ಬೆಳೆ ಕಾಯಲು ರಾತ್ರಿ ಹೊಲಕ್ಕೆ ಹೋದ ಮಗ ವಾಪಸ್ ಬರಲೇ ಇಲ್ಲ… ಹೊಲಕ್ಕೆ ಹೋಗಿ ಪೋಷಕರು ಹುಡುಕಾಡಿದ್ದಾರೆ… ಆದ್ರೆ ಮಗ ಮಾತ್ರ ಸಿಕ್ಕಿರಲಿಲ್ಲ.. ಮೂರು ದಿನಗಳ ಬಳಿಕ ಹಳ್ಳದಲ್ಲಿ ಶವ ಸಿಕ್ಕಿತ್ತು. ಆದರೆ ಆತನು ಮೃತಪಟ್ಟಿದ್ದು ಹೇಗೆ ಎನ್ನುವುದು ನಿಗೂಢವಾಗಿತ್ತು… ತಮ್ಮನ ಸಾವಿನ ರಹಸ್ಯ ಕುರಿತು ಒಂದು ವರದಿ ಇಲ್ಲಿದೆ. ಸೊರಬ ತಾಲೂಕಿನ (Soraba, Shivamogga) ಆನವಟ್ಟಿ ಪಟ್ಟಣದ ಸಮೀಪದ ತುಡಿನೀರು ಗ್ರಾಮದ ಸಲೀಂ (25 ವರ್ಷ) ಡಿಸೆಂಬರ್ 15 ರಂದು ರಾತ್ರಿ ಹೊಲದಲ್ಲಿ ಬೆಳೆ ಕಾಯುವುದಕ್ಕೆ ಹೋಗಿದ್ದ. ಮರುದಿನ ಆತ ವಾಪಸ್ ಮನೆಗೆ ಬರಲೇ ಇಲ್ಲ. ಇದರಿಂದ ಕುಟುಂಬಸ್ಥರು ಗಾಬರಿ ಆಗಿದ್ದರು. ಹೊಲದ ಸುತ್ತಮುತ್ತ ಎಲ್ಲೆಡೆ ಹುಡುಕಾಡಿದ್ದರು. ಆದರೆ ಸಲೀಂ (Brother) ಮಾತ್ರ ಇವರ ಕಣ್ಣಿಗೆ ಬೀಳಲಿಲ್ಲ. ಸಲೀಂ ನಾಪತ್ತೆ ಆಗಿರುವ ಕುರಿತು ಆನವಟ್ಟಿ ಪೂಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಡಿಸೆಂಬರ್ 18 ರಂದು ಅದೇ ಗ್ರಾಮದ ಹಳ್ಳದ ಪೊದೆಯಲ್ಲಿ ಯುವಕ ಸಲೀಂ ಶವ ಪತ್ತೆ ಆಗಿತ್ತು. ಮೃತ ಸಲೀಂ ತಲೆ ಮತ್ತು ಎಡಗಾಲಿನ ಹತ್ತಿರ ಯಾವುದೋ ಆಯುಧದಿಂದ ಹಲ್ಲೆ ಮಾಡಿರುವುದು ಪೊಲೀಸರ ಗಮನಕ್ಕೆ ಬರುತ್ತದೆ.. ಯುವಕರನ್ನು ಯಾರೋ ಕೊಲೆ ಮಾಡಿ ಹಳ್ಳದಲ್ಲಿ ಎಸೆದುಹೋಗಿರುವುದು ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಮೃತನ ಸಹೋದರನು (Property Dispute) ಸಲೀಂ ಕೊಲೆ ಆಗಿರುವ ಅನುಮಾನದ ಮೇಲೆ ಕೇಸ್ ದಾಖಲಿಸಿದ್ದನು.
ರಫೀಕ್ ಕೇವಲ ಮೋಜು ಮಸ್ತಿ ಹಿಂದೆ ಬಿದ್ದಿದ್ದನು. ಈತನಿಗೆ ಬಂದ ಜಮೀನಿನಲ್ಲಿ ನೆಟ್ಟಗೆ ಕೃಷಿ ಮಾಡಲಿಲ್ಲ. ಅದೇ, ತಮ್ಮ ಸಲೀಂ ಮನೆಯ ಎಲ್ಲ ಕುಟುಂಬ ಸದಸ್ಯರ ಜವಾಬ್ದಾರಿ ವಹಿಸಿ ಉತ್ತಮವಾಗಿ ಕೃಷಿ ಮಾಡುತ್ತಿದ್ದನು. ಇದರಿಂದ ತಮ್ಮ ಸಲೀಂ ಮೇಲೆ ರಫೀಕನಿಗೆ ದಿನೇ ದಿನೇ ದ್ವೇಷ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮನ ಹತ್ಯೆಗೆ ರಫೀಕ್ ಸ್ಕೆಚ್ ಹಾಕಿದ್ದನು ಎನ್ನುತ್ತಾರೆ ಮೃತನ ಸಹೋದರಿ ರುಕ್ಸಾನಾ.
