ಇಷ್ಟು ಬೆಂಬಲ ಸಿಗುವ ನಿರೀಕ್ಷೆ ಇರಲಿಲ್ಲ, ನಿರ್ದೋಷಿಯಾಗಿ ಮತ್ತೆ ಸಚಿವನಾಗುವೆ: ಈಶ್ವರಪ್ಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 15, 2022 | 2:04 PM

ನನ್ನ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಉತ್ತಮ ಕೆಲಸವಾಗಿವೆ. ಹೋರಾಟಕ್ಕೆ ಜಯ ಸಿಗುವ ವಿಶ್ವಾಸವಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಇಷ್ಟು ಬೆಂಬಲ ಸಿಗುವ ನಿರೀಕ್ಷೆ ಇರಲಿಲ್ಲ, ನಿರ್ದೋಷಿಯಾಗಿ ಮತ್ತೆ ಸಚಿವನಾಗುವೆ: ಈಶ್ವರಪ್ಪ
ಕೆ ಎಸ್​ ಈಶ್ವರಪ್ಪ
Follow us on

ಶಿವಮೊಗ್ಗ: ನನಗೆ ಇಷ್ಟು ಬೆಂಬಲ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು. ನನ್ನ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಉತ್ತಮ ಕೆಲಸವಾಗಿವೆ. ಹೋರಾಟಕ್ಕೆ ಜಯ ಸಿಗುವ ವಿಶ್ವಾಸವಿದೆ. ಹೊಸಪೇಟೆಯಲ್ಲಿ ನಡೆಯಲಿರುವ ಕಾರ್ಯಕಾರಿಣಿಯಲ್ಲಿ ಭಾಗಿಯಾಗುವ ಬಗ್ಗೆ ನಂತರ ತಿಳಿಸುತ್ತೇನೆ ಎಂದು ಹೇಳಿದರು. ನನ್ನ ವಿರುದ್ಧ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ. ಪ್ರಕರಣದಲ್ಲಿ ನಾನು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ನಾನು ತಪ್ಪು ಮಾಡಿಲ್ಲವೆಂದು ಪ್ರತಿಯೊಬ್ಬ ಕಾರ್ಯಕರ್ತನಿಗೂ ಗೊತ್ತು. ಇಂದು ಸಂಜೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸುತ್ತೇನೆ. ನಾನು ಒಬ್ಬನೇ ಹೋಗಬಾರದು ಎಂದು ಆಗ್ರಹಿಸುತ್ತಿರುವ ಕೆಲವು ಬೆಂಬಲಿಗರು ನನ್ನೊಡನೆ ಬರುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಯಕರ್ತರು ಮತ್ತು ನಾಯಕರ ಬೆಂಬಲದಿಂದ ಆತ್ಮಸ್ಥೈರ್ಯ ಹೆಚ್ಚಾಗಿದೆ ಎಂದು ತಿಳಿಸಿದರು.

ಈಶ್ವರಪ್ಪ ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದಂತೆಯೇ ಮಹಿಳಾ ಕಾರ್ಯಕರ್ತರು ಕಣ್ಣೀರಿಟ್ಟರು. ಬೇಡ, ರಾಜೀನಾಮೆ ಕೊಡುವುದು ಬೇಡ ಎಂದು ಘೋಷಣೆ ಕೂಗಿದರು. ನನ್ನ ಮೇಲೆ ಒಂದು ಆರೋಪ ಇದೆ. ಅದರ ತನಿಖೆ ಮಾಡಬೇಕಾಗಿದೆ . ಹಾಗಾಗಿ ರಾಜೀನಾಮೆ ನೀಡಬೇಕಾಗಿದೆ. ಇಲ್ಲದಿದ್ದರೆ ತನಿಖೆಯ ವೇಳೆ ಸಚಿವರ ಪ್ರಭಾವ ಇದೆ ಎಂದಾಗುತ್ತದೆ. ನಾನು ನಿರ್ದೋಷಿ ಎಂದು ನಿರೂಪಿತವಾಗಲು ತನಿಖೆ ನಡೆಯಬೇಕು. ನಾನು ನಿರ್ದೋಷಿಯಾಗಿ ಬರುತ್ತೇನೆ. ಮತ್ತೊಮ್ಮೆ ಸಚಿವ ಆಗಿಯೇ ಆಗುತ್ತೇನೆ ಎಂದು ಘೋಷಿಸಿದರು.

