ಬೆಂಗಳೂರು, (ಜುಲೈ 10): ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರನ್ನು ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ. ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಮತ್ತು ಮಹಿಳೆಯನ್ನು ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ವಿಶೇಷವಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ನಿರಂತರವಾಗಿ ವೃತ್ತಿಪರತೆ ಕಾಪಾಡಿಕೊಂಡು ಬಂದಿರುವ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮಹಿಳಾ ಪ್ರತಿನಿಧಿಯೊಬ್ಬರು ಅಲಂಕರಿಸುತ್ತಿದ್ದಾರೆ.
ಹಿರಿಯ ಪತ್ರಕರ್ತೆ ಆಯೇಷಾ ಖಾನಂ ದಿ ಏಷಿಯನ್ ಏಜ್, ಸ್ಟಾರ್ ನ್ಯೂಸ್, ಆಜ್ ತಕ್, ದೂರದರ್ಶನದಲ್ಲಿ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ.
ಈ ಬಾರಿ ಯಾರನ್ನು ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಿಸಬೇಕು ಎನ್ನುವ ಚರ್ಚೆ ಬಂದಾಗ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಆಯೇಷಾ ಖಾನಂ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇವರನ್ನೇ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರಿಗೆ ವ್ಯಕ್ತಪಡಿಸಿದ್ದರು.
ಇವತ್ತಿನವರೆಗೂ ಮಾಧ್ಯಮ ಅಕಾಡೆಮಿಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಮತ್ತು ಮಹಿಳೆಯನ್ನು ಯಾವ ಮುಖ್ಯಮಂತ್ರಿಗಳೂ ನೇಮಿಸಿಲ್ಲ. ಈ ಕೊರತೆಯನ್ನು ನೀವು ಅಳಿಸಿದಂತಾಗುತ್ತದೆ. ಜೊತೆಗೆ ಆಯೇಷಾ ಅವರು ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯವರಾಗಿರುವುದರಿಂದ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗ ಸಮಾನತೆಗೂ ಮಾನ್ಯತೆ ಕೊಟ್ಟಂತಾಗುತ್ತದೆ ಎನ್ನುವುದು ಕೆ.ವಿ.ಪ್ರಭಾಕರ್ ಅವರ ಅಭಿಪ್ರಾಯವಾಗಿತ್ತು. ಈ ಅಭಿಪ್ರಾಯಕ್ಕೆ ಸಂಪೂರ್ಣ ಮನ್ನಣೆ ನೀಡಿದ ಸಿಎಂ ಸಿದ್ದರಾಮಯ್ಯ, ಇತರೆ ಹಲವು ಅರ್ಹರ ಹೆಸರುಗಳ ನಡುವೆ ಆಯೇಷಾ ಅವರನ್ನು ಹೆಚ್ಚು ಅರ್ಹರು ಎಂದು ತೀರ್ಮಾನಿಸಿ ಆದೇಶ ಹೊರಡಿಸಲು ಸೂಚಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಆಯೇಷಾ ಖಾನಂ ಅವರಿಗೆ ಹಾಗೂ ಎಲ್ಲಾ ನೂತನ ಸದಸ್ಯರುಗಳಿಗೆ ಅಭಿನಂದನೆಗಳು.
ತಮ್ಮ ಮುಂದಾಳತ್ವದಲ್ಲಿ ಪತ್ರಕರ್ತರಲ್ಲಿ ವೃತ್ತಿಪರತೆ ಮತ್ತು ವೃತ್ತಿ ಕೌಶಲದ ಸುಧಾರಣೆಗೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾಧ್ಯಮ ಅಕಾಡೆಮಿ ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸಲಿ ಎಂದು ಈ… pic.twitter.com/R7adxvWnL6
— CM of Karnataka (@CMofKarnataka) July 10, 2024
ಹಾಗೆಯೇ ಜನಪರ ಹೋರಾಟದಿಂದಲೇ ಪತ್ರಿಕೋದ್ಯಮಕ್ಕೆ ಪ್ರವೇಶಿಸಿ ಸಾಮಾಜಿಕ ಕಾಳಜಿಗಳನ್ನಿಟ್ಟುಕೊಂಡು ವೃತ್ತಿಯಲ್ಲಿ ತೊಡಗಿರುವ ಚಿತ್ರದುರ್ಗದ ಅಹೋಬಳಪತಿ ಅವರ ಜೊತೆಗೆ ಬೆಂಗಳೂರಿನ ಪತ್ರಿಕಾ ಛಾಯಾಗ್ರಾಹಕರಾದ ಕೆ.ವೆಂಕಟೇಶ್ ಮತ್ತು ಕೊಪ್ಪಳದ ಹಿರಿಯ ಪತ್ರಕರ್ತರಾದ ಕೆ.ನಿಂಗಜ್ಜ ಅವರನ್ನು ಅಕಾಡೆಮಿ ಸದಸ್ಯರನ್ನಾಗಿ ನೇಮಿಸಲಾಗಿದ್ದು. ಇಲ್ಲೂ ಕೂಡ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ಮನ್ನಣೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:27 pm, Wed, 10 July 24