Bhadravathi: 12 ವರ್ಷಗಳ ದಾಂಪತ್ಯ, 3 ಮಕ್ಕಳು ಇದ್ದಾರೆ! ಆದರೂ ಪತ್ನಿಯ ಮೇಲೆ ಆಸಿಡ್ ದಾಳಿ ಮಾಡಿ, ಪತಿ ಎಸ್ಕೇಪ್

| Updated By: ಸಾಧು ಶ್ರೀನಾಥ್​

Updated on: Jan 24, 2023 | 12:47 PM

Acid Attack: ಮದುವೆಯಾಗಿ 12 ವರ್ಷದ ಸಂಸಾರ ನಡೆದಿದೆ. ಮೂವರು ಮುದ್ದಾದ ಮಕ್ಕಳು. ಈ ನಡುವೆ ಪತಿಗೆ ಪತ್ನಿಯ ಮೇಲೆ ವಿನಾಕಾರಣ ಅನುಮಾನ. ಪತ್ನಿಯ ನಡತೆ ಮೇಲೆ ನಿರಂತವಾಗಿ ಸಂಶಯಪಟ್ಟು ಅವಳ ಬದುಕು ನರಕ ಮಾಡಿಬಿಟ್ಟಿದ್ದನು.

Bhadravathi: 12 ವರ್ಷಗಳ ದಾಂಪತ್ಯ, 3 ಮಕ್ಕಳು ಇದ್ದಾರೆ! ಆದರೂ ಪತ್ನಿಯ ಮೇಲೆ ಆಸಿಡ್ ದಾಳಿ ಮಾಡಿ, ಪತಿ ಎಸ್ಕೇಪ್
12 ವರ್ಷಗಳ ದಾಂಪತ್ಯ, 3 ಮಕ್ಕಳು ಇದ್ದಾರೆ! ಆದರೂ ಪತ್ನಿಯ ಮೇಲೆ ಆಸಿಡ್ ದಾಳಿ ಮಾಡಿ, ಪತಿ ಎಸ್ಕೇಪ್
Follow us on

ಪತಿ ಪತ್ನಿಯರ ನಡುವೆ ಆಗಾಗ ಮನಸ್ತಾಪಗಳಾಗುವುದು ಸಾಮಾನ್ಯ. ಗಂಡ ಹೆಂಡತಿ ಜಗಳ ಉಂಡು ಮಲಗುವರೆಗೆ ಎನ್ನುವ ಗಾದೆಯೂ ಇದೆ. ಆದ್ರೆ ಭದ್ರಾವತಿಯಲ್ಲಿ ಪತಿಯ ಕೌರ್ಯ ಎಲ್ಲವನ್ನೂ ಮೀರಿತ್ತು. ನೆಟ್ಟಗೆ ಸಂಸಾರ ಮಾಡದ ಪತಿಯು (Husband) ಪತ್ನಿಯ (Wife) ಮೇಲೆ ಆಸಿಡ್ ದಾಳಿ (Acid Attack) ಮಾಡಿದ್ದಾನೆ. ಪತ್ನಿಯ ಮೇಲೆ ಆಸಿಡ್ ದಾಳಿ ಕುರಿತು ಒಂದು ವರದಿ ಇಲ್ಲಿದೆ. ಭದ್ರಾವತಿ (Bhadravathi) ತಾಲೂಕಿನ ಬಿಆರ್ ಪಿ ಶಾಂತಿನಗರದಲ್ಲಿ ವಾಸವಿದ್ದಾರೆ ಗೌರಿ ಮತ್ತು ರವಿ ದಂಪತಿ. ಮದುವೆಯಾಗಿ 12 ವರ್ಷಗಳಾಗಿವೆ. ಎರಡು ಹೆಣ್ಣು ಮತ್ತು ಒಂದು ಗಂಡು ಮಗು ಇದೆ. ರವಿಯು ಹಾಸನದಲ್ಲಿ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದನು. ನಂತರ ಭದ್ರಾವತಿಯ ಬಿಆರ್ ಪಿಯಲ್ಲಿ ಟಿವಿ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ. ಈ ನಡುವೆ ಪತಿ ಮತ್ತು ಪತ್ನಿ ನಡುವೆ ಗಲಾಟೆ, ಜಗಳ ಆಗುತ್ತಿದ್ದವು. ಪತ್ನಿಯ ಮೇಲೆ ವಿನಾಕಾರಣ ಅನುಮಾನ. ಯಾರ ಜೊತೆ ಮಾತನಾಡಿದರೂ ಅದನ್ನು ತಪ್ಪಾಗಿ ತಿಳಿದುಕೊಳ್ಳುತ್ತಿದ್ದನು. ಎದುರಿಗೆ ಯಾರ ಜೊತೆಯೇ ಮಾತನಾಡಿದರೂ ಅವರೊಂದಿಗೆ ಸಂಬಂಧವಿದೆ ಅಂತಾ ಪದೇ ಪದೇ ಪತ್ನಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ.

