2 ವರ್ಷ ಹಿಂದೆ ನಡೆದಿದ್ದ ಶಿಕ್ಷಕಿಯ ಸಾವಿಗೆ ಪ್ರತಿಕಾರ, ಸೇಡಿನ ಶಪಥ ಮಾಡಿದ್ದ ತಮ್ಮ, ಸ್ಕೆಚ್ ಹಾಕಿ ಮರ್ಡರ್ ಮಾಡಿದ -7 ಹಂತಕರು ಅಂದರ್ ಆದರು

| Updated By: ಸಾಧು ಶ್ರೀನಾಥ್​

Updated on: Nov 16, 2023 | 5:38 PM

ಅಕ್ಕನ ಸಾವಿಗೆ ಪ್ರತಿಕಾರ ತೆಗೆದುಕೊಳ್ಳುವುದಾಗಿ ಅಕ್ಕ ಸತ್ತ ದಿನವೇ ಸಹೋದರ ಕಾರ್ತಿಕ್ ಪ್ರತಿಜ್ಞೆ ಮಾಡಿದ್ದಾನೆ. ಅದರಂತೆ ಮಲ್ಲೇಶ್ ನನ್ನು ಸ್ಕೇಚ್ ಹಾಕಿ ಮೊನ್ನೆ ರಾತ್ರಿ ಕಾರ್ತಿಕ್ ಮತ್ತು ಆತನ ಆರು ಸ್ನೇಹಿತರು ಸೇರಿ ಹತ್ಯೆ ಮಾಡಿದ್ದಾರೆ. ಅಕ್ಕನ ಸಾವಿನ ಸೇಡನ್ನು ಥೇಟ್ ಸಿನಿಮೀಯ ರೀತಿಯಲ್ಲಿ ತಮ್ಮ ತೀರಿಸಿಕೊಂಡಿದ್ದಾನೆ.

2 ವರ್ಷ ಹಿಂದೆ ನಡೆದಿದ್ದ ಶಿಕ್ಷಕಿಯ ಸಾವಿಗೆ ಪ್ರತಿಕಾರ, ಸೇಡಿನ ಶಪಥ ಮಾಡಿದ್ದ ತಮ್ಮ, ಸ್ಕೆಚ್ ಹಾಕಿ ಮರ್ಡರ್ ಮಾಡಿದ -7 ಹಂತಕರು ಅಂದರ್ ಆದರು
ಪ್ರತಿಕಾರಕ್ಕೆ ಬಲಿಯಾದ ಮಲ್ಲೇಶ್, ಆತ್ಮಹತ್ಯೆ ಮಾಡಿಕೊಂಡಿದ್ದ ಶಿಕ್ಷಕಿ-ದೂರದ ಸಂಬಂಧಿ ಸ್ವಾತಿ ಅಲಿಯಾಸ್​ ಜ್ಯೋತಿ ಹಾಗೂ ತಮ್ಮ ಕಾರ್ತಿಕ್
Follow us on

