ಶಿವಮೊಗ್ಗ: ನಗರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ (Independence Day) ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ (KC Narayana Gowda) ಅವರಿಗೆ ಭದ್ರಾವತಿಯ ಮಾನವ ಹಕ್ಕುಗಳ ಹೋರಾಟ ಸಮಿತಿ ಸದಸ್ಯರು ಕಪ್ಪು ಬಾವುಟ ಪ್ರದರ್ಶಿಸಿ, ಘೋಷಣೆ ಕೂಗಿದರು. ಶಿವಮೊಗ್ಗದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಇದೇ ವೇಳೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹೋರಾಟ ಸಮಿತಿಯು ಧರಣಿ ನಡೆಸಿತು. ಸಮಿತಿಯ ಮುಖಂಡರಾದ ಬಿ.ಎನ್.ರಾಜು ಮತ್ತು ಬೆಂಬಲಿಗರು ಘೋಷಣೆಗಳನ್ನು ಕೂಗಿದರು.
ಸ್ವಾತಂತ್ರೋತ್ಸವ ಧ್ವಜಾರೋಹಣ ಬಳಿಕ ಸಚಿವ ಡಾ.ಕೆ.ಸಿ.ನಾರಾಯಣಗೌಡ ತೆರದ ಜೀಪಿನಲ್ಲಿ ಗೌರವ ವಂದನೆ ಸ್ವೀಕರಿಸುವ ವೇಳೆ ಸಮಿತಿ ಸದಸ್ಯರು ದಿಢೀರನೆ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಮತ್ತು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಸಮಿತಿಯ ಒಟ್ಟು 20 ಜನರು ಏಳು ಬೇಡಿಕೆಗಳನ್ನು ಮುಂದಿಟ್ಟರು. ಗ್ಯಾಲರಿಯಲ್ಲಿದ್ದ ಪ್ರತಿಭಟನಾಕಾರರನ್ನು ದೊಡ್ಡಪೇಟೆ ಪೊಲೀಸರು ತಕ್ಷಣ ವಶಕ್ಕೆ ಪಡೆದುಕೊಂಡರು.
ಕನ್ನಡದ ಕಗ್ಗೊಲೆ
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರು ಧ್ವಜಾರೋಹಣದ ಬಳಿಕ ಮಾಡಿದ ಭಾಷಣದಲ್ಲಿ ಕನ್ನಡದ ಕಗ್ಗೊಲೆಯಾಯಿತು. ಭಾಷಣಕ್ಕೆ ಸಚಿವರು ಸರಿಯಾದ ಸಿದ್ಧತೆ ಮಾಡಿಕೊಂಡಿರಲಿಲ್ಲ. ಆರಂಭದಿಂದ ಕೊನೆಯವರೆಗೆ ಕನ್ನಡ ಶಬ್ದಗಳನ್ನು ಉಚ್ಚರಿಸಲು ಪರದಾಡಿದರು. ಅನೇಕ ಕನ್ನಡ ಶಬ್ದಗಳನ್ನು ತಪ್ಪಾಗಿ ಬಳಸಿದರು. ಸಚಿವರ ವರ್ತನೆಯಿಂದ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ಮತ್ತು ಸಾರ್ವಜನಿಕರಿಗೆ ಮುಜುಗರವಾಯಿತು.
ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಭದ್ರಾವತಿಯಲ್ಲಿ ಅಳಿಲು ರಾಷ್ಟ್ರಧ್ವಜ ಹಿಡಿದು ಎಲ್ಲರ ಗಮನ ಸೆಳೆದಿದೆ. ಭದ್ರಾವತಿ ನಗರದ ಭೂತಗುಡಿ 5ನೇ ಕ್ರಾಸ್ ನಿವಾಸಿ ಅಶೋಕ ಸಾಕಿರುವ ಅಳಿಲು ರಾಷ್ಟ್ರ ಧ್ವಜ ಹಿಡಿದಿದ್ದು ನೋಡಿ ಕುಟುಂಬದ ಸದಸ್ಯರು ಅಚ್ಚರಿಪಟ್ಟರು.
ಸಿಗಂಧೂರು ದೇಗುಲದಲ್ಲಿ ಸ್ವಾತಂತ್ರ್ಯೋತ್ಸವ
ರಾಜ್ಯದ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಆಚರಣೆ ನಡೆಯಿತು. ಸ್ವಾತಂತ್ರ್ಯೋತ್ಸವ ಪ್ರಯುಕ್ತ ಚೌಡೇಶ್ವರಿ ದೇವಿಗೆ ಕೇಸರಿ, ಬಿಳಿ, ಹಸಿರಿನ ಸಿಂಗಾರ ಮಾಡಲಾಗಿತ್ತು. ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಧ್ವಜಾರೋಹಣ ನೆರವೇರಿಸಿದರು. ಸಿಗಂದೂರು ದೇವಾಲಯವು ಸಾಗರ ತಾಲೂಕಿನ ಶರಾವತಿ ನದಿ ಹಿನ್ನೀರಿನಲ್ಲಿದೆ.
ಆಟೊದಲ್ಲಿ ಬಂದ ಈಶ್ವರಪ್ಪ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಆಟೊದಲ್ಲಿ ಬಂದರು. ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣ ಆಟೊ ಸಂಘದ ವತಿಯಿಂದ ನಡೆದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕಾಗಿ ಆಟೋದಲ್ಲಿ ಬಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಧ್ವಜಾರೋಹಣ ನೆರವೇರಿಸಿದರು. ಈಶ್ವರಪ್ಪ ಸರಳತೆ ನೋಡಿ ಆಟೊ ಚಾಲಕರು ಸಂತಸಪಟ್ಟರು.