ಬೆಂಗಳೂರು: ಮಹಾಮಾರಿ ಕೊರೊನಾ ಸದ್ಯ ನಿಯಂತ್ರಣಕ್ಕೆ ಬರುತ್ತಿದ್ದರೂ, ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಕೊರೊನಾ ಮೂರನೇ ಅಲೆ ಬಂದು ಅಪ್ಪಳಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಮೂರನೇ ಅಲೆ ಮಕ್ಕಳ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಆದರೆ ರದ್ದುಗೊಳಿಸಿದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡುವ ಬಗ್ಗೆ ಗೊಂದಲ, ಚರ್ಚೆಗಳು ಹೆಚ್ಚಾಗುತ್ತಿವೆ.
ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳ ಎಸ್ಎಸ್ಎಲ್ಸಿ ಫಲಿತಾಂಶ ಮತ್ತು ಪ್ರಥಮ ಪಿಯು ಫಲಿತಾಂಶವನ್ನು ಅವಲೋಕಿಸಿ ದ್ವಿತೀಯ ಫಲಿತಾಂಶವನ್ನು ನೀಡಿ ಎಂದು ಸೂಚಿಸಿದ್ದಾರೆ. ಆದರೂ ಈ ಬಗ್ಗೆ ಗೊಂದಲಗಳು ಹೆಚ್ಚಾಗಿದ್ದು, ಫಲಿತಾಂಶ ಬಗ್ಗೆ ಶಿಕ್ಷಣ ಇಲಾಖೆಗೆ ರುಪ್ಸಾ ಖಾಸಗಿ ಒಕ್ಕೂಟ ಸಲಹೆಯನ್ನು ನೀಡಿದೆ. ರಾಜ್ಯದ 200ಕ್ಕೂ ಹೆಚ್ಚು ಖಾಸಗಿ ಕಾಲೇಜುಗಳ ಅಭಿಪ್ರಾಯ ಪಡೆದ ರುಪ್ಸಾ ಶಿಕ್ಷಣ ಇಲಾಖೆಗೆ ಮೂರು ಪ್ರಮುಖ ಸಲಹೆಗಳನ್ನು ನೀಡಿದೆ.
ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಪ್ರಾಂಶುಪಾಲರ ಅಭಿಪ್ರಾಯವನ್ನು ಕಲೆ ಹಾಕಿದ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ, ಮೂರು ಪ್ರಮುಖ ಸಲಹೆ ಜೊತೆಗೆ ಆರು 6 ಸವಾಲುಗಳನ್ನು ಪ್ರಸ್ತಾಪ ಮಾಡಿದೆ. ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಮೂರು ವರ್ಷಗಳ ಅಂಕವನ್ನು ಪರಿಗಣಿಸಿ ಎಂದು ರುಪ್ಸಾ ಹೇಳಿದೆ. ಶೇ.30ರಷ್ಟು ಎಸ್ಎಸ್ಎಲ್ಸಿ, ಶೇ.50ರಷ್ಟು ಪ್ರಥಮ ಪಿಯು, ಶೇ.20ರಷ್ಟು ದ್ವಿತೀಯ ಪಿಯುಸಿ ಅಂಕವನ್ನು ಪರಿಗಣಿಸಿ ಎಂದು ಸಲಹೆ ನೀಡಿದೆ. ದ್ವಿತೀಯ ಪಿಯುಸಿಯಲ್ಲಿ ಪ್ರಾಯೋಗಿಕ ತರಗತಿ, ಮಧ್ಯವಾರ್ಷಿಕ ಹಾಗೂ ಜರುಗಿದ ಇತರೆ ಪರೀಕ್ಷೆಯಿಂದ ಶೇ.20ರಷ್ಟು ಅಂಕವನ್ನು ಪರಿಗಣಿಸಿ ಎಂದು ಶಿಕ್ಷಣ ಇಲಾಖೆಗೆ ಅಭಿಪ್ರಾಯವನ್ನು ತಿಳಿಸಿದೆ.
ಪರೀಕ್ಷೆ ಇಲ್ಲದೆ ಫಲಿತಾಂಶದಿಂದ ಉಂಟಾಗುವ ಸವಾಲುಗಳು
1. ವಿದ್ಯಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ.
2. ಈ ಮೊದಲು ಅಂಕ ಆಧಾರ, ಇದೀಗ ಗ್ರೇಡ್ ಆಧಾರ – ನೌಕರಿ ಪಡೆಯಲು ಹಳಬರೊಂದಿಗೆ ಸಂಘರ್ಷದ ಸ್ಪರ್ಧೆ.
3. CET, COMED-K ಪರೀಕ್ಷೆಗೆ ಅಂಕ ಪರಿಗಣನೆ ತಾರತಮ್ಯ.
4. ಕೇಂದ್ರಿಯ ವಿದ್ಯಾರ್ಥಿಗಳ 10ನೇ ತರಗತಿ ಅಂಕ ಹೆಚ್ಚು. ರಾಜ್ಯ ಪಠ್ಯ ಓದುವ ಮಕ್ಕಳ ಅಂಕ ಕಡಿಮೆ.
ಪಿಯುಸಿ ಫಲಿತಾಂಶ ಪ್ರಕ್ರಿಯೆಯಿಂದ ರಾಜ್ಯ ಮಕ್ಕಳಿಗೆ ಅನ್ಯಾಯ.
5. ಪಿಯುಸಿ ವಿಷಯಗಳು ಎಸ್ಎಸ್ಎಲ್ಸಿ ವಿಷಯಗಳು ಒಂದೇ ರೀತಿ ಇರದಿರುವುದು.
6. ಪಿಯುಸಿಯಲ್ಲಿ ನಿರಂತರ ಮೌಲ್ಯಮಾಪನ ಇರದೇ ಇರುವುದು.
ಇದನ್ನೂ ಓದಿ
ಎಸ್ಎಸ್ಎಲ್ಸಿ, ಪ್ರಥಮ ಪಿಯು ಅಂಕ ಪರಿಗಣಿಸಿ ದ್ವಿತೀಯ ಪಿಯುಸಿ ಫಲಿತಾಂಶ ನೀಡಿ: ಸಚಿವ ಎಸ್.ಸುರೇಶ್ ಕುಮಾರ್ ಸೂಚನೆ
(RUPSA advised to Department of Education on the outcome of the second PUC students)