವ ಘಟನೆಯೇ ಈ ವಿವಾದಕ್ಕೆ ಮೂಲ ಕಾರಣ.

ದಟ್ಟ ಅರಣ್ಯಕ್ಕೆ ಸೇರಿದ (ಸರ್ವೆ ನಂಬರ್ 40) ವಕ್ಫ್ ವಶಪಡಿಸಿಕೊಂಡಿರುವ ಜಾಗ

ಶಿರಸಿ -ಹಾವೇರಿ ರಾಷ್ಟ್ರೀಯ ಹೆದ್ದಾರಿಯ (766,E) ಒಂದು ಪಕ್ಕದಲ್ಲಿ ಸರ್ಕಾರಿ ಕಂದಾಯ ಭೂಮಿ ಸರ್ವೆ ನಂಬರ್ 12ರಲ್ಲಿ ಸುಮಾರು ಐದು ಎಕರೆ ಪ್ರದೇಶವನ್ನು ಅದು ಮೊದಲು ತನ್ನದಾಗಿಸಿಕೊಂಡಿತ್ತು. ಸ್ಥಳೀಯ ಗ್ರಾಮ ಪಂಚಾಯತಿ ಮೂಲಗಳು ‘ಟಿವಿ9 ಡಿಜಿಟಲ್​’ಗೆ ನೀಡಿದ ಮಾಹಿತಿ ಪ್ರಕಾರ, ಸ್ಥಳೀಯ ಜನರಿಗೆ ಗೊತ್ತಿಲ್ಲದ ರೀತಿಯಲ್ಲಿ ಮುಗುಮ್ಮಾಗಿ ಈ ಕೆಲಸ ನಡೆದಿದೆ. ಇದು ವಕ್ಫ್ ಆಸ್ತಿಯ ವಿಚಾರದಲ್ಲಿ ಜನಜನಿತವಾಗಿರುವ ವ್ಯಾಖ್ಯೆ ತಪ್ಪು ಎಂಬುದನ್ನು ನಿರೂಪಿಸುತ್ತದೆ.

ವಕ್ಫ್ ಆಸ್ತಿ ಎಂದರೇನು?

ವಕ್ಫ್ ಆಸ್ತಿ ಎಂದರೆ, ‘ಅಲ್ಲಾ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಜನ ದಾನ ನೀಡುವುದು’ ಎಂದು ಮಾಜಿ ಮುಖ್ಯ ಚುನಾವಣಾ ಕಮೀಶನರ್ ಡಾ ಎಸ್​​ವೈ ಕುರೇಶಿ ಅವರು, ಖ್ಯಾತ ವಕೀಲ ಕಪಿಲ್ ಸಿಬಲ್ ಅವರು ನಡೆಸಿಕೊಟ್ಟ ಸಂದರ್ಶನ ಕಾರ್ಯಕ್ರಮದಲ್ಲಿ ಹೇಳಿದ್ದಿದೆ. ಇದೇ ಮಾತನ್ನು ಮುಸ್ಲಿಂ ಸಮುದಾಯದ ಹಲವಾರು ನೇತಾರರು ಪುನರುಚ್ಚರಿಸಿದ್ದಾರೆ. ಇದರ ಅರ್ಥ ಏನೆಂದರೆ, ವಕ್ಫ್ ಆಸ್ತಿ ಎಂದರೆ ದಾನಕ್ಕೆ ನೀಡಿದ್ದು. ಹಾಗಾಗಿ ಅದನ್ನು ಬೇರೆಯವರು ಕಬ್ಜಾ ಮಾಡಲು ಆಗುವುದಿಲ್ಲ. ಮತ್ತು ಬೇರೆ ಭೂಮಿಯನ್ನು ವಕ್ಫ್ ಆಸ್ತಿ ಎಂದು ಕರೆಯಲು ಆಗುವುದಿಲ್ಲ, ಎಂದ ಸಿಬಲ್ ತಮ್ಮ ವಿಡಿಯೋದಲ್ಲಿ ವಿಶ್ಲೇಷಿಸಿದ್ದಾರೆ. ಹಾಗಾದರೆ, ಶಿರಸಿ ತಾಲೂಕಿನಲ್ಲಿ ಖಾಲಿ ಇರುವ ಕಂದಾಯ ಭೂಮಿ ವಕ್ಫ್ ಆಸ್ತಿ ಹೇಗೆ ಆಗಲು ಸಾಧ್ಯ?

