ರಾಜ್ಯದಲ್ಲಿ ರೆಮ್‍ಡೆಸಿವಿರ್ ಇಂಜೆಕ್ಷನ್‍, ಆಮ್ಲಜನಕದ ಕೊರತೆಯಿಲ್ಲ; ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರಿಂದ ಸಿಎಂ ಯಡಿಯೂರಪ್ಪಗೆ ಭರವಸೆ

Covid-19 in Karnataka: ಕೊವಿಡ್ 19 ರ ಸೋಂಕಿನಿಂದ ದೃಢಪಟ್ಟು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸ್ಪತ್ರೆಯ ಕೊಠಡಿಯಿಂದಲೇ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರೊಡನೆ ವಿಡಿಯೋ ಸಂವಾದ ನಡೆಸಿದರು.

ರಾಜ್ಯದಲ್ಲಿ ರೆಮ್‍ಡೆಸಿವಿರ್ ಇಂಜೆಕ್ಷನ್‍, ಆಮ್ಲಜನಕದ ಕೊರತೆಯಿಲ್ಲ; ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರಿಂದ ಸಿಎಂ ಯಡಿಯೂರಪ್ಪಗೆ ಭರವಸೆ
ತಜ್ಞರ ಜತೆ ಸಿಎಂ ಯಡಿಯೂರಪ್ಪ ವರ್ಚುವಲ್ ಸಭೆ
Follow us
guruganesh bhat
|

Updated on:Apr 21, 2021 | 10:39 PM

ಬೆಂಗಳೂರು: ರಾಜ್ಯದಲ್ಲಿ ರೆಮ್‍ಡೆಸಿವಿರ್ ಇಂಜಕ್ಷನ್‍ನ ದಾಸ್ತಾನು ಕೊರತೆ ಇಲ್ಲ. ಇನ್ನು 15 ದಿನಗಳಲ್ಲಿ ರೆಮ್‍ಡೆಸಿವಿರ್ ಇಂಜೆಕ್ಷನ್ ದಾಸ್ತಾನು ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ರಾಜ್ಯದ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯೂ ಇಲ್ಲ. ರೆಮ್‍ಡೆಸಿವಿರ್ ಇಂಜೆಕ್ಷನ್‍ನ ದಾಸ್ತಾನು ಮಾಡುವ ನಿಟ್ಟಿನಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಲವು ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರಿಗೆ ಸ್ಪಷ್ಟಪಡಿಸಿದರು.

ಕೊವಿಡ್ 19 ರ ಸೋಂಕಿನಿಂದ ದೃಢಪಟ್ಟು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸ್ಪತ್ರೆಯ ಕೊಠಡಿಯಿಂದಲೇ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರೊಡನೆ ವಿಡಿಯೋ ಸಂವಾದ ನಡೆಸಿದರು. ದೇವರಿಗೆ ಸರಿಸಮಾನರೆಂದೇ ಪರಿಗಣಿಸುವ ವೈದ್ಯ ವೃಂದ ರಾಜ್ಯದ ಜನತೆಗೆ, ಅದರಲ್ಲೂ ವಿಶೇಷವಾಗಿ ಬಡಜನತೆಗೆ, ಸಂಕಷ್ಟದ ಈ ಕಾಲದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸೇವೆಯನ್ನು ಅತ್ಯಂತ ಪ್ರೀತಿಯಿಂದ ಒದಗಿಸಿ ವೃತ್ತಿಧರ್ಮದ ಕೀರ್ತಿ-ಗೌರವಗಳನ್ನು ಕಾಪಾಡಬೇಕು ಎಂದು ಸಿಎಂ ಯಡಿಯೂರಪ್ಪ ಈ ಸಂದರ್ಭದಲ್ಲಿ ಮನವಿ ಮಾಡಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ 750 ಹಾಸಿಗೆಗಳು ಲಭ್ಯವಿದ್ದು, ಅದರಲ್ಲಿ 66 ಹಾಸಿಗೆಗಳಿಗೆ ವೆಂಟಿಲೇಟರ್ ಸೌಲಭ್ಯ ಇದೆ. ಕ್ರಿಟಿಕಲ್ ಕೇರ್ ಯುನಿಟ್‍ನಲ್ಲಿ 50 ಹಾಸಿಗೆಗಳ ಸೌಲಭ್ಯವಿದೆ. ಟ್ರಾಮಾಕೇರ್ ಬ್ಲಾಕ್‍ನಲ್ಲಿ 300 ಹಾಸಿಗೆಗಳು ಇದ್ದು, ಐಸಿಯು ಮತ್ತು ಕ್ರಿಟಿಕಲ್ ಕೇರ್ ಯೂನಿಟ್ ಹಾಸಿಗೆಗಳೆಲ್ಲ್ಲವೂ ಭರ್ತಿಯಾಗಿವೆ. ಇಂದಿನಿಂದ ಟವರ್ ಬ್ಲಾಕ್‍ನಲ್ಲಿ ಇರುವ ಹಾಸಿಗೆಗಳನ್ನೂ ಹಂಚಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥ, ವಿಕ್ಟೋರಿಯಾ ಆಸ್ಪತ್ರೆ ನಿರ್ದೇಶಕ ಡಾ. ಜಯಂತಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಮಾಹಿತಿ ನೀಡಿದರು.

