ಶಿವಮೊಗ್ಗ: ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ವೀರ್ ಸಾವರ್ಕರ್(Veer Savarkar) ಮತ್ತು ಟಿಪ್ಪು ಸುಲ್ತಾನ್ರ(Tipu Sultan) ಫ್ಲೆಕ್ಸ್ ವಿಚಾರವಾಗಿ ಭಾರೀ ಗಲಾಟೆಗಳಾಗುತ್ತಿದ್ದು ಲಾಠಿ ಪ್ರಹಾರವಾಗಿದೆ. ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆದ್ರೆ ಮತ್ತೊಂದು ಕಡೆ ಶಿವಮೊಗ್ಗದಲ್ಲಿ ದುಷ್ಕರ್ಮಿಗಳು ಇಬ್ಬರು ಯುವಕರಿಗೆ ಚಾಕು ಇರಿದಿದ್ದಾರೆ(Knife Attack).
ಶಿವಮೊಗ್ಗದ ಉಪ್ಪಾರಕೇರಿ ಬಡಾವಣೆಯಲ್ಲಿ ಪ್ರೇಮ್ಸಿಂಗ್ ಎಂಬುವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಾಯಾಳು ಪ್ರೇಮ್ಸಿಂಗ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಶಿವಮೊಗ್ಗದ ಅಶೋಕನಗರದಲ್ಲಿ ಪ್ರವೀಣ್(27)ಗೆ ಚೂರಿ ಇರಿಯಲಾಗಿದೆ. ಗಾಂಧಿ ಬಜಾರ್ನಲ್ಲಿ ಅಂಗಡಿ ನಡೆಸುತ್ತಿದ್ದ ಪ್ರವೀಣ್, ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಏಕಾಏಕಿ ಚೂರಿ ಇರಿದಿದ್ದಾರೆ. ಗಾಯಾಳು ಪ್ರವೀಣ್ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವೀರ್ ಸಾವರ್ಕರ್ ಭಾವಚಿತ್ರ ಇಡುವ ವಿಚಾರದಲ್ಲಿ ಮತ್ತೆ ಕಿರಿಕ್ ಆಗಿದೆ. ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಎರಡು ಕೋಮಿನ ನಡುವೆ ಜಟಾಪಟಿಯಾಗಿದೆ. ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಇಡಲು ಹೊರಟಿದ್ದ ಒಂದು ಗುಂಪು. ಬಳಿಕ ಸಾವರ್ಕರ್ ಫೋಟೋ ತೆರವು ಮಾಡಿದ್ದ ಪೊಲೀಸರು. ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೊ ಇಡಲು ನಿರಾಕರಿಸಿದ ಪೊಲೀಸರು. ಈ ವೇಳೆ ಎರಡು ಕೋಮಿನ ನಡುವೆ ಜಟಾಪಟಿ ನಡೆದಿದೆ. ಎರಡು ಕೋಮಿನವರಿಗೆ ಶಾಂತವಾಗಿರಲು ಪೊಲೀಸರು ಸೂಚನೆ ನೀಡಿದ್ದಾರೆ. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ. ಪ್ರತಿಭಟನೆ ನಡೆಯುವ ಸ್ಥಳಕ್ಕೆ ಮತ್ತೊಂದು ಕೋಮಿನ ಗುಂಪು ನುಗ್ಗಲು ಯತ್ನಿಸಿದ್ದು ಟಿಪ್ಪು ಸುಲ್ತಾನ್ ಫ್ಲೆಕ್ಸ್ ಇಡಲು ಮುಸ್ಲಿಂ ಸಂಘಟನೆ ಹುಡುಗರು ಗಲಾಟೆ ಮಾಡಿದ್ದಾರೆ. ಪೊಲೀಸರನ್ನೂ ಲೆಕ್ಕಿಸದೇ ಸಾವರ್ಕರ್ ಫ್ಲೆಕ್ಸ್ ಕಿತ್ತೊಗೆಯಲು ಯತ್ನ ನಡೆದಿದೆ. ಗುಂಪು ಚದರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ. ಪರಿಸ್ಥಿತಿ ತಹಬದಿಗೆ ತಂದ ಪೊಲೀಸರು ಎಲ್ಲೆಡೆ ಬಂದೋಬಸ್ತ್ ಕೈಗೊಂಡಿದ್ದಾರೆ. ಆದ್ರೆ ಬಿಗಿ ಭದ್ರತೆ ನಡುವೆಯೇ ದುಷ್ಕರ್ಮಿಗಳು ಇಬ್ಬರಿಗೆ ಚಾಕು ಇರಿದಿದ್ದಾರೆ.