ವಕ್ಫ್ ವಶಪಡಿಸಿಕೊಂಡಿರುವ ಅರಣ್ಯದ ಜಾಗ

ಶಿರಸಿ ತಾಲೂಕು ಕಚೇರಿಯ ಮೂಲಗಳ ಪ್ರಕಾರ, ವಕ್ಫ್ ಬೋರ್ಡ್ ತನಗೆ ಭೂಮಿ ನೀಡಬೇಕೆಂದು ಅರ್ಜಿ ಹಾಕಿಕೊಂಡಾಗ ಯಾರೂ ತಕರಾರು ಮಾಡಿಲ್ಲ. ಹಾಗಾಗಿ ಅವರಿಗೆ ಆ ಭೂಮಿ ನೀಡಲಾಯಿತು. ಇದು ಒಂದು ಸ್ಯಾಂಪಲ್. ಇದೇ ರೀತಿ ಶಿರಸಿ ತಾಲೂಕಿನ ಬೇರೆಡೆ ಅಥವಾ ಉತ್ತರ ಕನ್ನಡ ಜಿಲ್ಲೆಯ ಬೇರೆಡೆ ಇದೇ ರೀತಿ ನಡೆದಿದೆಯೇ ಎಂಬ ವಿವರ ನೀಡಲು, ಹೆಸರು ಬಹಿರಂಗಪಡಿಸಿಲು ಇಚ್ಛಿಸದ ಅಧಿಕಾರಿ ಹಿಂಜರಿದಿದ್ದಾರೆ. ಇದರ ಅರ್ಥ ಏನೆಂದರೆ, ಮುಸ್ಲಿಂ ಸಮುದಾಯದ ಜನ ನೀಡುವ ದಾನ ಮಾತ್ರ ಅಲ್ಲ, ವಕ್ಫ್ ಬೋರ್ಡ್ ಖುದ್ದಾಗಿ ಸರಕಾರಕ್ಕೆ ಅರ್ಜಿ ಹಾಕಿ ಭೂಮಿ ತೆಗೆದುಕೊಳ್ಳಬಹುದು ಎಂದಾಗಿದೆ.

ಮೀಸಲು ಅರಣ್ಯ ವಕ್ಫ್ ಆಸ್ತಿಯಾಗುವುದು ಹೇಗೆ?

ಶಿರಸಿ ತಾಲೂಕಿನ ಇಸಳೂರಿನಲ್ಲಿ ಹಾದು ಹೋಗುವ ಹೆದ್ದಾರಿಯ ರಸ್ತೆಯ ಇನ್ನೊಂದು ಪಕ್ಕ ವ್ಯಾಪಕವಾಗಿ ಹಬ್ಬಿಕೊಂಡಿರುವ ಮಲೆನಾಡಿನ ದಟ್ಟ ಅರಣ್ಯ ಪ್ರದೇಶದಲ್ಲಿ (ಸರ್ವೆ ನಂಬರ್ 40ರಲ್ಲಿ) ಸಹ 50 ಎಕರೆಗೂ ಮಿಕ್ಕಿದ ದಟ್ಟ ಅರಣ್ಯವನ್ನು ವಕ್ಫ್ ತನ್ನದಾಗಿಸಿಕೊಂಡಿರುವುದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ. ಸಮೀಪದಲ್ಲಿ ಯಾವುದೇ ಮುಸ್ಲಿಂ ಕುಟುಂಬಗಳು ಇಲ್ಲದೇ ಹೋದರು ಸಹ, ಇಷ್ಟೊಂದು ಅಗಾಧ ಭೂಮಿಯನ್ನು, ಅದರಲ್ಲೂ ದಟ್ಟ ಅರಣ್ಯ ಪ್ರದೇಶವನ್ನು ಹೇಗೆ ನೀಡಲಾಯಿತು ಎಂಬುದನ್ನು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಇಲ್ಲಿ ಬೃಹತ್ ಕಾಂಪೌಂಡ್ ಗೋಡೆ ಕಟ್ಟಿ, ಗೇಟ್ ಅಳವಡಿಸಿ, ಬೃಹತ್ ನಾಮಫಲಕ ಹಾಕಿ, ಹಲವು ಮರಗಳನ್ನು ಕೂಡ ಕಡಿಯಲಾಗಿದೆ.