ಈಶ್ವರಪ್ಪ ಆರೋಪ ಮುಕ್ತರಾಗುತ್ತಾರೆ: ಆರಗ ಜ್ಞಾನೇಂದ್ರ

ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಆರೋಪ ಮುಕ್ತರಾಗಿ ಬಂದೇ ಬರುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಈಶ್ವರಪ್ಪ ಪರ ಬ್ಯಾಟಿಂಗ್ ಮಾಡಿದರು. ವಾಟ್ಸಾಪ್ ಡೆತ್​ನೋಟ್ ತನಿಖೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಇದು ನಿಜಕ್ಕೂ ಆತ್ಮಹತ್ಯೆಯೋ, ಕೊಲೆಯೋ ಎಂಬ ಶಂಕೆ ಇನ್ನೂ ಪರಿಹಾರವಾಗಿಲ್ಲ. ಉಡುಪಿಯ ಜಿಲ್ಲಾ ಪೊಲೀಷ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಪೊಲೀಸರು ಶೀಘ್ರವೇ ತಪ್ಪಿತಸ್ಥರನ್ನ ಪತ್ತೆ ಮಾಡಲಿದ್ದಾರೆ. ಸಂತೋಷ್ ಕುಟುಂಬಸ್ಥರ ಸಮ್ಮುಖದಲ್ಲೇ ಮರಣೋತ್ತರ ಪರೀಕ್ಷೆಯನ್ನೂ ಮಾಡಲಾಗಿದೆ. ಈಶ್ವರಪ್ಪ ಕಮಿಷನ್ ದಂಧೆ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ ಅವರು, ತನಿಖೆಯಲ್ಲಿ ಎಲ್ಲ ಸಂಗತಿಯನ್ನೂ ಬಯಲು ಮಾಡುತ್ತೇವೆ ಎಂದರು.

ಈಶ್ವರಪ್ಪ ಈಗಾಗಲೇ ನೈತಿಕ ಹೊಣೆ ಹೊತ್ತು ರಾಜಿನಾಮೆ‌ ನೀಡಿದ್ದಾರೆ. ಇದರಲ್ಲಿ ಪಕ್ಷದ ವರಿಷ್ಠರ ಒತ್ತಡವಿಲ್ಲ. ಪಾರದರ್ಶಕ ತನಿಖೆಗಾಗಿ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಈಶ್ವರಪ್ಪ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ, ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಸಂಗತಿ ತನಿಖೆಯಿಂದ ಬಯಲಾಗುತ್ತದೆ. ಈಶ್ವರಪ್ಪ ಆರೋಪ ಮುಕ್ತರಾಗಿ ಬರುತ್ತಾರೆ. ವಾಟ್ಸಪ್ ಡೆತ್​ನೋಟ್ ತನಿಖೆಯಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದರು.

ಈ ಮೊದಲು ಬೇರೊಂದು ಸಂದರ್ಭದಲ್ಲಿ ಮಾತನಾಡಿದ್ದ ಅವರು, ಸಂತೋಷ್ ಮೃತಪಟ್ಟಿದ್ದ ಕೊಠಡಿಗೆ ಪೊಲೀಸರು ಪ್ರವೇಶಿಸುವ ಮೊದಲೇ ಕಾಂಗ್ರೆಸ್ ನಾಯಕರು ಪ್ರತಿಭಟನೆ ಆರಂಭಿಸಿದ್ದರು. ಇದು ದುರ್ದೈವದ ಸಂಗತಿ ಎಂದಿದ್ದರು. ಯಾರೋ ಏನೋ ಹೇಳುತ್ತಾರೆ ಎಂದು ಈಶ್ವರಪ್ಪ ಅವರನ್ನು ಬಂಧಿಸಲು ಆಗದು ಎಂದು ಹೇಳಿದ್ದರು.

ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೂಚಿಸಿದ್ದಾರೆ. ಅಗತ್ಯವಿರುವ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ. ಡೆತ್​ನೋಟ್​ನಲ್ಲಿ ಈಶ್ವರಪ್ಪ ಹೆಸರು ಇರುವ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದರು.

ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿ ಕೇಸ್ ಹಾಕಿ ಬಂಧಿಸಬೇಕು -ರಾಜ್ಯಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಇದನ್ನೂ ಓದಿ: ಈಶ್ವರಪ್ಪ ಸುಳ್ಳಿನ ಫ್ಯಾಕ್ಟರಿ ಇದ್ದಂತೆ, ಅವರನ್ನ ಬಂಧಿಸಬೇಕು; ಕೆ.ಎಸ್.ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಆಕ್ರೋಶ