ಎರಡು ವರ್ಷದ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ( teacher) ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಕ್ಕನ ಸಾವಿಗೆ ಅ ಒಬ್ಬ ವ್ಯಕ್ತಿ ಕಾರಣವಾಗಿದ್ದ. ಡೆತ್ ನೋಟ್ ನಲ್ಲಿ ಆತ ಕೊಟ್ಟಿರುವ ಟಾರ್ಚರ್ ಉಲ್ಲೇಖವಾಗಿತ್ತು. ಅಕ್ಕನ ಸಾವಿನ ಪ್ರತಿಕಾರಕ್ಕೆ ಸಹೋದರ (brother) ಮಾಡಿದ್ದ ಪ್ರತಿಜ್ಞೆ. ಎರಡು ವರ್ಷದಿಂದ ಅಕ್ಕನ ಸಾವಿನ ನೋವು, ಸಿಟ್ಟಿನ ಜ್ವಾಲೆ ಹೊತ್ತಿ ಉರಿಯುತ್ತಿತ್ತು. ಕೊನೆಗೆ ದೀಪಾವಳಿಯ ಬಲಿಪಾಡ್ಯದ ದಿನವೇ ತಮ್ಮನಾದವನು, ತನ್ನ ಆರು ಸ್ನೇಹಿತರ ಜೊತೆಗೂಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಕ್ಕನ ಸಾವಿನ ಲೆಕ್ಕವನ್ನು ತಮ್ಮ ಚುಕ್ತಾ (revenge) ಮಾಡಿದ್ದಾನೆ. ಮೊನ್ನೆ ನವೆಂಬರ್​ 14 ರಂದು ರಾತ್ರಿ ಬೈಕ್ ಮೇಲೆ ಮಲ್ಲೇಶ್ ಅಲಿಯಾಸ್ ಮಲ್ಲ (35) ಮನೆಗೆ ತೆರಳುತ್ತಿದ್ದ. ಈತನ ಬೈಕ್ ಗೆ ಹಿಂದಿನಿಂದ ಬೇರೊಂದು ಬೈಕ್ ಬಂದು ಗುದ್ದಿದೆ. ಮೊದಲು ಇದೊಂದು ಅಪಘಾತ ಅಂತಾ ಅಲ್ಲಿದ್ದವರೆಲ್ಲರೂ ಅಂದುಕೊಂಡಿದ್ದರು. ಬೈಕ್ ಗಳ ಅಪಘಾತವಾಗಿದೆ ಎಂದು ಸಹಾಯ ಮಾಡಲು ಮುಂದಾಗಿದ್ದರು. ಆದ್ರೆ ಗುದ್ದಿದ ಬೈಕ್ ನಲ್ಲಿದ್ದ ಯುವಕರು ಮತ್ತು ಆತನ ಸಹಚರರ ಕೈಯಲ್ಲಿ ಮಚ್ಚು, ಭರ್ಜಿಗಳಿದ್ದವು. ಏಕಾಏಕಿ ಅವರು ಬೈಕ್ ನಿಂದ ಕೆಳಗೆ ಬಿದ್ದಿದ್ದ ಮಲ್ಲೇಶನ ಮೇಲೆ ಅಟ್ಯಾಕ್ ಮಾಡುತ್ತಾರೆ. ಕೆಲವೇ ಕ್ಷಣದಲ್ಲಿ ಮಲ್ಲೇಶನ ಮೇಲೆ ಮನಸ್ಸಿಗೆ ಬಂದಂತೆ ಮಾರಕಾಸ್ತ್ರಗಳಿಂದ ದಾಳಿ ಮಾಡಿಬಿಡುತ್ತಾರೆ. ಬಳಿಕ ಆತನ ಮೇಲಿನ ಸಿಟ್ಟಿಗೆ ರಸ್ತೆಯಲ್ಲಿ ಬಿದ್ದಿದ್ದ ದೊಡ್ಡ ಕಲ್ಲು ತಂದು ಆತನ ತಲೆಯ ಮೇಲೆ ಎತ್ತಿಹಾಕುತ್ತಾರೆ. ಸ್ಥಳದಲ್ಲೇ ಮಲ್ಲೇಶ್ ಮೃತಪಡುತ್ತಾನೆ. ಅಲ್ಲಿಗೆ ಅವರ ಪ್ರತೀಕಾರ/ ಪ್ರತಿಜ್ಞೆ/ ಅಕ್ಕನ ಸಾವಿಗೆ ಶಾಂತಿ ನೆರವೇರಿದಂತಾಗುತ್ತದೆ (shivamogga murder).

ಅದಾಗುತ್ತಿದ್ದಂತೆ ಕೊಲೆ ಮಾಡಿದ ಹಂತಕರು ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಆ 7 ಜನರ ಗ್ಯಾಂಗ್ ದೀಪಾವಳಿ ಹಬ್ಬದ ದಿನವೇ ಮಲ್ಲೇಶ್ ಗೆ ಮುಹೂರ್ತ ಫಿಕ್ಸ್ ಮಾಡಿದ್ದರು. ಅಷ್ಟಕ್ಕೂ ಈ ಮಲ್ಲೇಶ್ ಯಾರು ಅಂತಾ ನೋಡಿದೋದಾದ್ರೆ… ಆತ ಶಿವಮೊಗ್ಗದ ಧರ್ಮರಾಯನ ಕೆರೆ ಬಡಾವಣೆಯ ನಿವಾಸಿ. ಎರಡು ವರ್ಷಗಳ ಹಿಂದೆ ಅದೇ ಏರಿಯಾದ ದೂರದ ಸಂಬಂಧಿ ಸ್ವಾತಿ ಅಲಿಯಾಸ್​ ಜ್ಯೋತಿ ಎನ್ನುವ ಶಿಕ್ಷಕಿಯ ಬೆನ್ನು ಬಿದ್ದಿದ್ದವ.