ಮೊದಲ ಅಲೆಗಿಂತ ಪ್ರಸ್ತುತದ ಎರಡನೇ ಅಲೆಯಲ್ಲಿ ಹಾಸಿಗೆಗಳ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷದ ಜೂನ್, ಜುಲೈ ತಿಂಗಳಿನಂತೆಯೇ ಈ ವರ್ಷ ಕೂಡಾ ಕೊವಿಡ್ 19 ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಾಣಿಸುತ್ತಿದೆ. ಒಂದು ದಿನಕ್ಕೆ ವಿಕ್ಟೋರಿಯಾ ಆಸ್ಪತ್ರೆಯೊಂದರಲ್ಲೇ ಸರಾಸರಿ 50 ಕೊವಿಡ್ ಸೋಂಕಿತರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದರು. ಜನರಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರ ಬಳಿ ಬಂದಲ್ಲಿ ಸೂಕ್ತ ಚಿಕಿತ್ಸೆ ಒದಗಿಸುವ ಮೂಲಕ ಸಾವಿನ ಸಂಖ್ಯೆಗಳನ್ನು ಕಡಿಮೆ ಮಾಡಬಹುದು. ಅಲ್ಲದೆ. ತಾಂತ್ರಿಕ ಸಮಿತಿ ನೀಡಿರುವ ಸಲಹೆಗಳ ಜೊತೆಯಲ್ಲಿ ಲಾಕ್‍ಡೌನ್ ಬದಲಾಗಿ ಅತೀ ಹೆಚ್ಚು ಸೋಂಕು ಕಾಣಿಸಿಕೊಂಡ ಪ್ರದೇಶಗಳನ್ನು ಮೈಕ್ರೋ ಕಂಟೈನ್‍ಮೇಂಟ್ ವಲಯಗಳನ್ನಾಗಿ ಘೋಷಿಸಿ ಜನರ ಸಂಚಾರವನ್ನು ನಿಯಂತ್ರಿಸುವ ಮೂಲಕ ಸೋಂಕು ಇತರ ಪ್ರದೇಶಗಳಿಗೆ ಹರಡದಂತೆ ತಡೆಯಬಹುದಾಗಿದೆ.

