
ಕಲಬುರಗಿರಿ, (ಅಕ್ಟೋಬರ್ 21): ಜಿಲ್ಲೆಯ ಚಿತ್ತಾಪುರ (Chittapur)ಸಚಿವ ಪ್ರಿಯಾಂಕ್ ಖರ್ಗೆಯವರ (Priyank Kharge) ಸ್ವಕ್ಷೇತ್ರ. ಆರ್ ಎಸ್ಎಸ್(RSS)ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಣೆದ ಬಲೆ, ಇದೇ ಚಿತ್ತಾಪುರದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಬೇಕಾ ಬೇಡ್ವಾ ಎನ್ನುವ ನಿರ್ಧಾರ ಹೈಕೋರ್ಟ್ ಅಂಗಳದಲ್ಲಿದೆ. ಈ ಮಧ್ಯೆ ಕೋರ್ಟ್ ಸೂಚನೆಯಂತೆ RSS ಅನುಮತಿಗಾಗಿ ಅರ್ಜಿ ಸಲ್ಲಿದೆ. ಮತ್ತೊಂದೆಡೆ ದಲಿತ ಪರ ಸಂಘಟನೆಗಳು ಸಹ ಅಂದೆ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ಕೋರಿವೆ. ಹೀಗಾಗಿ ಚಿತ್ತಾಪುರದಲ್ಲಿ ಪಥಸಂಚಲನ ಸಂಘರ್ಷ ಶುರುವಾಗಿದೆ.
ಕಲಬುರಗಿ ಹೈಕೋರ್ಟ್ ಪೀಠದ ಸೂಚನೆ ಮೇರೆಗೆ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದೆ. ಮೊನ್ನೆ ಡಿಸಿ ಸಿಗದ ಕಾರಣಕ್ಕೆ ಇಮೇಲ್ ಹಾಗೂ ವಾಟ್ಸಾಪ್ ಮೂಲಕ ಅರ್ಜಿ ಸಲ್ಲಿಕೆಯಾಗಿತ್ತು. ಇಂದು (ಅಕ್ಟೋಬರ್ 21) ಖುದ್ದು ಡಿಸಿ ಕಚೇರಿ ತೆರಳಿ, ನವೆಂಬರ್ 2ಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡಿದ್ದು, ಸದ್ಯ ಜಿಲ್ಲಾಡಳಿತದ ಮುಂದಿನ ಆದೇಶಕ್ಕಾಗಿ RSS ಎದುರು ನೋಡುತ್ತಿದೆ. ಇನ್ನೊಂದೆಡೆ ಅಂದೇ ದಲಿತ ಸಂಘಟನೆಗಳು ಪಥಸಂಚಲನಕ್ಕೆ ಮನವಿ ಪತ್ರ ನೀಡಿದ್ದು, ತಮಗೆ ಅವಕಾಶ ಸಿಗುತ್ತೋ ಇಲ್ವೋ ಎನ್ನುವ ಆತಂಕದಲ್ಲಿ ಆರ್ಎಸ್ಎಸ್ ಮುಖಂಡರು ಇದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಚಿತ್ತಾಪುರದಲ್ಲಿ RSS ಭಾನುವಾರ ಬೃಹತ್ ಪಥಸಂಚಲನ ಮೂಲಕ, ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿತ್ತು. ಆದ್ರೆ ತಹಶೀಲ್ದಾರ್ RSS ಪಥಸಂಚಲನಕ್ಕೆ ಬ್ರೇಕ್ ಹಾಕಿದ್ರು. ರಾತ್ರೋರಾತ್ರಿ ನಗರದಲ್ಲಿ ಹಾಕಿದ್ದ ಕೇಸರಿ ಧ್ವಜ, ಭಗವಾಧ್ವಜ, ಬ್ಯಾನರ್, ಬಂಟಿಂಗ್ಸ್ಗಳನ್ನ ಪುರಸಭೆಯ ಸಿಬ್ಬಂದಿ ತೆರವು ಮಾಡಿದ್ರು. ಆ ಬಳಿಕ RSS ಹೈಕೋರ್ಟ್ ಮೆಟ್ಟಿಲೇರಿತ್ತು. ಮತ್ತೊಮ್ಮೆ ಪಥಸಂಚಲನಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿತ್ತು. ಇದೀಗ ಕೋರ್ಟ್ ಸೂಚನೆಯಂತೆ RSS 2ನೇ ಬಾರಿ ಮನವಿ ಪತ್ರ ನೀಡಿದೆ.
ಇನ್ನು ಇದಕ್ಕೆ ಕೌಂಟರ್ ಆಗಿ ಪಥಸಂಚಲನ ನಡೆಸುವುದಕ್ಕೆ ಭೀಮ್ ಆರ್ಮಿ ಸಂಘಟನೆ ಸಜ್ಜಾಗಿದೆ. ನವೆಂಬರ್ 2 ರಂದೇ ಚಿತ್ತಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಭೀಮ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದೆ. ನಾವೂ ಲಾಠಿ ಹಿಡಿದು ಜಾಥಾ ಮಾಡುತ್ತೇವೆ. ನಮ್ಗೂ ಅವಕಾಶ ಕೊಡಿ ಎಂದು ಭೀಮ್ ಆರ್ಮಿ ಭಾರತ ಏಕ್ತಾ ಮಿಷನ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
RSS ಚಟುವಟಿಕೆಗಳಿಗೆ ಕಡಿವಾಣ ಹಾಕ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ನಿಗಿನಿಗಿ ಅಂತಿದ್ದಾರೆ. RSSಗೆ ಇಂತಹ ನೂರಾರು ಖರ್ಗೆಗಳನ್ನ ಎದುರಿಸುವ ಶಕ್ತಿ ಇದೆ ಅಂತಾ ವಿಪಕ್ಷ ನಾಯಕ ಆರ್.ಅಶೋಕ್ ಗುಡುಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಲು ಯತ್ನಿಸ್ತಿದ್ದಾರೆ ಎಂದು ಜರಿದಿದ್ದಾರೆ. ಮತ್ತೊಂದೆಡೆ ಸಿಎಂ-ಡಿಸಿಎಂ ಹಗಲಲ್ಲೇ ನಾಟಕ ಮಾಡ್ತಾರೆ ಎಂದು ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ಒಟ್ಟಿನಲ್ಲಿ ರಾಜಕೀಯ ಜಟಾಪಟಿಯ ನಡುವೆ ಎಲ್ಲರ ಕಣ್ಣು ಚಿತ್ತಾಪುರದತ್ತ ನೆಟ್ಟಿದೆ. ಸೆಪ್ಟೆಂಬರ್ 24ರಂದು ಹೈಕೋರ್ಟ್ನಲ್ಲಿ ಈ ಬಗ್ಗೆ ವಿಚಾರಣೆ ನಡೆಯಲಿದ್ದು, ಅಂತಿಮವಾಗಿ ಕೋರ್ಟ್ ಏನು ಹೇಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.