ಶಿವಮೊಗ್ಗ, ಸೆಪ್ಟೆಂಬರ್ 2: ಇಬ್ಬರು ಮಕ್ಕಳು ಸೇರಿದಂತೆ ಐವರ ಮೇಲೆ ಹುಚ್ಚು ನಾಯಿ (Dog) ದಾಳಿ ಮಾಡಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಹೊಳೆಬೆಳಗಲು ಗ್ರಾಮದಲ್ಲಿ ನಡೆದಿದೆ. ನಂಜುಂಡಪ್ಪ ಹಾಗೂ ವಾಣಿ ದಂಪತಿಯ 6 ವರ್ಷದ ಬಾಲಕಿ ಬೇಬಿ ಮೇಲೆ ನಾಯಿ ದಾಳಿ ಮಾಡಿದೆ. ಶಾಲೆ ಮುಗಿಸಿ ಬಾಲಕಿ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಬೇಬಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸದ್ಯ ಗಾಯಾಳು ಬಾಲಕಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸಣ್ಣಪುಟ್ಟ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ. ಮಗುವಿನ ಪೋಷಕರು ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯತ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ನಾಯಿ ಸೆರೆ ಹಿಡಿಯುವಂತೆ ಹೊಳೆಬೆಳಗಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆನೇಕಲ್: ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು, ಬಾಲಕಿ ಗಂಭೀರ ಗಾಯಗೊಂಡಿರುವಂತಹ ಘಟನೆ ಕರ್ನಾಟಕದ ಗಡಿಭಾಗ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ.
ನಾಯಿ ದಾಳಿ ವೇಳೆ ಕಿರುಚಾಟ ಕೇಳಿ ಬಾಲಕಿಯನ್ನ ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ಗಂಭೀರ ಗಾಯಾಳು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬೀದಿ ನಾಯಿಗಳ ದಾಳಿ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನ ಬೃಂದಾವನದಲ್ಲಿ ಹುಚ್ಚುನಾಯಿ ಹಾವಳಿ ಹೆಚ್ಚಳವಾಗಿದ್ದು, ಬೃಂದಾವನ ವೀಕ್ಷಣೆಗೆ ಬಂದಿದ್ದ ಐವರು ಪ್ರವಾಸಿಗರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿ ಕಚ್ಚಿದೆ. ಹುಚ್ಚು ನಾಯಿ ದಾಳಿಗೆ ಸಿಲುಕಿದ ಐವರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೃಂದಾವನ ಅಧಿಕಾರಿಗಳ ವಿರುದ್ದ ಪ್ರವಾಸಿಗರು ಆಕ್ರೋಶ ಹೊರಹಾಕಿದ್ದಾರೆ.
ದಾವಣಗೆರೆ: ರಸ್ತೆ ಬದಿ ಮಲಗಿದ್ದ ಶ್ವಾನಗಳನ ಮೇಲೆ ವ್ಯಕ್ತಿಯೊಬ್ಬ ಕಾರು ಚಲಾಯಿಸಿಕೊಂಡು ಹೋಗಿರುವಂತಹ ಘಟನೆ ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕರೇಕಟ್ಟೆ ಗ್ರಾಮದ ಜಂಬಣ್ಣ ವೃತ್ತದ ಬಳಿ ನಡೆದಿತ್ತು. ಒಂದು ಶ್ವಾನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೇರಡು ಶ್ವಾನಗಳಿಗೆ ಸ್ಥಳೀಯರಿಂದ ಚಿಕಿತ್ಸೆ ನೀಡಲಾಗಿತ್ತು.
ಶ್ವಾನಗಳ ಮೇಲೆ ಅಪರಿಚಿತ ವಾಹನ ಹಾಸಿದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅಮಾನವೀಯವಾಗಿ ವರ್ತಿಸಿ ಶ್ವಾನಗಳ ಸಾವುಗೆ ಕಾರಣನಾದ ಕಾರ್ ಚಾಲಕನ ಪತ್ತೆಗೆ ಗ್ರಾಮಸ್ಥರು ಆಗ್ರಹಿಸಿದ್ದರು. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:49 pm, Sat, 2 September 23