ಶಿವಮೊಗ್ಗ: ವ್ಯವಹಾರದ ಹಿನ್ನೆಲೆಯಲ್ಲಿ ಅಪ್ಪ ಮತ್ತು ಮಗನಿಗೆ ಕಂಟ್ರಾಕ್ಟರ್ ಚಾಕು ಇರಿದಿದ್ದಾನೆ. ಇದರಿಂದ ಚಾಕು ಇರಿತಕ್ಕೊಳಗಾದ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಗ ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಿರಾಳಕೊಪ್ಪದ ಹಾರ್ಡ್ ವೇರ್ ಉದ್ಯಮಿ ದಯಾನಂದ ಹಾಗೂ ಇವರ ಪುತ್ರ ರಾಘವೇಂದ್ರ ಚಾಕು ಇರಿತಕ್ಕೊಳಗಾದವರು. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ದಯಾನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಂಟ್ರಾಕ್ಟರ್ ಕೋಟೇಶಪ್ಪ ಚಾಕು ಇರಿದ ಅರೋಪಿ. ಮೃತಪಟ್ಟ ದಯಾನಂದ್ ಅವರು ಶಿರಾಳಕೊಪ್ಪದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಆರಂಭದಲ್ಲಿ ಕೋಟೇಶಪ್ಪ ಎಂಬ ಕಂಟ್ರಾಕ್ಟರ್ ಗೆ ನೀಡಿದ್ದರು. ಆದರೆ ಇಬ್ಬರಿಗೂ ವ್ಯವಹಾರ ಸರಿ ಬರದ ಹಿನ್ನೆಲೆ, ಜೊತೆಗೆ ಕಾಮಗಾರಿ ಸರಿಯಾಗಿ ನಿರ್ವಹಿಸದಿದ್ದರಿಂದ ಕೋಟೇಶಪ್ಪನೊಂದಿಗಿನ ದಯಾನಂದ್ ವ್ಯವಹಾರ ಕಡಿದುಕೊಂಡಿದ್ದರು.
ಬಳಿಕ ದಯಾನಂದ ಅವರು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬೇರೆಯವರಿಗೆ ನೀಡಿದ್ದರು. ಇದರಿಂದ ಕೆರಳಿದ ಕೋಟೇಶಪ್ಪ, ಇಂದು ಬೆಳಗ್ಗೆ ದಯಾನಂದ ಹಾಗೂ ಅವರ ಪುತ್ರ ರಾಘವೇಂದ್ರ ತಮ್ಮ ಹಾರ್ಡ್ ವೇರ್ ಶಾಪ್ ಬಾಗಿಲು ತೆಗೆಯುತಿದ್ದಂತೆ ಏಕಾಏಕಿ ದಾಳಿ ನಡೆಸಿದ್ದಾನೆ. ದಾಳಿ ನಡೆಸಿ ದಯಾನಂದ್ ಹಾಗೂ ರಾಘವೇಂದ್ರ ಇಬ್ಬರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.