ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಶಿವಮೊಗ್ಗಕ್ಕೆ ಶೀಘ್ರ ಎನ್​ಐಎ ಸಿಬ್ಬಂದಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 24, 2022 | 12:03 PM

ಪ್ರಕರಣ ಸಂಬಂಧ ಎನ್​ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು.

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: ಶಿವಮೊಗ್ಗಕ್ಕೆ ಶೀಘ್ರ ಎನ್​ಐಎ ಸಿಬ್ಬಂದಿ
ಶಿವಮೊಗ್ಗದಲ್ಲಿ ಕೊಲೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷ
Follow us on

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ (National Investigation Agency – NIA) ಹಸ್ತಾಂತರಿಸಿ ಆದೇಶ ಹೊರಡಿಸಿದೆ. ಪ್ರಕರಣದ ತನಿಖೆಗೆಂದು ಎನ್​ಐಎ ಸಿಬ್ಬಂದಿ ಶೀಘ್ರವೇ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಪ್ರಕರಣ ಸಂಬಂಧ ಎನ್​ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಕೊಲೆ ಪ್ರಕರಣದಲ್ಲಿ ಈವರೆಗೆ 10 ಆರೋಪಿಗಳನ್ನು ಬಂಧಿಸಲಾಗಿದ್ದು, ಇವರೆಲ್ಲರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (Unlawful Activities (Prevention) Act – UAPA) ಅನ್ವಯ ಪ್ರಕರಣ ದಾಖಲಾಗಿದೆ. ಯುಎಪಿಎ ಕಾಯ್ದೆಯ ಅನ್ವಯ ಪ್ರಕರಣಗಳನ್ನು ಸಾಮಾನ್ಯವಾಗಿ ದೇಶದ ಏಕತೆಗೆ ಭಂಗ ತರುವ ಉದ್ದೇಶದಿಂದ ಸಂಚು ನಡೆಸುವವರ ವಿರುದ್ಧ ದಾಖಲಿಸಲಾಗುತ್ತದೆ. ಈ ಕೊಲೆಯ ಹಿಂದೆ ದೊಡ್ಡಮಟ್ಟದ ಸಂಚು ಇರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್​ಐಎಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿತು.

ಫೆಬ್ರುವರಿ 20ರಂದು ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಅವರನ್ನು ದುಷ್ಕರ್ಮಿಗಳು ಇರಿದು ಕೊಂದಿದ್ದರು. ಕೊಲೆಯ ನಂತರ ಶಿವಮೊಗ್ಗದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ನಂತರದ ದಿನಗಳಲ್ಲಿ ಶಿವಮೊಗ್ಗ ಜಿಲ್ಲಾಡಳಿತವು ಕರ್ಫ್ಯೂ ಮತ್ತು ನಿರ್ಬಂಧದ ಆದೇಶಗಳನ್ನು ಜಾರಿಗೊಳಿಸಿತ್ತು. ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು.

ಪ್ರಕರಣ ಸಂಬಂಧ ಎನ್​ಐಎ ತನಿಖೆ ಆಗಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು. ಕರ್ನಾಟಕದಲ್ಲಿಯೂ ಕೇರಳ ಮಾದರಿ ಹಿಂಸಾಚಾರ ಆರಂಭಿಸುವ ಉದ್ದೇಶದಿಂದ ಪಿಎಫ್​ಐ ಮತ್ತು ಎಸ್​ಡಿಪಿಐ ಸಂಘಟನೆಗಳು ಸಂಚು ನಡೆಸಿವೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು.

ಇದನ್ನೂ ಓದಿ: ಶಿವಮೊಗ್ಗ ಗಲಭೆ ಪ್ರಕರಣ: ಇದು ಪೂರ್ವನಿಯೋಜಿತ ಷಡ್ಯಂತ್ರ; ಎನ್​ಐಎ ಮೂಲಕ ತನಿಖೆಗೆ ಆಗ್ರಹಿಸಿದ ಕೆಎಸ್ ಈಶ್ವರಪ್ಪ

ಇದನ್ನೂ ಓದಿ: ಹರ್ಷ ಕೊಲೆ ಹಿಂದೆ ಎಸ್‌ಡಿಪಿಐ, ಕೆಎಫ್‌ಡಿಯ ಪಾತ್ರವಿದೆ; ಸಂಸದ ಪ್ರತಾಪ್​ ಸಿಂಹ