ಇನ್ನು ಮಲ್ಲೇಶ ವಿದ್ಯಾವಂತನಲ್ಲ. ಆ ಯುವ ಶಿಕ್ಷಕಿಯ ವಯಸ್ಸು ಇನ್ನೂ 22 ವರ್ಷ ಮಾತ್ರ. ಈತನಿಗೂ ಅವಳಿಗೂ ವಯಸ್ಸಿನ ವ್ಯತ್ಯಾಸವಿತ್ತು. ಅವಳು ಎಂ.ಕಾಂ. ಪದವೀಧರೆ. ಮಲ್ಲೇಶ ಪದೇ ಪದೇ ಮದುವೆಯಾಗು ಅಂತಾ ಪೀಡಿಸುತ್ತಿದ್ದನಂತೆ. ಸ್ವಾತಿ ಎಷ್ಟೇ ಬುದ್ದಿ ಹೇಳಿದ್ರೂ ಮಲ್ಲೇಶ ಮಾತ್ರ ಭಗ್ನ ಪ್ರೇಮಿಯಂತೆ ಅವಳ ಬೆನ್ನುಬಿದ್ದನಂತೆ.

ದಿನೇ ದಿನೇ ಈತನ ಹುಚ್ಚಾಟ ಜಾಸ್ತಿ ಆಯ್ತು. ಈತನ ಕಾಟ ತಡೆದುಕೊಳ್ಳಲು ಅವಳಿಗೆ ಆಗಲಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಸ್ವಾತಿ ಕಳೆದ ಎರಡು ವರ್ಷದ ಹಿಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ತನ್ನ ಸಾವಿಗೆ ಮಲ್ಲೇಶ್ ಕಾರಣವೆಂದು ಡೆತ್ ನೋಟ್ ಬರೆದಿಟ್ಟಿದ್ದಳು. ಈ ಪ್ರಕರಣದಲ್ಲಿ ಮಲ್ಲೇಶನ ಬಂಧನವಾಗಿತ್ತು. ಕೆಲ ತಿಂಗಳು ಜೈಲಿನಲ್ಲಿದ್ದ ಮಲ್ಲೇಶ್ ಬಳಿಕ, ಬೇಲ್ ಮೇಲೆ ಹೊರಗೆ ಬಂದಿದ್ದ.

ಅಕ್ಕನ ಸಾವಿಗೆ ಪ್ರತಿಕಾರ ತೆಗೆದುಕೊಳ್ಳುವುದಾಗಿ ಅಕ್ಕ ಸತ್ತ ದಿನವೇ ಸಹೋದರ ಕಾರ್ತಿಕ್ ಪ್ರತಿಜ್ಞೆ ಮಾಡಿದ್ದಾನೆ. ಅದರಂತೆ ಮಲ್ಲೇಶ್ ನನ್ನು ಸ್ಕೇಚ್ ಹಾಕಿ ಮೊನ್ನೆ ರಾತ್ರಿ ಕಾರ್ತಿಕ್ ಮತ್ತು ಆತನ ಆರು ಸ್ನೇಹಿತರು ಸೇರಿ ಹತ್ಯೆ ಮಾಡಿದ್ದಾರೆ. ಅಕ್ಕನ ಸಾವಿನ ಸೇಡನ್ನು ಥೇಟ್ ಸಿನಿಮೀಯ ರೀತಿಯಲ್ಲಿ ತಮ್ಮ ತೀರಿಸಿಕೊಂಡಿದ್ದಾನೆ.

ಮಲ್ಲೇಶನನ್ನು ಮರ್ಡರ್ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು. ತನ್ನ ತಮ್ಮ ಒಳ್ಳೆಯವನು. ಆತನನ್ನು ಉದ್ದೇಶಪೂರ್ವಕವಾಗಿ ಮರ್ಡರ್ ಮಾಡಿದ್ದಾರೆಂದು ಮೃತನ ಅಕ್ಕ ಮತ್ತು ತಾಯಿ ತಮ್ಮ ನೋವು ಹೊರ ಹಾಕುತ್ತಿದ್ದರು. ಕಾರ್ತಿಕ್ ಮತ್ತು ಹತ್ಯೆಗೀಡಾಗಿದ್ದ ಶಿಕ್ಷಕಿ ಸ್ವಾತಿಯ ತಾಯಿ ವಿನೋದಮ್ಮ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

