ಶಿವಮೊಗ್ಗ: ಗೋವುಗಳ ರಕ್ಷಣೆಗೆ ಸರ್ಕಾರಿ ನೌಕರರ ಸಂಘದಿಂದ 100 ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ (Prabhu Chauhan) ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಹಲವಾರು ಯೋಜನೆಗಳು ಜಾರಿ ಮಾಡಲಾಗಿದೆ. ಗೋಮಾತೆ ಕಸಾಯಿಖಾನೆಗೆ ಹೋಗಬಾರದೆಂಬ ಉದ್ದೇಶದಿಂದ ಪುಣ್ಯದತ್ತು ಯೋಜನೆ ಜಾರಿಯಾಗಿದೆ. ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಲಾಗಿದೆ. 100 ಸರ್ಕಾರಿ ಗೋಶಾಲೆ ಆರಂಭಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಡಿಸೆಂಬರ್ ತಿಂಗಳೊಳಗೆ 30 ಗೋಶಾಲೆ ಆರಂಭಿಸುವುದಾಗಿ ಪ್ರಭು ಚೌಹಾಣ್ ತಿಳಿಸಿದರು.
ಚರ್ಮಗಂಟು ರೋಗ ಲಸಿಕೆಗೆ ಸರ್ಕಾರದಿಂದ 13 ಕೋಟಿ ಬಿಡುಗಡೆ
ರಾಜ್ಯದಲ್ಲಿ ಗೋವುಗಳ ರಕ್ಷಣೆಗೆ ಸಹಾಯವಾಣಿ ಆರಂಭಿಸಲಾಗಿದೆ. ಬೆಂಗಳೂರು, ಬೆಳಗಾವಿ ವಿಭಾಗದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಪ್ರತಿ ಜಿಲ್ಲೆಗೆ ಸಹಾಯವಾಣಿ, ಆ್ಯಂಬುಲೆನ್ಸ್ ವ್ಯವಸ್ಥೆ ಮತ್ತು ಜಾನುವಾರು ಚರ್ಮಗಂಟು ರೋಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಲಸಿಕೆಗಾಗಿ ಸರ್ಕಾರದಿಂದ 13 ಕೋಟಿ ಬಿಡುಗಡೆ ಆಗಿದೆ. ಚರ್ಮಗಂಟು ರೋಗದಿಂದ ಶೇ. 50ರಷ್ಟು ಗೋವುಗಳು ಗುಣಮುಖವಾಗಿವೆ. ರಾಜ್ಯದಲ್ಲಿ 400 ಪಶು ವೈದ್ಯರ ನೇಮಕಾತಿಗೆ ಆದೇಶ ನೀಡಲಾಗಿದೆ ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದರು.
ನಟ ಸುದೀಪ್ ಪುಣ್ಯದತ್ತು ಯೋಜನೆ ರಾಯಭಾರಿ
ಖ್ಯಾತ ನಟ ಕಿಚ್ಚ ಸುದೀಪ್ ಅವರನ್ನು ಪುಣ್ಯಕೋಟಿ ದತ್ತು ಯೋಜನೆಗೆ ರಾಯಭಾರಿಯನ್ನಾಗಿ ಮಾಡಲಾಗಿದೆ. ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ರಾಯಭಾರಿ ನೇಮಕಾತಿ ಪತ್ರವನ್ನು ನಿನ್ನೆ (ನ.24) ವಿತರಿಸಿದ್ದಾರೆ. ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಸುದೀಪ್ ಅವರ ಮನೆಯಲ್ಲಿ ಗೋಪೂಜೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಸುದೀಪ್ ಅವರು 31 ಗೋವುಗಳನ್ನು ದತ್ತು ಪಡೆಯುವುದಾಗಿ ತಿಳಿಸಿದ್ದಾರೆ. ಸರ್ಕಾರಿ ಗೋಶಾಲೆಗಳಲ್ಲಿ ಪ್ರತಿ ಜಿಲ್ಲೆಗೊಂದರಂತೆ 31 ಗೋವು ದತ್ತು ಪಡೆಯುವ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎಂದು ಹೇಳಿದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Fri, 25 November 22