ಬೀಟೆ, ಮತ್ತಿ, ನಂದಿ, ಹೊನ್ನೆ ಇತ್ಯಾದಿ ಅನೇಕ ಅಮೂಲ್ಯ ಜಾತಿಯ ಬೃಹತ್ ಮರಗಳಿರುವ ಈ ಪ್ರದೇಶವನ್ನು ರಕ್ಷಿಸಬೇಕಿದೆ. ಏಕೆಂದರೆ, ಇದಕ್ಕೆ ಹೊಂದಿಕೊಂಡಂತೆ ಸಾವಿರಾರು ಎಕರೆ ದಟ್ಟ ಅರಣ್ಯವಿದ್ದು, ಹಲವು ವನ್ಯಪ್ರಾಣಿಗಳ ಆವಾಸಸ್ಥಾನವಾಗಿದೆ. ಈ ಅರಣ್ಯಪ್ರದೇಶ ವಕ್ಫ್ ಬೋರ್ಡ್ ಕೈಯಲ್ಲಿ ನಾಶವಾದರೆ ಸ್ಥಳೀಯ ರೈತರ ಹೊಲಗದ್ದೆಗಳಿಗೆ ಕಾಡುಪ್ರಾಣಿಗಳ ಹಾವಳಿ ಇನ್ನಷ್ಟು ಹೆಚ್ಚಾಗಲಿದೆ ಎಂಬುದು ಸ್ಥಳೀಯರ ಆತಂಕ.

ಇದನ್ನೂ ಓದಿ: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ವಕ್ಫ್ ಹೆಸರು ನಮೂದಿಸಿದ್ದಾರೆ: ಹುಬ್ಬಳ್ಳಿಯಲ್ಲಿ ಜಗದಾಂಬಿಕಾ ಪಾಲ್ ಗಂಭೀರ ಆರೋಪ

ಸರ್ವೊಚ್ಛ ನ್ಯಾಯಾಲಯ ಸಾಂವಿಧಾನಿಕ ಪೀಠದ ತೀರ್ಪಿನಲ್ಲಿ ಹೇಳಿರುವ ಅಂಶವನ್ನು ಗಮನಿಸಬೇಕು. ‘‘Once a forest, always a forest’’ ಎನ್ನುವ ತತ್ವದ ಆಧಾರದ ಮೇಲೆ ಅರಣ್ಯ ಭೂಮಿಯನ್ನು ಬೇರೆ ಯಾವ ಉದ್ದೇಶಕ್ಕೂ ಕೊಡಬಾರದು ಎನ್ನುವ ಕಾನೂನು ಇದ್ದಾಗಲೂ ಸರಕಾರ ಈ ಭೂಮಿಯನ್ನು ಹೇಗೆ ಮತ್ತು ಏಕೆ ನೀಡಿತು ಎಂದು ಪ್ರಶ್ನಿಸಿದಾಗ, ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ವಿವರ ನೀಡಲು ಹಿಂಜರಿದಿದ್ದಾರೆ. ಇದೂ ಕೂಡ ಒಂದು ಝಲಕ್. ಇದೇ ರೀತಿ, ಜನವಸತಿ ಇಲ್ಲದ ಕಡೆ ಇರುವ ಖಾಲಿ ಕಂದಾಯ ಭೂಮಿಯನ್ನು, ಹುಲ್ಲುಗಾವಲಿಗೆ ಮೀಸಲಿಟ್ಟ ಭೂಮಿ, ಕಾದಿಟ್ಟ ಅರಣ್ಯದ ಭಾಗವನ್ನು ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿದರೆ ಹೇಗೆ ಏನು? ‘ಟಿವಿ9 ಡಿಜಿಟಲ್’ ವರದಿಗಾರ ಭೇಟಿ ಕೊಟ್ಟಾಗ ಈ ವಿಚಾರ ಹಂಚಿಕೊಂಡ ಗ್ರಾಮಸ್ಥರು ಇಂದಲ್ಲ ನಾಳೆ ತಮ್ಮ ಜಮೀನಿಗೂ ಗುನ್ನಾ ಬೀಳಬಹುದು ಎಂದು ಭಯಬೀತರಾಗಿದ್ದು ಕಂಡುಬಂತು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:39 pm, Fri, 8 November 24