ಒಂದು ವರ್ಷದಿಂದ ಗಂಡ ಮತ್ತು ಹೆಂಡತಿ ಇಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದರು. ಪತಿ ತನ್ನ ಗಂಡು ಮಗುವನ್ನು ಕರೆದುಕೊಂಡು ತುಮಕೂರಿಗೆ ಹೋಗಿದ್ದನು. ಎರಡು ಹೆಣ್ಣು ಮಕ್ಕಳು ಬಿಆರ್ ಪಿಯ ಗೌರಿ ತಾಯಿ ಮನೆಯಲ್ಲಿ ವಾಸವಾಗಿದ್ದರು. ಈ ನಡುವೆ ಗೌರಿ ಬೆಂಗಳೂರಿನ ಶಾಹಿ ಗಾರ್ಮೇಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಮೊನ್ನೆಯಷ್ಟೇ ಸಂಕ್ರಾಂತಿಯ ಹಬ್ಬಕ್ಕೆಂದು ತಾಯಿ ಮನೆಗೆ ಬಂದಿದ್ದಳು.

ಗೌರಿ ಬಂದಿರುವ ಸುದ್ದಿ ತಿಳಿದ ಪತಿಯು ಬಿಆರ್ ಪಿಗೆ ಮಗನೊಂದಿಗೆ ಬಂದಿದ್ದನು. ಗಾರ್ಮೇಂಟ್ ಕೆಲಸ ಬಿಟ್ಟು ಇಬ್ಬರೂ ಮತ್ತೆ ಸಂಸಾರ ಮಾಡುವ ಪ್ರಸ್ತಾಪವನ್ನು ಪತಿರಾಯ ರವಿ ಮುಂದಿಟ್ಟಿದ್ದನು. ಆದ್ರೆ ಪತಿಯು ಆತ ಕೊಟ್ಟ ನರಕಯಾತನೆ ನೆನಸಿಕೊಂಡು ಆತನ ಜೊತೆ ಸಂಸಾರ ಮಾಡುವುದಕ್ಕೆ ನಿರಾಕರಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ಜೋರಾಗಿದೆ. ಪತ್ನಿಗೆ ಬುದ್ಧಿ ಕಲಿಸಬೇಕೆಂದ ಪತಿಯು ಪತ್ನಿಯ ಮುಖಕ್ಕೆ ಆಸಿಡ್ ಹಾಕಿದ್ದಾನೆ. ಸದ್ಯ ಆಸಿಡ್ ದಾಳಿಗೊಳಗಿರುವ ಪತ್ನಿಯು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪತ್ನಿಯಿಂದ ದೂರವಾಗಿ ತುಮಕೂರಿಗೆ ಹೋಗಿದ್ದ ಪತಿಗೆ ಅದ್ಯಾಕೋ ಮತ್ತೆ ಪತ್ನಿಯ ಜೊತೆ ಸಂಸಾರ ಮಾಡಬೇಕೆನ್ನುವ ಮನಸ್ಸು ಬಂದಿದೆ. ಗಂಡು ಮಗುವನ್ನು ಕರೆದುಕೊಂಡು ಹೋಗಿ, ಅಲ್ಲಿಯೇ ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಮಾಡಿಕೊಂಡಿದ್ದವ ಅವನು. ತುಮಕೂರಿನಿಂದ ಭದ್ರಾವತಿಯ ಪತ್ನಿಯ ಮನೆಗೆ ಬಂದ ಪತಿ ರವಿಗೆ ಪತ್ನಿಯು ಬೆಂಗಳೂರಿನಲ್ಲಿ ಹೋಗಿ ಉದ್ಯೋಗ ಮಾಡಿಕೊಂಡಿರುವುದು ಸಹಿಸಿಕೊಳ್ಳಲು ಆಗಿರಲಿಲ್ಲ.

