ಶಿವಮೊಗ್ಗ: ಆಸ್ಪತ್ರೆಗೆ ಹೋಗಲು 108 ವಾಹನ ಇಲ್ಲದೆ ಗರ್ಭಿಣಿ ಒಬ್ಬರು ಪರದಾಟ ಪಟ್ಟ ಘಟನೆ ಸಾಗರ ತಾಲೂಕಿನ ತುಮರಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ತುಮರಿ ಗ್ರಾಮದಲ್ಲಿ ಆಸ್ಪತ್ರೆಗೆ ಹೋಗಲು ಸಮಸ್ಯೆ ಉಂಟಾಗಿದೆ. 108 ವಾಹನ ಕೆಟ್ಟು 25 ದಿನಗಳು ಕಳೆದ್ರೂ ದುರಸ್ತಿಪಡಿಸಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆರೋಪ ಮಾಡಿದ್ದಾರೆ. 108 ವಾಹನ ಇಲ್ಲದೆ ಇಬ್ಬರು ಗಾಯಾಳುಗಳು ಸಹ ಪರದಾಟ ಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಗೆ ತೆರಳಬೇಕಿತ್ತು. ಸಂಜೆಯಾಗುತ್ತಲೇ ಶರಾವತಿ ಹಿನ್ನೀರಿನಲ್ಲಿ ಲಾಂಚ್ ಸೇವೆ ಸ್ಥಗಿತ ಆಗುತ್ತದೆ. 120 ಕಿ.ಮೀ ಕ್ರಮಿಸಿ ತಾಲೂಕು ಆಸ್ಪತ್ರೆಗೆ ತೆರಳಬೇಕು. ಸಮಯಕ್ಕೆ ಸರಿಯಾಗಿ ಖಾಸಗಿ ವಾಹನ ಸಹ ಸಿಗದೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಿದ್ದಾರೆ.
ಚಿಕ್ಕಮಗಳೂರು: ಭದ್ರಾ ಡ್ಯಾಂ ಹಿನ್ನೀರಿಗೆ ಹಾರಿ ಯುವತಿ ಆತ್ಮಹತ್ಯೆ
ಭದ್ರಾ ಡ್ಯಾಂ ಹಿನ್ನೀರಿಗೆ ಹಾರಿ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಮೆಣಸೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಭದ್ರಾ ಹಿನ್ನೀರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಂದೆ ಸಾವಿನಿಂದ ನೊಂದು ಸ್ಪಂದನಾ (18) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ದೇಗುಲದ ಅರ್ಚಕ, ಟ್ರಸ್ಟಿ ನಡುವಿನ ಕಿತ್ತಾಟಕ್ಕೆ ಭಕ್ತರು ಹೈರಾಣು
ದೇಗುಲದ ಅರ್ಚಕ, ಟ್ರಸ್ಟಿ ನಡುವಿನ ಕಿತ್ತಾಟಕ್ಕೆ ಭಕ್ತರು ಹೈರಾಣಾಗುವ ಪರಿಸ್ಥಿತಿ ಎದುರಾಗಿದೆ. ಐದು ದಿನದಿಂದ ದೇವಸ್ಥಾನಕ್ಕೆ ಬೀಗ ಹಾಕಿದ್ದ ಟ್ರಸ್ಟಿ ಜಯಸೂರಿ ಕೆಲಸದಿಂದಾಗಿ ಭಕ್ತರು ಹೈರಾಣಾಗಿದ್ದಾರೆ. ಬೆಂಗಳೂರಿನ ವೈಯಾಲಿಕಾವಲ್ನಲ್ಲಿರುವ ವೆಂಕಟೇಶ್ವರ ದೇಗುಲಕ್ಕೆ ಕಳೆದ ಐದು ದಿನಗಳಿಂದ ಬೀಗ ಹಾಕಿಡಲಾಗಿದೆ. ದೇವಸ್ಥಾನದ ಅರ್ಚಕ ರಾಮಚಂದ್ರ ಭಟ್ಗೆ ಸ್ಥಳೀಯರ ಬೆಂಬಲ ಇದೆ. ಆದರೆ, ರಾಮಚಂದ್ರ ಸರಿಯಿಲ್ಲ ಬದಲಾಯಿಸುವಂತೆ ದೇಗುಲದ ಟ್ರಸ್ಟಿ ಜಯಸೂರಿ ನ್ಯಾಯಾಲಯದ ಮೆಟ್ಟಿಲೇರಿದ್ದದರು. ಅಂತಿಮ ತೀರ್ಪಿನವರೆಗೂ ಅರ್ಚಕರನ್ನ ಬದಲಿಸದಂತೆ ಆದೇಶ ಬಂದಿತ್ತು. ಹೀಗಾಗಿ, ಕಳೆದ 5 ದಿನದಿಂದ ಜಯಸೂರಿ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಜಯಸೂರಿ ಸ್ವಯಂ ಘೋಷಿತ ಟ್ರಸ್ಟಿ, ಆತನ ಮೇಲೆ ನಂಬಿಕೆ ಇಲ್ಲ ಎಂದು ದೇವಸ್ಥಾನದ ಬಾಗಿಲು ತೆಗೆಯುವಂತೆ ಸ್ಥಳೀಯರು ಪ್ರತಿಭಟಿಸಿದ್ದರು. ಬಳಿಕ ಪೊಲೀಸರು ದೇಗುಲದ ಬೀಗ ತೆಗೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಮಾಹಿತಿ ದೊರಕಿದೆ. ಇದೀಗ, ಕೋರ್ಟ್ ಆದೇಶ ಪಾಲಿಸಲು ಎರಡೂ ಕಡೆಯವರಿಗೆ ಸೂಚನೆ ಕೊಡಲಾಗಿದೆ.
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ವಿರುದ್ಧ ದಂಡ ವಸೂಲಿ
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದವರಿಂದ ದಂಡ ವಿಧಿಸಿ 40 ದಿನದಲ್ಲಿ 1000 ಕೇಸ್ ದಾಖಲಿಸಿ 2 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಬೆಂಗಳೂರಿನ ಬಂಡೇಪಾಳ್ಯ ಪೊಲೀಸರಿಂದ ಈ ಮೊತ್ತದ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಿಗರೇಟ್, ಟೊಬ್ಯಾಕೋ ಕಾಯ್ದೆಯಡಿ ದಂಡ ವಸೂಲಿ ಮಾಡಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.
ಚಿತ್ರದುರ್ಗ: ಕ್ರೂಸರ್ಗೆ ಬೈಕ್ ಡಿಕ್ಕಿ; ಇಬ್ಬರು ಸಾವು
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಕ್ರೂಸರ್ಗೆ ಬೈಕ್ ಡಿಕ್ಕಿ ಆಗಿ, ಇಬ್ಬರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ರಾಜಪ್ಪ (50), ಭೋಜರಾಜ (25) ಸಾವನ್ನಪ್ಪಿದ್ದಾರೆ. ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿಯ ನಿವಾಸಿಗಳು ಮೃತಪಟ್ಟಿದ್ದಾರೆ. ಕ್ರೂಸರ್ನಲ್ಲಿದ್ದ ನಾಲ್ವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಶಿವಮೊಗ್ಗ: ಎಪಿಎಂಸಿ ಯಾರ್ಡ್ ಮುಂಭಾಗ ಆಂಜನೇಯನ ಗುಡಿ ಧ್ವಂಸ ಪ್ರಕರಣ; ಬಜರಂಗ ದಳ, ವಿಹೆಚ್ಪಿ ಕಾರ್ಯಕರ್ತರ ಆಕ್ರೋಶ
ಇದನ್ನೂ ಓದಿ: ಶಿವಮೊಗ್ಗ: ಹಸುಗಳು ಹಾಲು ಕೊಡುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ರೈತ