ಬೆಂಗಳೂರು, ಆಗಸ್ಟ್ 09: ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಆಗಸ್ಟ್ 15ರಂದು ಕರಾಳ ಸ್ವಾತಂತ್ರ್ಯ ದಿನಾಚರಣೆ (Independence Day) ಆಚರಿಸಲು ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಕೆಲವು ಸಂಘಟನೆಗಳು ಮುಂದಾಗಿದೆ. ಆದರೆ ಯಾವುದೇ ಕಾರಣಕ್ಕೂ ನಮ್ಮ ಹೆಮ್ಮೆಯ ದೇಶಕ್ಕೆ ಸ್ವಾತಂತ್ರ್ಯ ದಿನವನ್ನು ಕರಾಳ ದಿನವನ್ನಾಗಿ ಆಚರಿಸಬೇಡಿ. ಪ್ರತಿಭಟನೆಯನ್ನು ಕೈಬಿಡುವಂತೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ (Suresh Kumar S) ಮನವಿ ಮಾಡಿದ್ದಾರೆ.
ಈ ಕುರಿತಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈ ಕುರಿತು ಈ ಸಂಘಟನೆಗಳು ಬಿಡುಗಡೆ ಮಾಡಿರುವ ಹೇಳಿಕೆಗಳನ್ನು ಗಮನಿಸಿದ್ದೇನೆ. ಇವರ ಸಮಸ್ಯೆ, ಪರಿಹಾರಕ್ಕಾಗಿ ಆಗ್ರಹ ಎಲ್ಲವೂ ಸಮ್ಮತವೇ. ಆದರೆ ಇವರು ಪ್ರತಿಭಟನೆಗಾಗಿ ಆಯ್ಕೆ ಮಾಡಿಕೊಂಡಿರುವ ದಿನಾಂಕವನ್ನು ಸ್ವಾತಂತ್ರ್ಯವನ್ನು ಪ್ರೀತಿಸುವ ಯಾರೇ ಆದರೂ ಒಪ್ಪತಕ್ಕದಂತದ್ದಲ್ಲ.
ನಮ್ಮ ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆಗಳಿಗೆ ಪೂರ್ಣ ಅವಕಾಶ ಇದೆ. ಒಂದು ರೀತಿಯಿಂದ ಈ ರೀತಿಯ ಪ್ರತಿಭಟನೆ ಹೋರಾಟಗಳ ಮೂಲಕವೇ ನಾವು ಬ್ರಿಟಿಷರಿಂದ ಮುಕ್ತಿ ಪಡೆದು ಆಗಸ್ಟ್ 15 ರಂದು ಸ್ವಾತಂತ್ರ್ಯಗಳಿಸಿದ್ದು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕ, ಸಂಘಟನೆ-ಸಮುದಾಯ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆಯ ಮಾರ್ಗ ಹಿಡಿಯುವುದು ಸಹಜ ಪ್ರಕ್ರಿಯೆ. ಆದರೆ ಈ ಪ್ರತಿಭಟನೆಗಳು ದೇಶದ ಆಶಯಗಳ ಮೂಲ ಸ್ವರೂಪಕ್ಕೆ ಧಕ್ಕೆ ತರುವಂತದ್ದಾಗಿರಬಾರದು. ಪ್ರತಿಭಟನೆಯ ಸಮಯ-ಸಂದರ್ಭಗಳು ಬಹಳ ಮುಖ್ಯವಾಗುತ್ತವೆ.
ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಸಹಾಯಕ ಲೋಕೋ ಪೈಲಟ್ ಮುಂಬಡ್ತಿ ಹುದ್ದೆ ಪರೀಕ್ಷೆ: ಶೀಘ್ರವೇ ಮರು ದಿನಾಂಕ ನಿಗದಿ
ತಾವು ಕೈಗೊಳ್ಳಲಿರುವ ಪ್ರತಿಭಟನೆ ಪರಿಣಾಮ ಯಾರ ಮೇಲೆ ಹೇಗೆ ಆಗಬಹುದು ಎಂಬ ವಿವೇಚನೆ ಪ್ರತಿಭಟನೆಯ ನೇತಾರರಿಗೆ ಇರಬೇಕು. ತಮ್ಮ ಪ್ರತಿಭಟನೆ ನಮ್ಮ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಉಂಟುಮಾಡುತ್ತದೆ ಎಂಬುದರ ಅರಿವಿರಬೇಕು. ಸ್ವಾತಂತ್ರ ಬಂದ ಹರ್ಷದ ದಿನಕ್ಕಿಂತ ನಮ್ಮ ಪ್ರತಿಷ್ಠೆಯೇ ಮುಖ್ಯವಾಗಬಾರದು.
ರಾಜ್ಯದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾಗಿರುವುದು ಅತ್ಯಗತ್ಯ. ಅವರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ವಸ್ತುನಿಷ್ಠ ಪರಿಹಾರವನ್ನು ಹುಡುಕಬೇಕಾಗಿದೆ. ಸರ್ಕಾರಗಳು ಈ ಕುರಿತು ಈ ಹಿಂದೆಯೂ ಪ್ರಯತ್ನವನ್ನು ಮಾಡಿವೆ. ಈಗಲೂ ಮಾಡಬೇಕಿದೆ. ಈ ಸಮಸ್ಯೆಗಳು ಎಷ್ಟು ಬೇಗ ಪರಿಹಾರವಾದರೆ, ಅಷ್ಟು ಬೇಗ ಒಳಿತಾಗುತ್ತದೆ. ಖಾಸಗಿ ಶಾಲೆಗಳು ತಮ್ಮದೇ ಆದ ರೀತಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಕೊಡುಗೆ ನೀಡುತ್ತಿರುವುದು ನಿರ್ವಿವಾದ ಸಂಗತಿ. ಅದಕ್ಕೆ ಪೂರಕವಾಗಿ ಅವರ ನೈಜ ಸಮಸ್ಯೆಗಳಿಗೆ ಸರ್ಕಾರವು ಪರಿಹಾರವನ್ನು ತ್ವರಿತಗತಿಯಲ್ಲಿ ಹುಡುಕಬೇಕಿದೆ.