ಶಿವಮೊಗ್ಗದಲ್ಲಿ ಗಲಾಟೆ ಹಿಂದೆ ದೊಡ್ಡ ಪಿತೂರಿ ಇದೆ
ಶಿವಮೊಗ್ಗ ಚೂರಿ ಇರಿತ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗದ ಗಲಾಟೆ ಹಿಂದೆ ದೊಡ್ಡ ಪಿತೂರಿ ಇದೆ. ಸುಭಾಷ್ ಚಂದ್ರ ಬೋಸ್ ಬಳಿಕ ಮತ್ತೊಬ್ಬ ಮಹಾನ್ ದೇಶಭಕ್ತ ಸಾವರ್ಕರ್ ಕಟೌಟ್ ತೆಗೆದವರು ದೇಶದ್ರೋಹಿಗಳು. ಅವರನ್ನು ಈ ಕೂಡಲೇ ಬಂಧಿಸಬೇಕು. ಮತ್ತೆ ಇಂಥ ಕೆಲಸ ಅವರು ಮಾಡದಂತೆ ಕ್ರಮ ತೆಗೆದುಕೊಳ್ಳಬೇಕು. ಶಿವಮೊಗ್ಗದಲ್ಲಿ ಸಾವರ್ಕರ್ ಗೆ ಅವಮಾನ ಮಾಡಲಾಗಿದೆ. ಈ ಅವಮಾನವನ್ನು ಬಿಜೆಪಿ ಸಹಿಸಲ್ಲ. ಇದನ್ನು ನಾವು ಇಲ್ಲಿಗೇ ಬಿಡಲ್ಲ. ಶಿವಮೊಗ್ಗದಲ್ಲಿ ಇತ್ತೀಚೆಗೆ ಮಾಲ್ ನಲ್ಲೂ ಸಾವರ್ಕರ್ ಫೋಟೋ ತೆಗೆದಿದ್ದರು. ಈಗ ಎರಡನೇ ಘಟನೆ ಆಗಿದೆ. ಸರ್ಕಾರ ಅವರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿ ಮಾಡಬೇಕು ಎಂದರು.
ಮಾಜಿ ಸಚಿವರ ಪುತ್ರ ಕಾಂತೇಶ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆಸಿ ನಾರಾಯಣ ಗೌಡ ಹಲ್ಲೆಗೊಳಗಾದ ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಸಚಿವರು, ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರ್ ರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರರಿಂದ ಮಾಹಿತಿ ಪಡೆದ ಸಿಎಂ
ಸಿಎಂ ಬೊಮ್ಮಾಯಿ ದೂರವಾಣಿ ಮೂಲಕ ಶಿವಮೊಗ್ಗ ಘಟನೆ ಬಗ್ಗೆ ಗೃಹ ಸಚಿವರಿಂದ ಮಾಹಿತಿ ಪಡೆದಿದ್ದಾರೆ. ಘಟನೆಗೆ ಕಾರಣವೇನು? ಸದ್ಯ ಶಿವಮೊಗ್ಗ ಪರಿಸ್ಥಿತಿ ಹೇಗಿದೆ ಎಂದು ಗೃಹ ಸಚಿವರಿಂದ ಮಾಹಿತಿ ಪಡೆದಿದ್ದಾರೆ. ಗೃಹ ಸಚಿವರಿದಂದಷ್ಟೇ ಅಲ್ದೇ ಡಿಜಿ ಐಜಿಪಿಯಿಂದಲ್ಲೂ ಶಿವಮೊಗ್ಗ ಘಟನೆಯ ಮಾಹಿತಿ ಪಡೆದಿದ್ದಾರೆ. ಯಾವುದೇ ಕಾರಣಕ್ಕೂ ಈ ಗಲಾಟೆ ಮುಂದುವರೆಯಬಾರದು. ಕಾನೂನು ಸುವ್ಯವಸ್ಥೆ ಹದೆಗೆಡದಂತೆ ನೋಡಿಕೊಳ್ಳಿ. ತಪ್ಪಿತಸ್ಥರನ್ನ ಕೂಡಲೇ ಬಂಧಿಸಿ ಎಂದು ಸಿಎಂ ಸೂಚನೆ ನೀಡಿದ್ದಾರೆ.
Published On - 5:21 pm, Mon, 15 August 22