ಶಿವಮೊಗ್ಗ: ವೀರ ಸಾವರ್ಕರ್ ಫ್ಲೆಕ್ಸ್ ವಿಚಾರದಲ್ಲಿ ನಡೆದ ಗಲಾಟೆ ಹಾಗೂ ಪ್ರೇಮ್ಸಿಂಗ್ಗೆ ಚಾಕು ಇರಿತ ಪ್ರಕರಣ ಸಂಬಂಧ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಜಾರಿ ಮಾಡಲಾದ ನಿಷೇಧಾಜ್ಞೆಯನ್ನು ಮುಂದುವರಿಕೆ ಮಾಡಲಾಗಿದೆ. ಇಂದು ರಾತ್ರಿ 10 ಗಂಟೆವರೆಗೂ ನಿಷೇಧಾಜ್ಞೆ ಮುಂದುವರಿಕೆ ಮಾಡಿ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದ್ದು, ಪೊಲೀಸ್ ಸಿಬ್ಬಂದಿಗಳು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.
ಅ. 15 ರಂದು ನಡೆದ ಗಲಾಟೆ ಬಳಿಕ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಾಲಾ ಕಾಲೇಜುಗಳು ಬುಧವಾರದಿಂದ ಪುನರಾರಂಭವಾಗಿವೆ, ಅದಾಗ್ಯೂ ನಗರದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ. ಈ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟು ನಿಟ್ಟಿನ ಕ್ರಮಗೊಳ್ಳಲಾಗುತ್ತಿದ್ದು, ಬೈಕ್ ಮತ್ತು ಕಾರುಗಳು ಸೇರಿದಂಯೆ ಇನ್ನಿತರ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ನಿಷೇಧಾಜ್ಞೆಗೆ ವ್ಯಾಪಾರ ತತ್ತರ
ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮುಂದುವರಿಸಿ ಆದೇಶಿಸಲಾಗಿದ್ದು, ವ್ಯಾಪಾರ ವಹಿವಾಟುಗಳು ನಡೆಯದೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಶಿವಮೊಗ್ಗ ಗಾಂಧಿ ಬಜಾರ್ನಲ್ಲಿ ಮೂರು ದಿನಗಳಿಂದ ವ್ಯಾಪಾರ ವಹಿವಾಟು ಇಲ್ಲದೇ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಹಬ್ಬ ಹರಿದಿನಗಳ ದಿನದಲ್ಲಿ ಮಾರುಕಟ್ಟೆ ಬಂದ್ ಮಾಡಿದರೆ ಏನು ಮಾಡಬೇಕು, ತಪ್ಪು ಮಾಡಿದವರ ಮೇಲೆ ಗುಂಡು ಹಾರಿಸಿ. ಅವರನ್ನು ಗಲ್ಲಿಗೇರಿಸಿ. ಯಾರೋ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ಆಗುತ್ತಿದೆ, ವ್ಯಾಪಾರ ಇಲ್ಲದೆ ದೊಡ್ಡ ನಷ್ಟ ಆಗಿದೆ ಎಂದು ಟಿವಿ9 ಮೂಲಕ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಗಾಂಧಿ ಬಜಾರ್ನಲ್ಲೂ ಬಿಗುವಿನ ವಾತಾವರಣದ ನಡುವೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಐಜಿಪಿ ಪೂರ್ಣ ವಲಯ ತ್ಯಾಗರಾಜನ್ ಅವರು ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಶಿವಪ್ಪ ನಾಯಕ ವೃತ್ತದಲ್ಲಿಯೂ ಬಿಗಿ ಬಂದೋಬಸ್ತ್ ವಹಿಸಲಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:44 am, Thu, 18 August 22