Shivamogga Violence: ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣ; ಪ್ರಮುಖ ಆರೋಪಿಯ ಮೇಲೆ ಪೊಲೀಸರ ಫೈರಿಂಗ್

ಶಿವಮೊಗ್ಗದಲ್ಲಿ ನಡೆದ ಚಾಕು ಇರಿತ ಪ್ರಕರಣದ ಪ್ರಮುಖ ಆರೋಪಿಯ ಮೇಲೆ ಪೊಲೀಸರು ಗುಂಡುಹಾರಿಸಿ ಬಂಧಿಸಿದ್ದು, ಮತ್ತೋರ್ವನ ಬಂಧನಕ್ಕೆ ಶೋಧ ಮುಂದುವರಿದಿದೆ.

Shivamogga Violence: ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣ; ಪ್ರಮುಖ ಆರೋಪಿಯ ಮೇಲೆ ಪೊಲೀಸರ ಫೈರಿಂಗ್
ಆರೋಪಿಗಳಾದ ಜಬೀವುಲ್ಲಾ ಮತ್ತು ನದೀಮ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 16, 2022 | 9:15 AM

ಶಿವಮೊಗ್ಗ: ವೀರ ಸಾವರ್ಕರ್ ಫೋಟೋ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಿದ್ದ ಪೊಲೀಸರು, ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ನಾಮಿಬೈಲ್​ನ ನಿವಾಸಿ ಜಬೀವುಲ್ಲಾನನ್ನು ಪೊಲೀಸರು ತಡರಾತ್ರಿ ಗುಂಡು ಹಾರಿಸಿ ಬಂಧಿಸಿದ್ದಾರೆ.

ಗಾಂಧಿ ಬಜಾರ್​ನಲ್ಲಿ ಪ್ರೇಮ್​ಸಿಂಗ್ ಎಂಬ ಯುವಕನಿಗೆ ಆರೋಪಿಗಳು ಚಾಕು ಇರಿದು ಪರಾರಿಯಾಗಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು, ಶಿವಮೊಗ್ಗ ಜೆಸಿ ನಗರದ ನದೀಮ್ (25) ಹಾಗೂ ಬುದ್ಧ ನಗರದ ಅಬ್ದುಲ್ ರೆಹಮಾನ್ (25) ಎಂಬವನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿತ್ತು. ನಂತರ ಪ್ರಕರಣದ ಪ್ರಮುಖ ಆರೋಪಿಗಾಗಿ ಶೋಧ ಮುಂದುವರಿಸಿದ್ದರು. ಅದರಂತೆ ತೀರ್ಥಹಳ್ಳಿ ರಸ್ತೆಯ ನಮೋ ಶಂಕರ ಲೇಔಟ್​ನಲ್ಲಿ ಆರೋಪಿ ಇರುವ ಸುಳಿವು ಪಡೆದ ಪೊಲೀಸರು ತಡರಾಥ್ರಿ ಕಾರ್ಯಾಚರಣೆಗೆ ಇಳಿದು ಬಂಧಿಸಿದ್ದಾರೆ. ಸೋಮವಾರ ನಡೆದ ಘಟನೆಯಲ್ಲಿ ಈತ ಮೊದಲ ಆರೋಪಿಯಾಗಿದ್ದಾನೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದ ಪೊಲೀಸರ ಮೇಲೆಯೇ ಆರೋಪಿ ಜಬೀವುಲ್ಲಾ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪೊಲೀಸರ ಆತ್ಮರಕ್ಷಣೆಗಾಗಿ ವಿನೋಬನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಕುರಿ ಅವರು ಸಬೀವುಲ್ಲಾನ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಆರೋಪಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಕೂಡಲೇ ಈತನನ್ನು ಬಂಧಿಸಿ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಆರೋಪಿ ಜಬೀವುಲ್ಲಾನನ್ನು ಮೆಗ್ಗಾನ್ ಜೈಲ್ ವಾರ್ಡ್​ಗೆ ಶಿಫ್ಟ್ ಮಾಡಿದ್ದಾರೆ.

ಶೀಘ್ರದಲ್ಲೇ ಮತ್ತಿಬ್ಬರ ಬಂಧನ

ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದ ಪೊಲೀಸರು, ಪ್ರಮುಖ ಆರೋಪಿ ಸೇರಿದಂತೆ ಮತ್ತಿಬ್ಬರ ಬಂಧನಕ್ಕೆ ಶೋಧ ಮುಂದುವರಿಸಿದ್ದರು. ಈ ಪೈಕಿ ಪ್ರಮುಖ ಆರೋಪಿಯ ಬಂಧನವಾಗಿದೆ. ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್, ಪ್ರಕರಣದಲ್ಲಿ ಒಟ್ಟು ನಾಲ್ವರು ಭಾಗಿಯಾಗಿದ್ದಾರೆ. ಈ ಪೈಕಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದಿದ್ದಾರೆ. ಅಲ್ಲದೆ, ಆರೋಪಿಗಳ ಹಿನ್ನೆಲೆ, ಅವರು ಯಾವ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂಬೂದು ತನಿಖೆ ನಂತರವಷ್ಟೇ ತಿಳಿದುಬರಲಿದೆ. ಅವರ ವಿರುದ್ಧ ಅವರ ವಿರುದ್ಧ ದಾಖಲಿಸುವುದರ ಜೊತೆಗೆ ಆಸ್ತಿ ಮುಟ್ಟುಗೋಲು ಹಾಕುವ ವಿಚಾರವಾಗಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆ

ಚಾಕು ಇರಿತದ ನಂತರ ಮುಂಜಾಗ್ರತಾ ಕ್ರಮವಾಗಿ ದೊಡ್ಡಪೇಟೆ, ಕೋಟೆ, ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯ ರಾಗಿಗುಡ್ಡದಲ್ಲೂ ಭದ್ರತೆ ಒದಗಿಸಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಪ್ರಕರಣ ಹೆಚ್ಚಾಗುತ್ತಲೇ ಇದೆ, ನಗರದೆಲ್ಲೆಡೆ ವಾಹನಗಳ ತಪಾಸಣೆ ನಡೆಸುತ್ತೇವೆ. ಭದ್ರತೆಗಾಗಿ 15 ಪ್ಲಟೂನ್​ ಬಂದಿದ್ದು, ಇನ್ನೂ 6 ಪ್ಲಟೂನ್ ಬರಲಿವೆ. ಹೆಚ್ಚುವರಿಯಾಗಿ ಓರ್ವ ಎಸ್​ಪಿ, ಮೂವರು ಹೆಚ್ಚುವರಿ ಎಸ್​ಪಿ ಸಿಐಡಿಯ ಮೂವರು ಡಿವೈಎಸ್​ಪಿ, 10 ಇನ್ಸ್​ಪೆಕ್ಟರ್ ಅವರನ್ನು​ ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಶಿವಮೊಗ್ಗದಲ್ಲಿ ನಡೆದ ಈ ಘಟನೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:03 am, Tue, 16 August 22