ಶಿವಮೊಗ್ಗ: ಕೋಮು ಗಲಭೆ, ಚೂರಿ ಇರಿತ, ಪೊಲೀಸ್ ಕಾರ್ಯಾಚರಣೆ ಮತ್ತು ರಾಜಕಾರಿಣಿಗಳ ತಂತ್ರ-ಪ್ರತಿತಂತ್ರಗಳಿಂದ ಹೈರಾಣಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ದಳ್ಳುರಿ (Shivamogga Communal Violence) ಸದ್ಯಕ್ಕೆ ತಣಿಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಪಥ ಸಂಚಲನ ನಡೆಸಿ ದುಷ್ಕರ್ಮಿಗಳಲ್ಲಿ ಭಯ ಹುಟ್ಟಿಸಲು ಮತ್ತು ನಾಗರಿಕರಲ್ಲಿ ಧೈರ್ಯ ತುಂಬಲು ಯತ್ನಿಸಿದ್ದರು. ಆದರೂ ಹಿಂಸಾಚಾರದ ಕೃತ್ಯಗಳು ಮಾತ್ರ ಎಂದಿನಂತೆಯೇ ಮುಂದುವರಿಯುತ್ತಿರುವುದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.
ನಿಷೇಧಾಜ್ಞೆಯ ನಡುವೆಯೂ ಭದ್ರಾವತಿಯ (Bhadravati) ನೆಹರು ಬಡಾವಣೆಯಲ್ಲಿ ಗಲಾಟೆ ನಡೆದಿದೆ. ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದ್ದು, ಚಾಕುವಿನಿಂದ ಇರಿಯಲು ಯತ್ನಿಸಲಾಗಿದೆ. ಕಾರ್ಯಕರ್ತ ಸುನಿಲ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಾಳುವನ್ನು ಪ್ರಸ್ತುತ ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಡಿಚ್ಚಿ ಆಲಿಯಾಸ್ ಮುಬಾರಕ್ ಸೇರಿದಂತೆ ಮೂವರ ಮೇಲೆ ಆರೋಪ ಕೇಳಿಬಂದಿದೆ.
ಪ್ರತಿಪಕ್ಷಗಳ ಕುಮ್ಮಕ್ಕು: ಈಶ್ವರಪ್ಪ
ಪ್ರತಿಪಕ್ಷಗಳು ಹಿಂದೂ-ಮುಸ್ಲಿಂ ಗಲಭೆ ತಂದು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿವೆ. ಇದು ಎಂದಿಗೂ ಈಡೇರುವುದಿಲ್ಲ. ಶಿವಮೊಗ್ಗದಲ್ಲಿ ಸ್ಥಳೀಯ ಹಿಂದೂ-ಮುಸ್ಲಿಮರು ಅಣ್ಣತಮ್ಮಂದಿರಂತೆ ಬಾಳುತ್ತಿದ್ದಾರೆ. ಆದರೆ ಕೇರಳ ಮತ್ತು ಇತರ ರಾಜ್ಯಗಳಿಂದ ಬರುವ ಎಸ್ಡಿಪಿಐ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರು ಗಲಭೆ ಹಬ್ಬಿಸಲು ಯತ್ನಿಸುತ್ತಿದ್ದಾರೆ. ಇದು ಎಂದಿಗೂ ಯಶಸ್ವಿಯಾಗುವುದಿಲ್ಲ. ಶಿವಮೊಗ್ಗ ಗಲಭೆಗೆ ಕಾಂಗ್ರೆಸ್ ಕಾರ್ಪೊರೇಟರ್ ಗಂಡನೇ ಕಾರಣ. ಬಿಜೆಪಿ ಮೇಲೆ ಅರೋಪ ಮಾಡುವ ಮೊದಲು ಕಾಂಗ್ರೆಸ್ ಪಕ್ಷ ಇಂಥವರ ಮೇಲೆ ಕ್ರಮ ಜರುಗಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಶಿವಮೊಗ್ಗ ನಗರದಲ್ಲಿ ಸರ್ಕಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವೂ ಯಶಸ್ವಿಯಾಗಿತ್ತು. ನಂತರ ನಡೆದ ಬಿಜೆಪಿಯ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿಯೂ ಸಾಕಷ್ಟು ಜನರು ಸೇರಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಎಲ್ಲರೂ ಮನೆಗಳಿಗೆ ಹೋದೆವು. ಅಷ್ಟರೊಳಗೆ ಕೆಲ ಕಿಡಿಗೇಡಿಗಳು ಸಾರ್ವಕರ್ ಪೋಟೊ ಹರಿದು ಹಾಕಿದ್ದರು. ಎಸ್ಡಿಪಿಐ ಕಾರ್ಯಕರ್ತರ ಈ ಕೃತ್ಯದಿಂದ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನೆಲೆಗೊಂಡಿತು ಎಂದು ಹೇಳಿದರು.
ಈಶ್ವರಪ್ಪಗೆ ಕಾಮಾಲೆ ಕಣ್ಣು: ಸಿದ್ದರಾಮಯ್ಯ
ಶಿವಮೊಗ್ಗ ಗಲಭೆಗೆ ಕಾಂಗ್ರೆಸ್ ಕಾರಣ ಎನ್ನುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಾರಾಸಗಟಾಗಿ ನಿರಾಕರಿಸಿದ್ದಾರೆ. ಈಶ್ವರಪ್ಪ ವಿರುದ್ಧ ಕಿಡಿಕಾರಿರುವ ಅವರು, ‘ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ. ಹಾಗಾಗಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮೊದಲು ಕಿತಾಪತಿ ಮಾಡುವವರು ಬಿಜೆಪಿಯವರೇ. ಬಳಿಕ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಾರೆ. ಮುಸ್ಲಿಮರು ಹೆಚ್ಚಾಗಿರುವ ಪ್ರದೇಶದಲ್ಲಿ ಸಾವರ್ಕರ್ ಫೋಟೋ ಹಾಕಿದ್ದಾರೆ. ಹೀಗ್ಯಾಕೆ ಮಾಡಬೇಕಿತ್ತು ಎಂದು ಅವರು ಪ್ರಶ್ನಿಸಿದರು.
Published On - 12:07 pm, Tue, 16 August 22