ಭದ್ರಾವತಿಯಲ್ಲಿ ವೃದ್ಧ ದಂಪತಿ ಅನುಮಾನಸ್ಪದ ಸಾವು: ಸ್ಥಳಕ್ಕೆ ವಿಧಿವಿಜ್ಞಾನ ತಂಡ, ಶ್ವಾನ ದಳ ದೌಡು

ವೃದ್ಧ ದಂಪತಿ ಅನುಮಾನಸ್ಪದ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ನಿನ್ನೆಯೇ (ಜನವರಿ 19) ದಂಪತಿ ಸಾವನ್ನಪ್ಪಿದ್ದು, ಇಂದು (ಜನವರಿ 20) ಬೆಳಕಿಗೆ ಬಂದಿದೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು, ವಿಧಿವಿಜ್ಞಾನ ತಂಡ, ಶ್ವಾನ ದಳ ದೌಡಾಯಿಸಿದ್ದು, ಪರಿಶೀಲನೆ ನಡೆಸಿದೆ. ಇನ್ನೊಂದೆಡೆ ಮಕ್ಕಳು ಕೊಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಭದ್ರಾವತಿಯಲ್ಲಿ ವೃದ್ಧ ದಂಪತಿ ಅನುಮಾನಸ್ಪದ ಸಾವು: ಸ್ಥಳಕ್ಕೆ ವಿಧಿವಿಜ್ಞಾನ ತಂಡ, ಶ್ವಾನ ದಳ ದೌಡು
Jayyamma And Chandrappa
Edited By:

Updated on: Jan 20, 2026 | 8:12 PM

ಶಿವಮೊಗ್ಗ, (ಜನವರಿ 20): ವೃದ್ಧ ದಂಪತಿ ಅನುಮಾನಸ್ಪದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಭದ್ರಾವತಿಯ ( bhadravathi) ಭೂತನಗುಡಿ ಬಡಾವಣೆಯಲ್ಲಿ ನಡೆದಿದೆ. ಚಂದ್ರಪ್ಪ(80), ಪತ್ನಿ ಜಯಮ್ಮ(75) ಎನ್ನುವರ ಮೃತದೇಹಗಳು ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಪತ್ತೆಯಾಗಿವೆ. ನಿನ್ನೆಯೇ ದಂಪತಿ ಮೃತಪಟ್ಟಿದ್ದು, ಇಂದು (ಜನವರಿ 20) ಬೆಳಕಿಗೆ ಬಂದಿದೆ. ವೃದ್ಧ ದಂಪತಿ ಒಟ್ಟಿಗೆ ಮೃತಪಟ್ಟಿರುವ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದು, ಸ್ಥಳಕ್ಕೆ ಭದ್ರಾವತಿ ಓಲ್ಡ್ ಟೌನ್ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂದು ಬೆಳಿಗ್ಗೆ ಮಕ್ಕಳು ತಮ್ಮ ಪೋಷಕರಿಗೆ ಫೋನ್ ಮಾಡಿದಾಗ ದಂಪತಿಗಳು ಕರೆ ಸ್ವೀಕರಿಸಿಲ್ಲ. ಇದರಿಂದ ಆತಂಕಗೊಂಡ ಮಕ್ಕಳು ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳೀಯರು ಮನೆಗೆ ಹೋಗಿ ಪರಿಶೀಲಿಸಿದಾಗ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮನೆಯ ಬೆಡ್‌ರೂಮ್‌ನಲ್ಲಿ ಚಂದ್ರಪ್ಪ ಅವರ ಶವ ಪತ್ತೆಯಾದರೆ, ಹಾಲ್‌ನಲ್ಲಿ ಪತ್ನಿ ಜಯಮ್ಮ ಶವ ಬಿದ್ದಿರುವುದು ಕಂಡುಬಂದಿದೆ.

ಇದನ್ನೂ ಓದಿ: ಶಿವಮೊಗ್ಗ: ಕಾಲು ಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲು

ಸಾವಿನ ಸುತ್ತ ಅನುಮಾನಗಳ ಹುತ್ತ

ಮೃತ ಚಂದ್ರಪ್ಪ ಭದ್ರಾವತಿಯ ವಿಐಎಸ್​ಎಲ್ ನಿವೃತ್ತ ಉದ್ಯೋಗಿಯಾಗಿದ್ದು, ಮನೆಗೆ ನುಗ್ಗಿ ದರೋಡೆಕೋರರು ಹತ್ಯೆಗೈದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮನೆಯ ಪ್ರತ್ಯೇಕ ಕೊಠಡಿಯಲ್ಲಿ ವೃದ್ಧ ದಂಪತಿ ಶವಗಳು ಪತ್ತೆಯಾಗಿವೆ. ಹೀಗಾಗಿ ಕೊಲೆಯಾಗಿರಬಹುದು ಎಂದು ಮಕ್ಕಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ದಂಪತಿ ಮೈಮೇಲೆ ಯಾವುದೇ ಗಾಯದ ಗುರುತು ಪತ್ತೆ ಆಗಿಲ್ಲ. ಇದರಿಂದ ಈ ಪ್ರಕರಣ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

ರಾತ್ರಿ ಮಲಗಿದ್ದವರು ಬೆಳಗ್ಗೆ ಶವವಾಗಿ ಪತ್ತೆ

ಭೂತನಗುಡಿಯ ನಿವಾಸಿಗಳಾದ ಚಂದ್ರಪ್ಪ  ಮತ್ತು ಜಯಮ್ಮ ಸಾವನ್ನಪ್ಪಿದ ದಂಪತಿಗೆ ಮೂವರು ಗಂಡು ಮಕ್ಕಳಿದ್ದು, ಎಲ್ಲರೂ ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಅತ್ಯಂತ ಅನೂನ್ಯವಾಗಿದ್ದ ಈ ದಂಪತಿ ತಮ್ಮ ಮನೆಯಲ್ಲಿ ವಾಸವಿದ್ದರು. ಪ್ರತಿದಿನದಂತೆ ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್​​ಪಿ ಕಾರ್ಯಪ್ಪ, ವಿಧಿವಿಜ್ಞಾನ ತಂಡ ಹಾಗೂ ಶ್ವಾನ ದಳ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:57 pm, Tue, 20 January 26