ಶಿವಮೊಗ್ಗ: ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಮತ್ತು ವೀರ ಸಾವರ್ಕರ್ ಫೋಟೋ ವಿಚಾರದಲ್ಲಿ ನಡೆದ ಘರ್ಷಣೆ ನಂತರ ಬಿಗುವಿನ ವಾತಾವಣ ಸೃಷ್ಟಿಯಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆ ಕುವೆಂಪು ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ. ಇಂದು ನಡೆಯಬೇಕಿದ್ದ ಕುವೆಂಪು ವಿವಿಯ ಪರೀಕ್ಷೆಗಳು ಮುಂದೂಡಿಕೆಯಾಗಿವೆ ಎಂದು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ನವೀನ್ ಕುಮಾರ್ ಹೇಳಿದ್ದಾರೆ.
ವೀರ ಸಾವರ್ಕರ್ ಭಾವಚಿತ್ರದಲ್ಲಿ ಗಾಂಧಿ ಬಜಾರ್ನಲ್ಲಿ ಉಂಟಾದ ಘರ್ಷಣೆ ಚಾಕು ಇರಿತಕ್ಕೆ ತಿರುಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಈಗಾಗಲೇ ಶಿವಮೊಗ್ಗ ಮತ್ತು ಭದ್ರಾವತಿ ನಗರ ಪ್ರದೇಶದ ಶಾಲೆ ಮತ್ತು ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ಆಗಸ್ಟ್ 16ರಂದು ರಜೆ ಘೋಷಿಸಿತ್ತು. ನಂತರ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೂಡ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ರಜೆ ಘೋಷಿಸಿ ಆದೇಶಿಸಿದ್ದಾರೆ.
ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಂದ ಕುವೆಂಪು ವಿವಿಗೆ ಪ್ರತಿ ದಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದ್ದು, ಉಪನ್ಯಾಸಕರು ಮತ್ತು ಅಧ್ಯಾಪಕೇತರ ಸಿಬ್ಬಂದಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸೆಕ್ಷನ್ 144 ಜಾರಿಗೊಳಿಸಿರುವುದರಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರ ಪ್ರದೇಶದ ಶಾಲೆ ಮತ್ತು ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಾಳೆ ನಡೆಯಬೇಕಾಗಿದ್ದ ಎಂಎಸ್ಸಿ (ಹಾನರ್ಸ್) ಮತ್ತು ಪಿಎಚ್ಡಿ ಕೋರ್ಸ್ ವರ್ಕ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಕೆ. ನವೀನ್ ಕುಮಾರ್ ತಿಳಿಸಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:57 am, Tue, 16 August 22