ಆಗ ಈ ದುರುಳ ಮಲ್ಲೇಶನೇ ಸ್ವಾತಿ ತಾಯಿ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿದ್ದನು. ದೂರದ ಸಂಬಂಧಿ ಆಗಿದ್ದರಿಂದ ಎರಡೂ ಕುಟುಂಬದ ನಡುವೆ ಸಂಬಂಧ ಚೆನ್ನಾಗಿತ್ತು. ಚಿಕ್ಕ ವಯಸ್ಸಿನಿಂದ ಮಲ್ಲೇಶನಿಗೆ ಸ್ವಾತಿಯನ್ನು ಕೊಟ್ಟು ಮದುವೆ ಮಾಡುವುದಾಗಿ ಸ್ವಾತಿ ತಾಯಿ ಹೇಳಿದ್ದರಂತೆ.

ಆದ್ರೆ ಸ್ವಾತಿ ಬೆಳೆದು ದೊಡ್ಡವಳಾಗಿ ವಿದ್ಯಾವಂತೆ ಆಗಿ ಸ್ನಾತಕೋತ್ತರ ಪದವಿ ಪಡೆದಿದ್ದಳು. ಅದರ ಬಳಿಕ ಸ್ವಾತಿ ಮತ್ತು ಮಲ್ಲೇಶ್ ಮ್ಯಾರೇಜ್ ವಿಷಯ ಬಿರುಕು ಬಿಟ್ಟಿತ್ತು. ಸ್ವಾತಿ ಬೇರೆ ಯುವಕನ ಜೊತೆ ಮದುವೆ ಆಗಲು ಮುಂದಾಗಿದ್ದಳು. ಮನೆ ಮುಂದೆಯೇ ಬೇರೆ ಯುವಕನ ಜೊತೆ ಚಿಕ್ಕಂದಿನ ಹುಡುಗಿ ಮದುವೆ ಆಗುವುದನ್ನು ನೋಡಿಕೊಂಡಿರಲು ಮಲ್ಲೇಶನಿಗೆ ಸಾಧ್ಯವಾಗಿಲ್ಲ.

ನಮ್ಮ ಜಾಗ ಬಿಟ್ಟು ಬೇರೆ ಸ್ಥಳದಲ್ಲಿ ಮದುವೆ ಆಗಬೇಕೆಂದು ಮಲ್ಲೇಶನು ಸ್ವಾತಿ ಕುಟುಂಬಕ್ಕೆ ವಾರ್ನಿಂಗ್ ಮಾಡಿದ್ದನಂತೆ. ಇದೇ ವಿಚಾರವಾಗಿ ಸ್ವಾತಿ ಮತ್ತು ಮಲ್ಲೇಶ್ ನಡುವೆ ಮನಸ್ತಾಪ ಆಗಿತ್ತು. ಇದರ ಬಳಿಕ ಸ್ವಾತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳಂತೆ. ಆದರೆ, ಮಲ್ಲೇಶ್ ಕುಟುಂಬಸ್ಥರು ಸ್ವಾತಿ ಮತ್ತು ಅವರ ಕುಟುಂಬಸ್ಥರದ್ದೇ ತಪ್ಪೆಂದು ಕಣ್ಣೀರು ಹಾಕುತ್ತಿದ್ದರಂತೆ.

ಕಳೆದ ಎರಡು ವರ್ಷದಿಂದ ಮನಸ್ಸಿನಲ್ಲಿ ನೋವು ಇಟ್ಟುಕೊಂಡಿದ್ದ ತಮ್ಮ ಕಾರ್ತಿಕ. ಮಲ್ಲೇಶ್ ಬೇಲ್ ನಿಂದ ಬಂದ ಬಳಿಕ ಅಲರ್ಟ್ ಆಗಿದ್ದಾನೆ. ಆಗಲೇ ಆತನಿಗೆ ತನ್ನ ಕೊಲೆಗೆ ಸಂಚು ರೂಪಿಸುತ್ತಿರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಬೇಲ್ ಮೇಲೆ ಬಂದ ಬಳಿಕ, ಕಾರ್ತಿಕ್ ಮತ್ತು ಆತನ ಸ್ನೇಹಿತರ ಕಣ್ಣಿಗೆ ಬೀಳದಂತೆ ಮಲ್ಲೇಶ ಬುದ್ದಿವಂತಿಕೆಯಿಂದ ಇದ್ದ.

