ನಾಳೆಯ ಭಾರತ್ ಬಂದ್ಗೆ ವಾಟಾಳ್ ನಾಗರಾಜ್ ಬೆಂಬಲ; ಮೆಜೆಸ್ಟಿಕ್ನಲ್ಲಿ ವಿನೂತನ ಪ್ರತಿಭಟನೆ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರೈತರ ಬೇಡಿಕೆಗಳನ್ನ ಈಡೇರಿಸುತ್ತಿಲ್ಲ: ವಾಟಾಳ್ ನಾಗರಾಜ್.
ಬೆಂಗಳೂರು: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಖಂಡಿಸಿ ನಾಳೆ ಕರೆ ನೀಡಲಾಗಿರುವ ಭಾರತ್ ಬಂದ್ಗೆ ಹಿರಿಯ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಬಲ ಘೋಷಿಸಿದ್ದಾರೆ. ನಾಳೆ (ಮಾರ್ಚ್ 26) ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 11.30 ಕ್ಕೆ ವಿನೂತನ ಪ್ರತಿಭಟನೆ ಮೂಲಕ ಭಾರತ್ ಬಂದ್ಗೆ ಬೆಂಬಲ ನೀಡುವುದಾಗಿ ಮೈಸೂರಿನಲ್ಲಿ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನ ವಿರೋಧಿ ದೆಹಲಿಯಲ್ಲಿ ರೈತರು ಸಾಕಷ್ಟು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರೈತರ ಬೇಡಿಕೆಗಳನ್ನ ಈಡೇರಿಸುತ್ತಿಲ್ಲ. ಆದ್ದರಿಂದ ರೈತ ಸಮುದಾಯ ಭಾರತ್ ಬಂದ್ಗೆ ಕರೆ ಕೊಟ್ಟಿದೆ. ನಾವು ಭಾರತ್ ಬಂದ್ಗೆ ಸಂಪೂರ್ಣ ಬೆಂಬಲ ಸೂಚಿಸುತ್ತೇವೆ. ಈ ಮೂಲಕ ಯಾವಾಗಲೂ ರೈತರ ಪರವಾಗಿ ಇರುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಭಾರತ್ ಬಂದ್ಗೆ ಕರೆ ಕೊಟ್ಟವರಾರು? ಕಳೆದ ನಾಲ್ಕು ತಿಂಗಳಿನಿಂದ ದೆಹಲಿಯ ಗಡಿಭಾಗದಲ್ಲಿ ರೈತರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ರೈತರಿಗೆ ಬೆಂಬಲ ನೀಡಲು ನಾಳೆ (ಮಾರ್ಚ್ 26) ಭಾರತ್ ಬಂದ್ ಗೆ ಸಂಯುಕ್ತ ಕಿಸಾನ್ ಮೋರ್ಚಾ ( SKM) ಕರೆ ನೀಡಿದೆ. ಪಿಟಿಐ ಸುದ್ದಿಸಂಸ್ಥೆಯ ವರದಿ ಪ್ರಕಾರ ಮಾರ್ಚ್ 26ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎಲ್ಲ ಸೇವೆಗಳನ್ನು ಬಂದ್ ಮಾಡಲು ಎಸ್ಕೆಎಂ ಕರೆ ನೀಡಿದೆ. ಈ ಅವಧಿಯಲ್ಲಿ ದೇಶದಾದ್ಯಂತ ಎಲ್ಲ ಸಾರಿಗೆ, ರೈಲು, ಮಾರುಕಟ್ಟೆ ಮತ್ತು ಸಾರ್ವಜನಿಕ ಸ್ಥಳಗಳು ಬಂದ್ ಆಗಿರಲಿವೆ. ಅನ್ನದಾತರಿಗೆ ಗೌರವ ಸೂಚಿಸಲು ಭಾರತ್ ಬಂದ್ನ್ನು ಯಶಸ್ವಿ ಮಾಡಬೇಕು ಎಂದು ನಾನು ದೇಶದ ನಾಗರಿಕರಲ್ಲಿ ವಿನಂತಿಸುತ್ತೇನೆ ಎಂದು ರೈತ ನಾಯಕ ದರ್ಶನ್ ಪಾಲ್ ಹೇಳಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಶಾಂತಿಯುತ ರೀತಿಯಲ್ಲಿ ಬಂದ್ ಆಚರಿಸಿ ಎಂದು ಸಚಿವರು ರೈತರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.ಬಂದ್ಗೆ ಬೆಂಬಲ ಘೋಷಿಸಿ ನಾಳೆ ಎಲ್ಲ ಸರ್ಕಾರಿ ಕಚೇರಿಗಳು ಮಧ್ಯಾಹ್ನ 1ಗಂಟೆಗೆ ತೆರೆಯಲಿದ್ದು, ಮಧ್ಯಾಹ್ನ ನಂತರ ಆರ್ ಟಿಸಿ ಬಸ್ ಗಳು ರಸ್ತೆಗಿಳಿಯಲಿವೆ. ಎಲ್ಲ ತುರ್ತು ಆರೋಗ್ಯ ಸೇವೆಗಳು ಎಂದಿನಂತೆ ಇರಲಿವೆ ಎಂದು ಸಚಿವರು ಹೇಳಿದ್ದಾರೆ.
ಅಂಗಡಿ ಬಂದ್ ಮಾಡುವ ವಿಚಾರ ವೈಯಕ್ತಿಕ
ರೈತ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ಬೆಂಬಲ ಘೋಷಿಸಿ ಗಾಜಿಯಾಬಾದ್ನಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ತೆರೆಯುವ ಅಥವಾ ಮುಚ್ಚುವ ನಿರ್ಧಾರ ವೈಯಕ್ತಿಕವಾಗಿದೆ. ಭಾರತ್ ಬಂದ್ ಬಗ್ಗೆ ಮಹಾನಗರ್ ವ್ಯಾಪಾರ ಮಂಡಳಿ ತಟಸ್ಥ ನಿಲುವು ಸ್ವೀಕರಿಸಿದೆ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಚಾವ್ಲಾ ಹೇಳಿದ್ದಾರೆ. ಯಾರೊಬ್ಬರೂ ಅಂಗಡಿಗಳನ್ನು ತೆರೆಯಲು ಅಥವಾ ಮುಚ್ಚಲು ಬಲವಂತ ಮಾಡುವಂತಿಲ್ಲ. ಈ ನಿರ್ಧಾರ ಅಂಗಡಿ ಮಾಲೀಕರಿಗೆ ಬಿಟ್ಟಿದ್ದು ಎಂದು ಚಾವ್ಲಾ ಹೇಳಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ನ್ನು ಸಂಘ ಪರಿವಾರ್ ಎಂದು ಹೇಳಬಾರದು, ಅವರಿಗೆ ಕುಟುಂಬದ ಮೌಲ್ಯಗಳು ಗೊತ್ತಿಲ್ಲ: ರಾಹುಲ್ ಗಾಂಧಿ