
ಶಿವಮೊಗ್ಗ, ಆಗಸ್ಟ್ 02: ಮಲೆನಾಡು ಭಾಗದಲ್ಲಿ ಮಳೆ ಅವಾಂತರಕ್ಕೆ ಸಾಲು ಸಾಲು ಅನಾಹುತಗಳು ನಡೆಯುತ್ತಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ಗುಡ್ಡ ಕುಸಿದ ಪರಿಣಾಮ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವ ಘಟನೆ ನಡೆದಿದೆ. ತಡರಾತ್ರಿ 2:30 ವೇಳೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ಗುಡ್ಡ ಕುಸಿದಿದೆ ಎನ್ನಲಾಗಿದ್ದು, ಗುಡ್ಡದ ಕೆಳಭಾಗದಲ್ಲಿ ಶಡ್ ನಿರ್ಮಾಣ ಮಾಡಿಕೊಂಡು ಕುಟುಂಬ ವಾಸವಿತ್ತು ಎನ್ನಲಾಗಿದೆ. ಘಟನೆಯಲ್ಲಿ ಪಕ್ಕದ ಶೆಡ್ನಲ್ಲಿದ್ದವರಿಗೂ ಗಂಭೀರ ಗಾಯಗಳಾಗಿವೆ.
ಮೃತರನ್ನು ಮಲ್ಲಿಕಾರ್ಜುನ (35), ನಾಗವೇಣಿ (28), ಸಂತೋಷ (3) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆಗಾರು ಗ್ರಾಮದ ನಿವಾಸಿಗಳು ಎಂಬುದು ತಿಳಿದುಬಂದಿದೆ. ಮಣ್ಣಿನಡಿ ಸಿಲುಕಿ ಮೂವರೂ ಪ್ರಾಣ ಕಳೆದುಕೊಂಡಿದ್ದು, ಶವಗಳನ್ನು ಹೊರ ತೆಗೆಯಲು ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅವಾಂತರ: ಬಂಟ್ವಾಳದ ಹಲವು ಗ್ರಾಮಗಳು ಜಲಾವೃತ, ಕಬಿನಿ ನದಿ ಪಾತ್ರದಲ್ಲಿಯೂ ಪ್ರವಾಹದ ಭೀತಿ
ಘಟನಾ ಸ್ಥಳಕ್ಕೆ ತೀರ್ಥಹಳ್ಳಿಯ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದಾರೆ. ಅವಘಡ ನಡೆದ ಜಾಗ ಮಣ್ಣಲ್ಲಿ ಸಂಪೂರ್ಣ ಹೂತು ಹೋಗಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳದಿಂದಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೊತೆ ಮಾತನಾಡಿರುವ ಶಾಸಕರು, ಮೃತ ಕುಟುಂಬಕ್ಕೆ ಪರಿಹಾರ ಒದಗಿಸಲು ಕೋರಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Sun, 2 August 26