ಕೆಲವು ಕಾಲ ಬೆಂಗಳೂರು ಶಿವಮೊಗ್ಗ ಅಂತಾ ಮಲ್ಲೇಶ್ ಓಡಾಡಿಕೊಂಡಿದ್ದ. ಮಲ್ಲೇಶ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದವನು. ಮೊನ್ನೆ ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ ಗ್ರಾಮದಲ್ಲಿ ಒಬ್ಬನಿಗೆ ಹಣ ಕೊಟ್ಟಿದ್ದ. ಆ ಹಣದ ವಿಚಾರವಾಗಿ ಆ ಗ್ರಾಮಕ್ಕೆ ಹೋಗಿ ವಾಪಸ್ ತನ್ನ ಮನೆಯತ್ತ ಬೈಕ್ ಮೇಲೆ ಹೋಗುತ್ತಿದ್ದ.

ಈ ನಡುವೆ ಫ್ಲೈ ಓವರ್ ಬಳಿ ಇರುವ ವೈನ್ ಶಾಪ್ ನಲ್ಲಿ ಎಣ್ಣೆ ಹೊಡೆದುಕೊಂಡು ಹೊರಗೆ ಬಂದಿದ್ದಾನೆ. ಇನ್ನೇನು ಬೈಕ್ ಹತ್ತಿಕೊಂಡು ಮನೆಯತ್ತ ಮಲ್ಲೇಶ್ ಹೊರಟಿದ್ದವನು. ಈ ನಡುವೆ ಯಾವುದೋ ಮಾಯದಲ್ಲಿ ಕಾರ್ತಿಕನ ಸ್ನೇಹಿತ ಕಿರಣನ ಕಣ್ಣಿಗೆ ಮಲ್ಲೇಶ್ ಬಿದ್ದಿದ್ದಾನೆ. ಆತ ಕಾರ್ತಿಕ್ ಗೆ ಮಲ್ಲೇಶ್ ಇರುವ ಮಾಹಿತಿ ಕೊಟ್ಟಿದ್ದಾನೆ.

ಫ್ಲೈ ಓವರ್ ಕೆಳಗೆ ಬರುತ್ತಿದ್ದಂತೆ ಕಾರ್ತಿಕ್ ಮತ್ತು ಆತನ ಗ್ಯಾಂಗ್ ಮಲ್ಲೇಶನ ಕಥೆ ಮುಗಿಸಿಬಿಟ್ಟಿದ್ದಾರೆ. ಮೊದಲೇ ಪ್ಲ್ಯಾನ್ ಮಾಡಿದಂತೆ ಎಲ್ಲರೂ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಬಂದಿದ್ದರು. ಪ್ಲ್ಯಾನ್ ನಂತೆ ಮಲ್ಲೇಶನನ್ನು ಫ್ಲೈ ಓವರ್ ಬಳಿ ಅಟ್ಯಾಕ್ ಮಾಡಿ ಮರ್ಡರ್ ಮಾಡಿದ್ದರು. ಮಲ್ಲೇಶನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಸ್ವಾತಿಯ ತಮ್ಮ ಕಾರ್ತಿಕ್ ಸೇರಿದಂತೆ ಏಳು ಜನರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ತೀಕ್, ಕಿರಣ್, ಪ್ರಕಾಶ್, ಸುರೇಶ್ ಅಲಿಯಾಸ್ ಮಂಜು, ವೇಣುಗೋಪಾಲ್, ಶ್ರೇಯಸ್ ಪ್ರಭು ಈ ಏಳು ಜನರು ಮಲ್ಲೇಶನ ಕೊಲೆಯ ಆರೋಪಿಗಳಾಗಿದ್ದಾರೆ. ಅಕ್ಕನ ಸಾವಿನ ಸೇಡು ತೀರಿಸಿಕೊಳ್ಳಲು ಕಾರ್ತಿಕ್ ಮತ್ತು ಆತನ ಸ್ನೇಹಿತರು ಸೇರಿ ಮಲ್ಲೇಶನ ಮರ್ಡರ್ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಎರಡು ವರ್ಷದ ಅಕ್ಕನ ಸಾವಿಗೆ ತಮ್ಮನು ದೀಪಾವಳಿ ಹಬ್ಬದಂದು ಸೇಡು ತೀರಿಸಿಕೊಂಡಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಕೊಲೆ ಮಾಡಿದ ಕಾರ್ತಿಕ್ ಮತ್ತು ಆತನ ಸ್ನೇಹಿತರು ಈಗ ಜೈಲು ಸೇರುವಂತಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:37 pm, Thu, 16 November 23