Duplicate Liquor: ಗೃಹ ಸಚಿವರ ತವರಿನಲ್ಲಿ ನಕಲಿ ಮದ್ಯ ಮಾರಾಟ ದಂಧೆ! ನಕಲಿ ಮದ್ಯ ತಂದ ಸಾವು?

| Updated By: ಸಾಧು ಶ್ರೀನಾಥ್​

Updated on: Jan 05, 2023 | 10:59 AM

araga jnanendra: ಗೃಹ ಸಚಿವರ ತವರಿನಲ್ಲಿ ಈಗಾಗಲೇ ಗಾಂಜಾ ಹಾವಳಿಯು ಮೀತಿ ಮೀರಿದೆ. ಈ ನಡುವೆ ಈಗ ನಕಲಿ ಮದ್ಯ ಮಾರಾಟ ದಂಧೆ ನಡೆಯುತ್ತಿರುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಈಗಾಗಲೇ ಮೂವರು ನಕಲಿ ಕಳಪೆ ಮದ್ಯ ಸೇವೆಯಿಂದ ಮೃತಪಟ್ಟಿರುವ ಕುರಿತು ಸಮಗ್ರ ತನಿಖೆಯಾಗಬೇಕಿದೆ.

Duplicate Liquor: ಗೃಹ ಸಚಿವರ ತವರಿನಲ್ಲಿ ನಕಲಿ ಮದ್ಯ ಮಾರಾಟ ದಂಧೆ! ನಕಲಿ ಮದ್ಯ ತಂದ ಸಾವು?
ನಕಲಿ ಮದ್ಯ ಮಾರಾಟ ದಂಧೆ!
Follow us on

ಗೃಹ ಸಚಿವರ (araga jnanendra) ತವರಿನಲ್ಲಿ ಮತ್ತೊಂದು ಹೊಸ ಸಮಸ್ಯೆ ಉದ್ಭವಿಸಿದೆ. ಶಿವಮೊಗ್ಗ ನಗರದಲ್ಲಿ ನಕಲಿ ಮದ್ಯದ ಹಾವಳಿ (duplicate liquor) ಶುರುವಾಗಿದೆ. ಹೀಗೆ ಮದ್ಯ ಸೇವಿಸಿದ ಯುವಕನೊಬ್ಬ (youth) ಸಾವಿಗೆ ಶರಣಾಗಿದ್ದಾನೆ. ಆತನ ಸಾವಿನಿಂದ ಕುಟುಂಬಸ್ಥರು ಅಕ್ರಮ ಮತ್ತು ನಕಲಿ ಮದ್ಯ ಮಾರಾಟದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಮದ್ಯ ತಂದ ಸಾವು (death) ಕುರಿತು ಒಂದು ವರದಿ ಇಲ್ಲಿದೆ.

ಶಿವಮೊಗ್ಗ ಕೆಳಗಿನ ತುಂಗಾನಗರದಲ್ಲಿ ಆಶು (27 ವರ್ಷ ವಯಸ್ಸು) ಎಂಬ ಯುವಕ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಮಂಗಳವಾರ ರಾತ್ರಿ ಈತ ಮದ್ಯ ಸೇವಿಸಿ ಮನೆಗೆ ಬಂದಿದ್ದನು. ಪೇಂಟರ್ ಕೆಲಸ ಮಾಡಿಕೊಂಡಿದ್ದ ಯುವಕನ ಆರೋಗ್ಯದಲ್ಲಿ ಏರುಪೇರು ಆಗಿದೆ. ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ.

ವೈದ್ಯರು ಕುಟುಂಬಸ್ಥರಿಗೆ ಹೆಚ್ಚು ಮದ್ಯ ಸೇವನೆಯಿಂದ ಲಿವರ್ ಹಾಳಾಗಿತ್ತು. ಹಾಗಾಗಿ ಮೃತಟ್ಟಿದ್ದಾನೆಂದು ಮಾಹಿತಿ ನೀಡಿದ್ದಾರೆ. ಯುವಕನಿಗೆ ಬೇರೆ ಯಾವುದೇ ಕಾಯಿಲೆಗಳು ಇರಲಿಲ್ಲ. ಕಾರ್ಮಿಕ ಆಗಿದ್ದರಿಂದ ಮದ್ಯದ ಸೇವನೆ ಚಟವಿತ್ತು. ಕೆಳಗಿನ ತುಂಗಾ ನಗರದಲ್ಲಿ ಕೆಲ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಜೋರಾಗಿ ನಡೆಯುತ್ತಿದೆ. ಅಲ್ಲಿ ಯಾವ ಮದ್ಯ ಪೂರೈಕೆ ಆಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ.

