24 ಗಂಟೆಗಳಲ್ಲಿ ಕೊವಿಡ್ ಆರ್​ಟಿ ಪಿಸಿಆರ್ ವರದಿ ಒದಗಿಸಿ; ರಾಜ್ಯಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಅಲ್ಲದೇ, ಪರೀಕ್ಷಾ ಮಾಹಿತಿಯನ್ನು 24 ಗಂಟೆಗಳ ಅವಧಿಯೊಳಗಾಗಿ ICMR ಪೋರ್ಟಲ್​ನಲ್ಲಿ ನಮೂದಿಸಬೇಕು ಎಂದು ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

  • TV9 Web Team
  • Published On - 21:46 PM, 21 Apr 2021
24 ಗಂಟೆಗಳಲ್ಲಿ ಕೊವಿಡ್ ಆರ್​ಟಿ ಪಿಸಿಆರ್ ವರದಿ ಒದಗಿಸಿ; ರಾಜ್ಯಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಕರ್ನಾಟಕ ಹೈಕೋರ್ಟ್​

ಬೆಂಗಳೂರು: ಕೊವಿಡ್ RT-PCR ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿದ ಬಳಿಕ ಪರೀಕ್ಷಾ ಫಲಿತಾಂಶವನ್ನು ಅತಿ ಶೀಘ್ರದಲ್ಲಿ ಪ್ರಕಟಿಸಬೇಕು. ಪರೀಕ್ಷೆಯ ವರದಿಯನ್ನು 24 ಗಂಟೆಯೊಳಗೆ ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೇ, ಪರೀಕ್ಷಾ ಮಾಹಿತಿಯನ್ನು 24 ಗಂಟೆಗಳ ಅವಧಿಯೊಳಗಾಗಿ ICMR ಪೋರ್ಟಲ್​ನಲ್ಲಿ ನಮೂದಿಸಬೇಕು ಎಂದು ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ. ಇಂದು (ಏಪ್ರಿಲ್ 21) 23,558 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 116 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 13,640 ಜನರಲ್ಲಿ ಸೋಂಕು ದೃಢಪಟ್ಟಿದ್ದು, 70 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 12,22,202ಕ್ಕೆ (12.22 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 13,762 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 10,32,233 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ 17,6,188 ಸೋಂಕಿತರು ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿಂದು ಒಂದೇ ದಿನ 13,640 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 5,83,675ಕ್ಕೆ ಏರಿಕೆಯಾಗಿದೆ. ಈ ಪೈಕಿ 4,53,398 ಜನರು ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 70 ಜನರ ಬಲಿ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 5,382 ಜನರು ಸಾವನ್ನಪ್ಪಿದ್ದಾರೆ. 1,24,894 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೇ ಮೊದಲ ವಾರದಲ್ಲಿ ಬೆಂಗಳೂರು ನಗರದಲ್ಲಿ ಸೋಂಕಿನ ಪ್ರಕರಣಗಳು ದಿನಕ್ಕೆ 20 ಸಾವಿರ ಮುಟ್ಟುವ ಸಾಧ್ಯತೆಯಿದೆ. ಶೇ 5ರಷ್ಟು ಮಂದಿಗೆ ವೆಂಟಿಲೇಟರ್ ಸಮಸ್ಯೆ ಎದುರಾಗುತ್ತದೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಒದಗಿಸುವುದೇ ದೊಡ್ಡ ಸವಾಲಾಗುತ್ತದೆ. ವೆಂಟಿಲೇಟರ್ ಸಮಸ್ಯೆಯಿಂದ ಜೀವಗಳು ಹೋಗುವ ಸಾಧ್ಯತೆ ಇದೆ ಎಂದು ಡಾ.ಗಿರಿಧರ್ ಬಾಬು ಸೋಮವಾರ ಎಚ್ಚರಿಸಿದ್ದರು. ಅವರ ಲೆಕ್ಕಾಚಾರಗಳು ನಿಜವಾಗುತ್ತಿವೆ. ಮಂಗಳವಾರ ಬೆಂಗಳೂರಿನಲ್ಲಿ 12,088 ಸೋಂಕು ಪ್ರಕರಣ ವರದಿಯಾಗಬಹುದು ಎಂದು ಅವರು ವಿಶ್ಲೇಷಿಸಿದ್ದರು. ವಾಸ್ತವದಲ್ಲಿ ಇದನ್ನೂ ಮೀರಿ ಅಂದರೆ 13,782 ಸೋಂಕು ಪ್ರಕರಣಗಳು ವರದಿಯಾಗಿದ್ದವು. ಶನಿವಾರಕ್ಕೆ (ಏಪ್ರಿಲ್ 25) ಸೋಂಕಿನ ಪ್ರಮಾಣ 18 ಸಾವಿರ ದಾಟಲಿದೆ ಎಂದು ಗಿರಿಧರ್ ಬಾಬು ವಿಶ್ಲೇಷಿಸಿದ್ದಾರೆ. ಇದು ನಿಜವಾದರೆ ಆತಂಕದ ವಿಷಯವೇ ಸರಿ.

ಕೊರೊನಾ ಸೋಂಕು ಇಷ್ಟೊಂದು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವಾಗ ಕೊವಿಡ್ ಪರೀಕ್ಷೆ ವರದಿ ಬರಲು ಹೆಚ್ಚಿನ ಕಾಲಾವಧಿ ನೀಡಿದರೆ ಸೋಂಕು ಹೆಚ್ಚಳಕ್ಕೆ ಇನ್ನಷ್ಟು ಇಂಬು ನೀಡಿದಂತಾಗುತ್ತಿತ್ತು. ಹೀಗಾಗಿ ಕೋರ್ಟ್ ನಿರ್ದೇಶನ ಮಹತ್ವ ಪಡೆದಿದೆ.

ಇದನ್ನೂ ಓದಿ: ಕೊವಿಡ್ ಇಲ್ಲದ ರೋಗಿಗಳ ಚಿಕಿತ್ಸೆಗೆ ಹೊಸ ವ್ಯವಸ್ಥೆ, ಆಕ್ಸಿಜನ್​ಗೆ ಕಾಲ್​ಸೆಂಟರ್: ಡಾ.ಕೆ.ಸುಧಾಕರ್

Covid-19 Karnataka Numbers: ದಾಖಲೆ ಬರೆದ ಕೊರೊನಾ ಸೋಂಕಿತರ ಸಂಖ್ಯೆ; ಬೆಂಗಳೂರು, ತುಮಕೂರಿನಲ್ಲಿ ತೀವ್ರ ಹೆಚ್ಚಳ

(RT PCR covid test results must given by 24 hours after collecting samples says Karnataka High Court to state govt )