ಸಾರ್ವಜನಿಕರು ರೋಗದ ಲಕ್ಷಣ ಕಾಣಿಸಿಕೊಂಡ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಈ ಸೋಂಕು ಇತರರಿಗೆ ಹರಡದಂತೆ ತಡೆಗಟ್ಟಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಆಮ್ಲಜನಕದ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಈ ನಿಟ್ಟಿನಲ್ಲಿ ಯಾರಿಗೂ ಯಾವುದೇ ಆತಂಕ ಬೇಡ. ಇನ್ನು 15 ದಿನಗಳಲ್ಲಿ ರೆಮ್‍ಡೆಸಿವಿರ್ ಇಂಜಕ್ಷನ್ ಕೂಡಾ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಲು ಕ್ರಮ ವಹಿಸಲಾಗಿದೆ. ಸದ್ಯ ಈ ಔಷಧಿಯ ಕೊರತೆ ಇಲ್ಲ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅದೇ ಆಸ್ಪತ್ರೆಯ ಡಾ. ಶಶಿಭೂಷಣ್, ಪ್ರತಿಯೊಬ್ಬರೂ ಸಕಾಲದಲ್ಲಿ ಔಷಧಿ ಪಡೆದಲ್ಲಿ ಭವಿಷ್ಯದ ಮೂರನೇ ಅಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಹಾಗಾಗಿ, ಪ್ರತಿಯೊಬ್ಬರೂ ಚಿಕಿತ್ಸೆ ಮತ್ತು ಔಷಧಿ ಪಡೆಯಲು ಹೆಚ್ಚಿನ ಗಮನ ಹರಿಸಬೇಕು. ಮೊದಲನೇ ಅಲೆಗೂ ಎರಡನೇ ಅಲೆಗೂ ವ್ಯತ್ಯಾಸವೇನೆಂದರೆ ಎರಡನೇ ಅಲೆಯಲ್ಲಿ ವೆಂಟಿಲೇಟರ್​ನ ಬೇಡಿಕೆ ಹೆಚ್ಚಾಗಿದೆ. ಇದರಿಂದ ವೆಂಟಿಲೇಟರ್ ಕೊರತೆ ಕಾಣಿಸುತ್ತಿದೆ ಎಂದು ವಿಶ್ಲೇಷಿಸಿದರು.

ನಗರದ ಕೆ ಸಿ ಜನರಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ವೆಂಕಟೇಶಯ್ಯ ಮಾತನಾಡಿ ತಮ್ಮ ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳಿಗಾಗಿ 135 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಇತ್ತೀಚೆಗೆ ಪ್ರಾರಂಭಿಸಿರುವ ಕೊವಿಡ್ 19 ರ ತೀವ್ರ ನಿಗಾ ಘಟಕದಲ್ಲಿ ಪ್ರತಿದಿನ 20 ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ತಮ್ಮ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 13,000 ಹೆಚ್ಚು ಜನರು ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. ತಮ್ಮ ಆಸ್ಪತ್ರೆಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರು ಚಿಕಿತ್ಸೆಗಾಗಿ ದಾಖಲಾಗುತ್ತಿದ್ದಾರೆ. ಕೆಲವರು ಈಗಾಗಲೇ ಕೊವಿಡ್ ಅಲ್ಲದ ಇತರೆ ಕಾರಣಗಳಿಂದ ಅನಾರೋಗ್ಯದಿಂದ ನರಳುತ್ತಿರುವ ರೋಗಿಗಳು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.

