ಶಿವಮೊಗ್ಗ: ಶಿವಮೊಗ್ಗದ ದುಮ್ಮಳ್ಳಿಯಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ಶೋಭ (50) ಕೊಲೆಯಾದ ಮಹಿಳೆ. ಪ್ರಕಾಶ ಎಂಬಾತ ತನ್ನ ಹೆಂಡತಿ ಶೋಭರನ್ನು ಕೊಲೆ ಮಾಡಿದ್ದಾನೆ. ಇಂದು ಬೆಳಗ್ಗೆ ಪ್ರಕಾಶ್, ಶೋಭಾಗೆ ರಾಡಿನಿಂದ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿ, ಪರಾರಿಯಾಗಿದ್ದಾನೆ. ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಪ್ರಕಾಶ್ ಬಂಧನ: ಆರೋಪಿ ಪ್ರಕಾಶ್ ನನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಾವು ಹಿಡಿಯುವ ಕೆಲಸ ಮಾಡುತ್ತಿದ್ದ ಆತ, ಸ್ನೇಕ್ ಪ್ರಕಾಶ್ ಎಂದೇ ಚಿರಪರಿಚಿತನಾಗಿದ್ದ.
ಶೋಭಾ ದುಮ್ಮಳ್ಳಿಯಲ್ಲಿ ಹಾಲಿನ ಅಂಗಡಿ ನಡೆಸುತ್ತಿದ್ದರು. ಪತಿಯೊಂದಿಗೆ ಸಂಸಾರದಲ್ಲಿ ಸರಿಬಾರದ ಕಾರಣ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇಬ್ಬರ ನಡುವಿನ ವೈಮನಸ್ಸಿನಲ್ಲಿ ಶೋಭಾ ಪತಿಯ ವಿರುದ್ಧ ದೂರು ದಾಖಲಿಸಿದ್ದರು. ದೂರು ವಾಪಸ್ ತೆಗೆದುಕೊಳ್ಳುವಂತೆ ಪತಿ ಅನೇಕ ಬಾರಿ ಪತ್ನಿಗೆ ಎಚ್ಚರಿಕೆ ನೀಡಿದ್ದ.ವ ಮಾತು ಕೇಳದ ಹಿನ್ನೆಲೆಯಲ್ಲಿ ಪತಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಶೋಭಾರ ಮಗಳಿಗೆ ಮದುವೆಯಾಗಿದೆ. 9 ತಿಂಗಳ ಹಿಂದೆ ಎಂಆರ್ ಎಸ್ ವೃತ್ತದ ಬಳಿ ನಡೆದ ಅಪಘಾತದಲ್ಲಿ ಮಗ ಮಧು ಸಾವಿಗೀಡಾಗಿದ್ದಾನೆ. ಈಗ ಪ್ರಕಾಶ್, ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಖಾರದಪುಡಿ, ಎರಡು ಚಾಕು ಹಾಗೂ ಚೂರಾದ ಇಟ್ಟಿಗೆಗಳು ಮೃತ ಶೋಭಾರ ಸುತ್ತಮುತ್ತ ಬಿದ್ದಿವೆ. ಶೋಭಾ ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕು ಕಿಕ್ಕೇರಿಯ ವಾಸಿ. 20 ವರ್ಷದ ಹಿಂದೆ ಪ್ರಕಾಶ್ ನನ್ನ ಬಿಟ್ಟಿದ್ದರು.
ಸಹೋದರರ ನಡುವೆ ಗಲಾಟೆ: ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಕೊಲೆಗೈದ ಮೈದುನ
ತುಮಕೂರು: ಕ್ಷುಲ್ಲಕ ವಿಚಾರಕ್ಕೆ ಸಹೋದರರ ನಡುವೆ ಗಲಾಟೆ ನಡೆದಿತ್ತು. ಆದರೆ ಆ ಗಲಾಟೆಯಲ್ಲಿ ಮೈದುನನಾದವನು ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಕೊಲೆಗೈದಿದ್ದಾನೆ. ತ್ರಿಶಾ (35) ಕೊಲೆಯಾದ ಮಹಿಳೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ರಘು ಅರೆಸ್ಟ್ ಆಗಿದ್ದಾನೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ಘಟನೆ ನಡೆದಿದೆ. ಮೂಲತಃ ವಿಶಾಖಪಟ್ಟಣಂ ನಿವಾಸಿಯಾಗಿರುವ ತ್ರಿಶಾ ಕುಟುಂಬ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ಟೆಂಟ್ ಹಾಕಿಕೊಂಡು ವಾಸವಾಗಿದ್ರು.
ತ್ರಿಶಾ ಪತಿ ಹಾಗೂ ಮೈದುನ ರಘು ತುಮಕೂರು ಹೊರವಲಯದಲ್ಲಿ ತಲೆಕೂದಲು ಹಾಗೂ ಗುಜರಿ ವ್ಯಾಪಾರ ಮಾಡ್ತಿದ್ದರು. ಇಂದು ಬೆಳಗ್ಗೆ ಕ್ಷುಲ್ಲಕ ವಿಚಾರಕ್ಕೆ ಮೃತ ತ್ರಿಶಾ ಪತಿ ವಿಜಯಕುಮಾರ್ ಜೊತೆ ಗಲಾಟೆ ಮಾಡಿಕೊಂಡಿದ್ದಾನೆ. ಗಲಾಟೆ ಬಿಡಿಸಲು ಹೋದ ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಆರೋಪಿ ರಘು ಎಸ್ಕೇಪ್ ಆಗಿದ್ದ. ತೀವ್ರ ರಕ್ತಸ್ರಾವದಿಂದ ತ್ರಿಶಾ ಸಾವನ್ನಪ್ಪಿದಳು. ಎಸ್ಕೇಪ್ ಆಗಿದ್ದ ಆರೋಪಿಯನ್ನ ಗುಬ್ಬಿ ತಾಲೂಕಿನ ಚೇಳೂರು ಪೊಲೀಸರು ಕೊರಟಗೆರೆ ಪಟ್ಟಣದಲ್ಲಿ ಬಂಧಿಸಿದ್ದಾರೆ. ಘಟನೆ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನನೊಂದು ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ನಿವಾಸಿ ದೀಪಕ್ (36) ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಮನನೊಂದು ನೇಣು ಬಿಗಿದುಕೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ದೀಪಕ್ ಗೆ ಗಂಡು ಮಗು ಜನಿಸಿತ್ತು. ಎರಡು ದಿನದಲ್ಲಿ ಮಗು ನಾಮಕರಣ ಕಾರ್ಯಕ್ರಮವಿತ್ತು. ಅದಕ್ಕೂ ಮುಂಚೆ ದೀಪಕ್ ಮಸಣ ಸೇರಿದ್ದಾರೆ. ಖಾಸಗಿ ಬ್ಯಾಂಕ್ ನ ಮಾಜಿ ಉದ್ಯೋಗಿಯಾಗಿದ್ದ ದೀಪಕ್, ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದ. ಕೆಲಸ ಕಳೆದುಕೊಂಡು ಮಾನಸಿಕವಾಗಿ ನೊಂದಿದ್ದ ದೀಪಕ್ ನೇಣಿಗೆ ಶರಣಾಗಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 1:06 pm, Sat, 5 November 22