ತಡರಾತ್ರಿ ಬಳಿಕವೂ ಅಲ್ಲಿ ಮದ್ಯ ಸಿಗುವುದರಿಂದ ಸಹಜವಾಗಿ ಮದ್ಯವ್ಯಸನಿಗಳು ಗೂಡಂಗಡಿಯಲ್ಲಿ ಮದ್ಯ ಖರೀದಿಸಿ ಸೇವನೆ ಮಾಡುತ್ತಾರೆ. ಮೃತ ಯುವಕನೂ ಸಹ ಇಂತಹುದೇ ಗೂಡಂಗಡಿಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದನು. ಆತ ನಕಲಿ ಮದ್ಯ ಸೇವಿಸಿದ್ದರಿಂದ ಆತನ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಈ ಹಿನ್ನೆಲೆಯಲ್ಲಿ ಯುವಕ ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ಗೂಡಂಗಡಿ ಮತ್ತು ಮನೆಗಳಲ್ಲಿ ಸುಲಭವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಈ ನಡುವೆ ಕಳಪೆ ಗುಣಮಟ್ಟದ ನಕಲಿ ಮದ್ಯ ಮಾರಾಟವು ಒರಿಜನ್ ಮದ್ಯದ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಹೀಗೆ ನಕಲಿ ಮದ್ಯ ಸೇವನೆಯಿಂದ ಅನೇಕರ ಆರೋಗ್ಯದಲ್ಲಿ ಏರುಪೇರು ಆಗಿದೆ. ಇದೇ ರೀತಿ ಯುವಕನು ನಕಲಿ ಮದ್ಯ ಸೇವಿಸಿ ಮೃತಪಟ್ಟಿದ್ದಾನೆ ಎನ್ನುವುದು ಕುಟುಂಬಸ್ಥರ ಆರೋಪವಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ನಕಲಿ ಮದ್ಯ ಮಾರಾಟದ ಕುರಿತು ಸಮಗ್ರ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯ ಸಮೀಪದಲ್ಲಿಯ ಗೂಡಂಗಡಿಯಲ್ಲಿ ನಕಲಿ ಮದ್ಯ ಮಾರಾಟ ಆಗುತ್ತದೆ. ಆದ್ರೂ ಅಬಕಾರಿ ಮತ್ತು ಪೊಲೀಸರು ಯಾವುದೇ ಕ್ರಮ ವಹಿಸಿಲ್ಲ ಎಂದು ಮೃತನ ಕುಟುಂಬಸ್ಥರು ಮನೆ ಮುಂದೆ ಶವ ಇಟ್ಟು ತಮ್ಮ ಆಕ್ರೋಶ ಮತ್ತು ಅಕ್ರಂದನ ಹೊರಹಾಕಿದ್ದಾರೆ. ಒಂದು ತಿಂಗಳ ಹಿಂದೆ ರೆಹಮತ್ ವುಲ್ಲಾ ಮತ್ತು ಜಾಕೀರ್ ಎಂಬಿಬ್ಬರು ಇದೇ ರೀತಿ ನಕಲಿ ಮದ್ಯ ಸೇವಿಸಿ ಮೃತಪಟ್ಟಿದ್ದರಂತೆ. ಕೆಳಗಿನ ತುಂಗಾ ನಗರದಲ್ಲಿ ಇದು ಮೂರನೇ ಪ್ರಕರಣವೆಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.

ಗೃಹ ಸಚಿವರ ತವರಿನಲ್ಲಿ ಈಗಾಗಲೇ ಗಾಂಜಾ ಹಾವಳಿಯು ಮೀತಿ ಮೀರಿದೆ. ಈ ನಡುವೆ ಈಗ ನಕಲಿ ಮದ್ಯ ಮಾರಾಟ ದಂಧೆ ನಡೆಯುತ್ತಿರುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಈಗಾಗಲೇ ಮೂವರು ನಕಲಿ ಕಳಪೆ ಮದ್ಯ ಸೇವೆಯಿಂದ ಮೃತಪಟ್ಟಿರುವ ಕುರಿತು ಸಮಗ್ರ ತನಿಖೆಯಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ನಕಲಿ ಮದ್ಯ ಮಾರಾಟದ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

ವರದಿ: ಬಸವರಾಜ್ ಯರಗಣವಿ, ಟಿವಿ9, ಶಿವಮೊಗ್ಗ