ನಗರದ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಸೆಂಟರ್​ನನ ತಜ್ಞ ಡಾ. ಮನೋಜ್, ತಮ್ಮ ವ್ಯಾಪ್ತಿಯ ಬೌರಿಂಗ್ ಆಸ್ಪತ್ರೆ, ಚರಕ ಆಸ್ಪತ್ರೆ ಹಾಗೂ ಘೋಷಾ ಆಸ್ಪತ್ರೆಗಳಲ್ಲಿ ಕೊವಿಡ್ ಚಿಕಿತ್ಸೆಗಾಗಿ ಒಟ್ಟು 160 ಹಾಸಿಗೆಗಳು ಲಭ್ಯವಿದೆ. ಎಲ್ಲಾ ಹಾಸಿಗೆಗಳೂ ಭರ್ತಿಯಾಗಿವೆ. ಈ ಪ್ರದೇಶದಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುವ ಕಾರಣ ಹೆಚ್ಚಿನ ಸೌಲಭ್ಯಗಳನ್ನು ವಿಸ್ತರಿಸಿ ಈಗಾಗಲೇ 205 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚಿಗೆ ಪ್ರಾರಂಭಿಸಲಾಗಿರುವ ಚರಕ ಆಸ್ಪತ್ರೆಯಲ್ಲಿ ಪ್ರಾರಂಭದಲ್ಲಿ 50 ಹಾಸಿಗೆಗಳನ್ನು ಕೋವಿಡ್‍ಗಾಗಿ ಮೀಸಲಿರಿಸಲಾಗಿದ್ದು, ಅದರಲ್ಲಿ ಎಲ್ಲಾ ಹಾಸಿಗೆಗಳು ಭರ್ತಿಯಾಗಿರುತ್ತವೆ. ಹೆಚ್ಚಿನ ಸೌಲಭ್ಯ ಒದಗಿಸುವ ಮೂಲಕ ಪ್ರಸ್ತುತ 63 ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಘೋಷಾ ಆಸ್ಪತ್ರೆ ಹೆರಿಗೆ ಆಸ್ಪತ್ರೆಯಾಗಿದ್ದು, ರಾಜ್ಯದ ಮೊದಲ ಕೊವಿಡ್ ಹೆರಿಗೆ ಆಸ್ಪತ್ರೆಯಾಗಿದೆ. ಅಲ್ಲಿಯೂ 50 ಹಾಸಿಗೆಗಳನ್ನು ಮೀಸಲಿರಿಸಲಾಗಿದ್ದು, ಇನ್ನೂ 20 ಹೆಚ್ಚಿನ ಹಾಸಿಗೆಗಳನ್ನು ವ್ಯವಸ್ಥೆಮಾಡಲಾಗಿದೆ. ಪ್ರಸ್ತುತ ಒಟ್ಟು 56 ಕೊವಿಡ್ ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು. ಅಲ್ಲದೆ, ಗರ್ಭಿಣಿ ಸ್ತ್ರೀಯರಿಗೆ ಕೊವಿಡ್ ಕಾಣಿಸಿಕೊಂಡಲ್ಲಿ ಬಹುತೇಕರು ಘೋಷಾ ಆಸ್ಪತ್ರೆಗೆ ದಾಖಲಾಗುತ್ತಾರೆ. ಪ್ರಸ್ತುತ 56 ಗರ್ಭಿಣಿ ಕೋವಿಡ್ ಸೋಂಕಿತರಲ್ಲಿ 43 ಗರ್ಭಿಣಿಯರಿಗೆ ಸುಗಮವಾಗಿ ಹೆರಿಗೆ ಮಾಡಿಸಲಾಗಿದೆ. ಉಳಿದವರೂ ಕೂಡಾ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಸಿ.ವಿ. ರಾಮನ್ ಜನರಲ್ ಆಸ್ಪತ್ರೆಯ ಡಾ. ರಾಧಾಕೃಷ್ಣ ಮಾತನಾಡಿ, ನಮ್ಮ ಆಸ್ಪತ್ರೆ ಸಂಪೂರ್ಣವಾಗಿ ಕೊವಿಡ್‍ಗಾಗಿ ಮೀಸಲಿರಿಸಲಾಗಿದ್ದು, ಕಳೆದ ಒಂದು ವರ್ಷದಿಂದ ಕೊವಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇಲ್ಲಿ ಸಿಬ್ಬಂದಿಗಳು ಹೆಚ್ಚಿನ ಅನುಭವವನ್ನು ಹೊಂದಿರುತ್ತಾರೆ. ಮೊದಲನೇ ಅಲೆ ಹೋಲಿಸಿ ನೋಡಿದ್ದಲ್ಲಿ ಎರಡನೇ ಅಲೆಯಲ್ಲಿ ಬಹುತೇಕರು ಸೋಂಕಿನ ಲಕ್ಷಣ ಹೊಂದಿರಲಾರದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಸಿ.ವಿ.ರಾಮನ್ ಜನರಲ್ ಆಸ್ಪತ್ರೆಯ ಸಾವಿತ್ರಿ ಎಸ್ ಕರನ್ ಮಾತನಾಡಿ, ಕಳೆದ 10 ವರ್ಷಗಳಿಂದ ಮುಖ್ಯ ಸ್ಟಾಪ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಒಂದು ವರ್ಷದಿಂದ ಈ ಕೊವಿಡ್ ವಾರ್ಡ್‍ನಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಮೊದಲನೇ ಅಲೆಯ ಆಧಾರದ ಅನುಭವದ ಮೇಲೆ ಎರಡನೇ ಅಲೆಯನ್ನು ಎದುರಿಸಲು ತಯಾರಾಗಿದ್ದು, ಒತ್ತಡದ ನಡುವೆಯೂ ಸಹ ಉತ್ತಮ ಚಿಕಿತ್ಸೆಯನ್ನು ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಮಣಿಪಾಲ್ ಆಸ್ಪತ್ರೆಯ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, ಸರ್ಕಾರದ ಜೊತೆ ಸಹಕಾರದಿಂದ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಆಸ್ಪತ್ರೆಗಳಲ್ಲಿ ಒಟ್ಟು 450 ಕೊವಿಡ್ ಸೋಂಕಿತರು ದಾಖಲಾಗಿದ್ದು, ಹಾಸಿಗೆಗಳ ಕೊರತೆಯನ್ನು ನೀಗಿಸಲು ಲಕ್ಷಣಗಳಿಲ್ಲದ ಕೊವಿಡ್ ಸೋಂಕಿತರು ಮನೆಗಳಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಏಸ್ಟಾರ್ ಆಸ್ಪತ್ರೆಯ ಡಾ. ನಿತೇಶ್ ಶೆಟ್ಟಿ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಪ್ರಸ್ತುತ 200 ಕ್ಕೂ ಹೆಚ್ಚು ಕೊವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಶೇ. 50 ಕ್ಕಿಂತ ಹೆಚ್ಚಿನ ಜನರು ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಲು ಶ್ರಮಿಸಲಾಗುತ್ತಿದ್ದು, ಇದಕ್ಕಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.