ಪದೇ ಪದೇ ಪತ್ನಿಯ ಮೇಲೆ ಸಂಶಯ ಪಡುತ್ತಿದ್ದನು. ಈಗ ಮತ್ತೆ ಪತ್ನಿ ಜೊತೆಗೆ ಸಂಸಾರ ಮಾಡುವುದಕ್ಕೆ ಬಂದಿರುವುದು ಪತ್ನಿಗೆ ದೊಡ್ಡ ಅಚ್ಚರಿಯಾಗಿತ್ತು. 12 ವರ್ಷದ ಸಂಸಾರದಲ್ಲಿ ಈತ ಸಾಕಷ್ಟು ನೋವು ಕೊಟ್ಟಿದ್ದನು. ಈ ಹಿಂದೆಯೂ ಒಂದು ಸಲ ಪತ್ನಿಗೆ ಆಸಿಡ್ ದಾಳಿಗೆ ಯತ್ನಿಸಿದ್ದನು. ಅದೃಷ್ಟ ಚೆನ್ನಾಗಿತ್ತು… ಆ ದಿನ ಗೌರಿ ಬಚಾವ್ ಆಗಿದ್ದಳು.

ಆದ್ರೆ ಈ ಬಾರಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ತುಮಕೂರಿನಿಂದ ಬಂದು ಪತ್ನಿಯ ಮೇಲೆ ಪತಿಯು ಆಸಿಡ್ ಎರಚುವ ಮೂಲಕ ಕೊಲೆಗೆ ಯತ್ನಿಸಿದ್ದಾನೆ. ಈ ಆಸಿಡ್ ದಾಳಿಯ ಕುರಿತು ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ. ಮುಖ, ಹೊಟ್ಟೆ, ಬೆನ್ನಿಗೆ ಮತ್ತು ದೇಹದ ಇತರೆ ಕಡೆ ಸುಟ್ಟು ಹೋಗಿದೆ. ದಾಳಿಯ ಘಟನೆ ಬಳಿಕ ಪತಿಯು ಎಸ್ಕೇಪ್ ಆಗಿದ್ದಾನೆ. ಪೊಲೀಸರು ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ.

ಮದುವೆಯಾಗಿ 12 ವರ್ಷದ ಸಂಸಾರ ನಡೆದಿದೆ. ಮೂವರು ಮುದ್ದಾದ ಮಕ್ಕಳು. ಈ ನಡುವೆ ಪತಿಗೆ ಪತ್ನಿಯ ಮೇಲೆ ವಿನಾಕಾರಣ ಅನುಮಾನ. ಪತ್ನಿಯ ನಡತೆ ಮೇಲೆ ನಿರಂತವಾಗಿ ಸಂಶಯಪಟ್ಟು ಅವಳ ಬದುಕು ನರಕ ಮಾಡಿಬಿಟ್ಟಿದ್ದನು. ಪತಿಯಿಂದ ದೂರವಾಗಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಕೊಳ್ಳುತ್ತಿದ್ದ ಪತ್ನಿ ಮೇಲೆ ಆಸಿಡ್ ದಾಳಿ ಮಾಡಿದ್ದಾನೆ. ಪಾಪಿ ಪತಿಯ ಮಾಡಿದ ಕೃತ್ಯದಿಂದ ಸದ್ಯ ಪತ್ನಿಯು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಪಾಪಿ ಪತಿಗೆ ಆಸಿಡ್ ದಾಳಿಗೆ ತಕ್ಕ ಶಿಕ್ಷೆ ಆಗುವ ಮೂಲಕ ಸಂತ್ರಸ್ತೆ ಪತ್ನಿಗೆ ನ್ಯಾಯಸಿಗಬೇಕಿದೆ.

ವರದಿ: ಬಸವರಾಜ್ ಯರಗಣವಿ, ಟವಿ 9, ಶಿವಮೊಗ್ಗ