ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಇಂದು (ನ. 27) ಜಿಲ್ಲೆಯ ತೀರ್ಥಹಳ್ಳಿ (Thirthahalli) ತಾಲೂಕು ಕ್ರೀಡಾಂಗಣದಲ್ಲಿ 618 ಕೋಟಿ ರೂ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಸಾಥ್ ನೀಡಿದರು.
ಔಷಧಿಗಾಗಿ ಸರ್ಕಾರದಿಂದ 10 ಕೋಟಿ ರೂ ಬಿಡುಗಡೆ
ಮಲೆನಾಡು ಭಾಗದಲ್ಲಿ ಅತೀ ಮಳೆಯಾದ ಕಾರಣ 42,000 ಹೆಕ್ಟೇರ್ ಅಡಕೆ ಬೆಳೆಗೆ ಎಲೆಚುಕ್ಕೆ ರೋಗ ಬಂದಿದೆ ಎಂದು ತೀರ್ಥಹಳ್ಳಿ ತಾಲೂಕಿನ ಉಂಟೂರು ಕೈಮರ ಗ್ರಾಮದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಔಷಧಿಗಾಗಿ ಈಗಾಗಲೇ ಸರ್ಕಾರ 10 ಕೋಟಿ ರೂ ಬಿಡುಗಡೆ ಮಾಡಿದೆ. ರೋಗ ನಿಯಂತ್ರಣಕ್ಕೆ ಎಷ್ಟು ಹಣ ಖರ್ಚಾದರೂ ಕೊಡಲು ಸಿದ್ಧವಿದ್ದೇವೆ. ಅಡಕೆ ಬೆಳೆಗಾರರು ಧೈರ್ಯ ಕಳೆದುಕೊಳ್ಳುವುದು ಬೇಡ. ನಿಮ್ಮೊಂದಿಗೆ ಸರ್ಕಾರ ಇದೆ. ಬಗರ್ ಹುಕುಂ ಪ್ರದೇಶದಲ್ಲಿ ಅಡಕೆ ಬೆಳೆದಿರುವ ರೈತರಿಗೂ ಸರ್ಕಾರ ಸಹಾಯ ಮಾಡಲಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಭರವಸೆ ನೀಡಿದರು.
60 ವರ್ಷದ ಸಂತ್ರಸ್ತರ ಸಮಸ್ಯೆಗೆ ಡಿಸೆಂಬರ್ ಒಳಗೆ ಪರಿಹಾರ
ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ನೀಡಲು ನಾನು ಬದ್ಧನಿದ್ದೇನೆ. 60 ವರ್ಷದ ಸಂತ್ರಸ್ತರ ಸಮಸ್ಯೆಗೆ ಡಿಸೆಂಬರ ಒಳಗೆ ಪರಿಹಾರ ನೀಡಲಾಗುತ್ತದೆ. ಶರಾವತಿ ಸಂತ್ರಸ್ತರ ಸಮಸ್ಯೆ ಯನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸುತ್ತೇನೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಸಂತ್ರಸ್ತರ ಪರಿಹಾರ ನೀಡುತ್ತೇನೆ. ಇಷ್ಟು ವರ್ಷವಾದರೂ ಸಂತ್ರಸ್ತರ ಸಮಸ್ಯೆ ಕಾಂಗ್ರೆಸ್ ಯಾಕೆ ಬಗೆಹರಿಸಿಲ್ಲ. ಅವರ ಮುಳುಗಡೆಯತ್ತ ಕಾಂಗ್ರೆಸ್ ನಾಯಕರಿಗೆ ಚಿಂತೆ ಇದೆ. ಶರಾವತಿ ಮುಳುಗಡೆ ಸಂತ್ರಸ್ತರ ಪರ ಅವರಿಗೆ ಕಾಳಜಿಯಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ತೀರ್ಥಹಳ್ಳಿ ಅಭಿವೃದ್ಧಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಯಾವತ್ತೂ ಹಿಂದೇಟು ಹಾಕಿಲ್ಲ. ಹಿಂದಿನ ಸರ್ಕಾರದಲ್ಲಿ ಬಂದ 600 ಕೋಟಿ ಅನುದಾನ ಏನಾಯ್ತು? ನಾವು ಈಗ ತೀರ್ಥಹಳ್ಳಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತೀದ್ದೆವೆ. ಮೋದಿ ಸರ್ಕಾರ ಅವಧಿಯಲ್ಲಿ ಸಮಗ್ರ ಅಭಿವೃದ್ಧಿಯಾಗಿದೆ. ಇಡೀ ತೀರ್ಥಹಳ್ಳಿಯ ತಾಲೂಕಿನ ಮನೆ ಮನೆಗೆ ಕುಡಿಯುವ ನೀರು ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Sun, 27 November 22