ಆದರೆ ಸ್ವಾತಂತ್ರ್ಯ ದಿನೋತ್ಸವದಂದು ಪ್ರತಿಭಟನೆಯ ದಿನವನ್ನಾಗಿ ಆಚರಿಸಲು ಆಯ್ದುಕೊಂಡಿರುವುದು ಯಾರು ಒಪ್ಪಲಾಗದ ಸಂಗತಿ. ಸ್ವಾತಂತ್ರ್ಯ ದಿನ ವನ್ನು ಸಂಭ್ರಮದಿಂದ ಆಚರಿಸುತ್ತಾ, ಮಕ್ಕಳಲ್ಲಿ-ಯುವ ಜನಾಂಗದಲ್ಲಿ ನಮ್ಮ ದೇಶದ ಕುರಿತು ಹೆಮ್ಮೆ, ಅಭಿಮಾನ, ಉತ್ಸಾಹ, ಆದರ್ಶಗಳನ್ನು ತುಂಬಬೇಕಾದ ಶಿಕ್ಷಣ ಸಂಸ್ಥೆಗಳೇ ಸ್ವಾತಂತ್ರ್ಯ ದಿನವನ್ನು ಪ್ರತಿಭಟನಾ ದಿನವನ್ನಾಗಿ ಆಚರಿಸಲು ಹೊರಟಿರುವುದು ತೀರಾ ದುರದೃಷ್ಟಕರವಾದ ಸಂಗತಿ. ಇದು ಸಮಾಜಕ್ಕೆ ಒಟ್ಟು ತಪ್ಪು ಸಂದೇಶವನ್ನು ಹಾಗೂ ನಕರಾತ್ಮಕ ಭಾವನೆಯನ್ನು ಹರಡುತ್ತದೆ. ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಒಂದು ರೀತಿಯ ನಿರಾಶೆಯನ್ನು, ದೇಶದ ಕುರಿತು ಸಿನಿಕತನವನ್ನು ಉಂಟುಮಾಡುತ್ತದೆ.
ಈಗಾಗಲೇ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕುಸಿಯುತ್ತಿರುವ ಮೌಲ್ಯಗಳ ಬಗ್ಗೆ ಎಲ್ಲರೂ ಚಿಂತಿತರಾಗಿದ್ದಾರೆ. ಈ ಸಮಯದಲ್ಲಿ ಸ್ವಾತಂತ್ರ್ಯ ದಿನದಂದು ಪ್ರತಿಭಟಿಸುವ ಪ್ರವೃತ್ತಿ ಮುಂದಿನ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದು ಖಚಿತ. ಸ್ವಾತಂತ್ರ್ಯ ದಿನದಂದೇ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದರಿಂದ ಯಾವುದೇ ಉದ್ದೇಶ ಸಾಧನೆಯಾಗುವುದಿಲ್ಲ. ಅದರ ಬದಲು ಈ ಶಾಲೆಗಳ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಆದರಿಂದ ಪ್ರತಿಭಟನೆಗೆ ಕರೆ ಕೊಟ್ಟಿರುವ ಸಂಘಟನೆಗಳ ಪ್ರಮುಖರಿಗೆಲ್ಲ ಹಾಗೂ ಖಾಸಗಿ ಶಿಕ್ಷಕರಲ್ಲಿ ನನ್ನದೊಂದು ಕಳಕಳಿಯ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸರ್ಕಾರದ ವಿರುದ್ಧ ಸಿಡಿದೆದ್ದ ರೆಸಿಡೆನ್ಸಿ ಡಾಕ್ಟರ್ಸ್: ಆ 12ರಂದು ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧಾರ
ಆಗಸ್ಟ್ 15ರಂದು ಹಮ್ಮಿಕೊಳ್ಳಲು ಉದ್ದೇಶಿಸಿರುವ ಈ ಪ್ರತಿಭಟನೆಯನ್ನು ದಯವಿಟ್ಟು ಕೈ ಬಿಡಿ. ಸಂಭ್ರಮದಿಂದ ಮತ್ತು ಹೆಮ್ಮೆಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಿ, ನಮ್ಮ ಮಕ್ಕಳನ್ನು ಪ್ರತಿಭಾವಂತ ನಾಗರಿಕರನ್ನಾಗಿ ಮಾಡುವ ಕಡೆ ಹೆಜ್ಜೆ ಇಡೋಣ. ನಿಮ್ಮ ಎಲ್ಲಾ ಮನವಿಗಳ ಕುರಿತ ಹೋರಾಟಕ್ಕೆ ಬೇರೊಂದು ದಿನವನ್ನು ನಿಗದಿ ಮಾಡಿ. ಯಾವುದೇ ಕಾರಣಕ್ಕೂ ನಮ್ಮ ಹೆಮ್ಮೆಯ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನವನ್ನು ಕರಾಳ ದಿನವನ್ನಾಗಿ ಪ್ರತಿಭಟನಾ ದಿನವನ್ನಾಗಿ ಆಚರಿಸಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.