ಪ್ರಕರಣದ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಿದ್ದರು. ಕೊಲೆಯಾದ ಸನ್ನಿವೇಶ ಮತ್ತು ಅದರ ಹಿಂದಿರುವ ಕಾರಣದ ಹಿಂದೆ ಬಿದ್ದಿದ್ದರು ಪೊಲೀಸರು. ಪೊಲೀಸರಿಗೆ ಸಲೀಂ ಕೊಲೆ ನಡೆದಿದ್ದು ಯಾವುದೋ ಬೇರೆ ವಿಷಯಕ್ಕೆ ಅಲ್ಲ. ಮನೆಯ ಆಸ್ತಿಗಾಗಿ ಎನ್ನುವುದು ಪಕ್ಕಾ ಆಗುತ್ತದೆ. ಹೀಗೆ ತನಿಖೆ ಚುರುಕುಗೊಳಿಸುತ್ತಾರೆ. ಈ ವೇಳೆ ಮೃತನ ಅಣ್ಣ ರಫೀಕ್ ನನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ.
ರಫೀಕ್ ನು ಮೃತ ಸಲೀಂನಿಗೆ ಅಣ್ಣನಾಗಿದ್ದು, ಜಮೀನಿನ ವಿಚಾರದಲ್ಲಿ ಇಬ್ಬರಿಗೂ ಆಗಾಗ ಜಗಳಗಳಾಗುತ್ತಿತ್ತು. ಕುಟುಂಬಕ್ಕೆ ಸುಮಾರು 10 ಎಕರೆ ಜಮೀನು ಇದೆ. ಅದರಲ್ಲಿ ಮೆಕ್ಕೆಜೋಳ ಮತ್ತು ಅಡಿಕೆ ತೋಟ ಇದೆ. ಮೂರು ಅಣ್ಣ ತಮ್ಮಂದಿರು… ರಫೀಕ್. ಇನಾಯತ್ ಮತ್ತು ಸಲೀಂ ಸಹೋದರರು.
ರಫೀಕ್ ಗೆ ಮೂರು ಎಕರೆ ಜಮೀನು ನೀಡಲಾಗಿದೆ. ಉಳಿದ 7 ಎಕರೆ ಸಲೀಂ ಮತ್ತು ಇನಾಯತ್ ಸೇರಿದಂತೆ ಕುಟುಂಬಸ್ಥರು ಸೇರಿ ಉಳುಮೆ ಮಾಡುತ್ತಿದ್ದರು. ಸಲೀಂ ಮನೆಯ ಜವಾಬ್ದಾರಿ ವಹಿಸಿದ್ದನು. ಕೃಷಿ ಚಟುವಟಿಕೆಯಲ್ಲಿ ತುಂಬಾ ಚುರುಕಾಗಿದ್ದನು. ಈ ಹಿನ್ನೆಲೆಯಲ್ಲಿ ಸಹೋದರ ರಫೀಕ್ ಗೆ ತಮ್ಮನ ಮೇಲೆ ದಿನೇ ದಿನೇ ದ್ವೇಷ ಹೆಚ್ಚಾಯಿತು.
ಮನೆಯಲ್ಲಿ ಊರಿನಲ್ಲಿ ತಮ್ಮನ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಇದರಿಂದ ರಫೀಕ್ ಗೆ ತಲೆಕೊಟ್ಟು ಹೋಗಿತ್ತಂತೆ. ಡಿಸೆಂಬರ್ 16 ರಂದು ಬೆಳಗಿನ ಜಾವ ಜಮೀನಿನಲ್ಲಿ ಮಲಗಿದ್ದ ಸಲೀಂನ ತಲೆಗೆ ದೊಣ್ಣೆಗಳಿಂದ ಬಲವಾಗಿ ಹೊಡೆದು ರಫೀಕ್ ಕೊಲೆ ಮಾಡಿದ್ದನಂತೆ. ಕೊಲೆಗೆ ರಫೀಕ್ ಗೆ ಅತನ ಸ್ನೇಹಿತ ಸಂತೋಷ ಸಾಥ್ ಕೊಟ್ಟಿದ್ದ.
ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಸಲೀಂ ನ ಮೃತ ದೇಹದ ಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಮೃತ ದೇಹ ಮತ್ತು ಮಲಗಿದ್ದ ಚಾಪೆ ಹಾಗೂ ಕೌದಿ ಸಮೇತ ಜಮೀನಿನ ಹತ್ತಿರದ ಬದನಿಕಟ್ಟೆ ಹಳ್ಳದ ಪೊದೆಯಲ್ಲಿ ಬಿಸಾಕಿದ್ದರು. ಕೊನೆಗೂ, ಆನವಟ್ಟಿ ಪೊಲೀಸರು ಕೊಲೆ ಪ್ರಕರಣ ಬಯಲು ಮಾಡಿದ್ದಾರೆ.
ಅವರದು ಅವಿಭಕ್ತ ಕುಟುಂಬ. ಆದರೂ ಹಿರಿಯ ಅಣ್ಣನಿಗೆ ಮನೆ ಜವಾಬ್ದಾರಿ ಕಡಿಮೆ. ಚಿಕ್ಕ ಮಗನಾದರೂ ಎಲ್ಲ ಜವಾಬ್ದಾರಿ ವಹಿಸಿಕೊಂಡು ಎಲ್ಲರ ಪ್ರೀತಿ ಗೆದ್ದಿದ್ದ. ಇಂತಹ ತಮ್ಮನ ಗುಣಗಳು ಮತ್ತು ಕೆಲಸವನ್ನು ನೋಡಿ ಹೆಮ್ಮೆ ಪಡುವುದು ಬಿಟ್ಟು.. ಅಸೂಯೆ ದ್ವೇಷದಿಂದ ಆತನ ಜೀವವನ್ನು ಒಡಹುಟ್ಟಿದ ಅಣ್ಣನೇ ತೆಗೆದಿದ್ದು ಮಾತ್ರ ವಿಪರ್ಯಾಸ.
ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