ಇಡೀ ವರ್ಚುವಲ್ ಸಭೆಯ ಕುರಿತು ವಿವರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಮಾನ್ಯ ಮುಖ್ಯಮಂತ್ರಿಗಳು ಒಂದು ಗಂಟೆಗೂ ಹೆಚ್ಚಿನ ಸಮಯ ಬೆಂಗಳೂರಿನ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು, ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಕೋವಿಡ್ ಸೋಂಕಿತರ ಸಂಬಂಧಿಕರ ಜೊತೆ ನಡೆಸಿದ ಮಾತುಕತೆಯ ವಿವರಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 23,558 ಮಂದಿಗೆ ಸೋಂಕು, ಕೊರೊನಾದಿಂದ 116 ಜನರ ಸಾವು

ಕೊವಿಡ್ ಇಲ್ಲದ ರೋಗಿಗಳ ಚಿಕಿತ್ಸೆಗೆ ಹೊಸ ವ್ಯವಸ್ಥೆ, ಆಕ್ಸಿಜನ್​ಗೆ ಕಾಲ್​ಸೆಂಟರ್: ಡಾ.ಕೆ.ಸುಧಾಕರ್

(There is no shortage of remdesivir injection and medical oxygen in Karnataka experts to CM BS Yediyurappa in virtual meeting)

Published On - 10:33 pm, Wed, 21 April 21