ಶಿವಮೊಗ್ಗ: ದೇಶಕ್ಕೆ ಹೆಮ್ಮೆಯ ಗರಿ ಮೂಡಿಸಿದ್ದ ನೂರು ವರ್ಷ ಹಳೆಯದಾದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ( Visvesvaraya Iron and Steel Factory) ಮುಚ್ಚಲು ಭಾರತೀಯ ಉಕ್ಕು ಪ್ರಾಧಿಕಾರ (SAIL) ನಿರ್ಣಯ ಕೈಗೊಂಡಿದೆ. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಈಗ ಆರೋಪ ಮತ್ತು ಪ್ರತ್ಯಾರೋಪ ಹೋರಾಟ ಜೋರಾಗಿದೆ. ಕಳೆದ ಒಂದು ದಶಕಗಳಿಂದ ನಷ್ಟದಲ್ಲಿರುವ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಕೊನೆಗೂ ಕೇಂದ್ರ ಸರಕಾರ ಮನಸ್ಸು ಮಾಡಲಿಲ್ಲ. ಸಾವಿರಾರು ಕೋಟಿ ಬಂಡವಾಳ ಹಾಕಿ ಶತಮಾನದ ಹಿಂದಿನ ಹಳೆ ತಂತ್ರಜ್ಞಾನದಿಂದ ಕಬ್ಬಿಣ ಮತ್ತು ಉಕ್ಕು ತಯಾರಿಸುತ್ತಿದೆ. ಬಿಳಿ ಆನೆ ಸಾಕಲು ಕೇಂದ್ರ ಸರಕಾರಕ್ಕೆ ಆಗುತ್ತಿಲ್ಲ. ಈ ಹಿನ್ನಲೆಯಲ್ಲೆ ಸಾವಿರಾರು ಕಾರ್ಮಿಕರ ಉಪಜೀವನಕ್ಕೆ ಆಧಾರವಾಗಿರುವ ವಿಐಎಸ್ಎಲ್ ಕಾರ್ಖಾನೆ ಬಹುತೇಕ ಬಾಗಿಲು ಮುಚ್ಚುವ ಹಂತಕ್ಕೆ ಬಂದು ನಿಂತಿದೆ.
ಇತ್ತೀಚೆಗಷ್ಟೆ ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ಮಾತನಾಡಿ ಕಾರ್ಖಾನೆ ಉಳಿಸಿಕೊಳ್ಳುವುದು ನಮ್ಮ ಕೈ ಮೀರಿಹೋಯ್ತು ಎಂದಿದ್ದು ಕಾಂಗ್ರೆಸ್ ಮುಖಂಡರನ್ನ ಕೆರಳಿಸಿದೆ. ಯಡಿಯೂರಪ್ಪ ಹಾಗೂ ಪುತ್ರ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಈ ತನಕ ಕಾರ್ಖಾನೆ ಉಳಿಸುತ್ತೇವೆಂದು ಭರವಸೆ ಕೊಟ್ಟಿದ್ದರು. ಆದರೆ ಈ ಭರವಸೆ ಈಡೇರಿಸಲು ಇವರಿಂದ ಆಗಲಿಲ್ಲವೆಂದು ಭದ್ರಾವತಿಯ ಕಾಂಗ್ರೆಸ್ ಶಾಸಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಏನು ಇಲ್ಲ. ಯಾಕಂದ್ರೆ ಐದು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಗಣಿ ನೀಡಿತ್ತು. ವಿಐಎಸ್ಎಲ್ ಫ್ಯಾಕ್ಟರಿಯನ್ನ ವ್ಯವಸ್ಥಿತವಾಗಿ ನಡೆಸುವುದಾಗಿ ಕೇಂದ್ರ ಭರವಸೆ ನೀಡಿತ್ತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಮಣದುರ್ಗದಲ್ಲಿ ಗಣಿ ನೀಡಿತ್ತು. ಆದರೆ ಕೇಂದ್ರ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಇಲ್ಲವಾಗಿದೆ. ಈತನಕ ಮೂರು ಜನ ಕೇಂದ್ರ ಮಂತ್ರಿಗಳು ಬಂದು ಇಲ್ಲಿ ಬೊಗಳಿದ್ರು. ಒಬ್ಬರು 6,000 ಕೋಟಿ ಅಂದ್ರು ಇನ್ನೊಬ್ರು 3000 ಕೋಟಿ ಅಂದ್ರು. ಒಂದು ರೂಪಾಯಿ ಕೂಡ ಬಂದು ತಲುಪಿಲ್ಲ. ಬಿಜೆಪಿ ನಾಯಕರು ಈ ಕಾರ್ಖಾನೆಯನ್ನ ಮುಚ್ಚಲು ಬಿಡುವುದಿಲ್ಲ ಅಂತ ಹೇಳಿ ಈಗ ಮೋಸ ಮಾಡಿದರು. ಭದ್ರಾವತಿ ಜನರಿಗೆ ದ್ರೋಹ ಮಾಡಿದ್ದಾರೆ ನಾನಿದ್ದೇನೆ ನಾನಿದ್ದೇನೆ ಎಂದು ಹೇಳುತ್ತಾ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣ ಸಿದ್ಧ. ಬಿಎಸ್ವೈ ಜನ್ಮದಿನದಂದೇ ಉದ್ಘಾಟನೆ, ಮೋದಿಯೇ ಮೊದಲ ಯಾತ್ರಿಕ
1923 ರಿಂದ ನೂರು ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ವಿಶ್ವೇಶರಯ್ಯ ಅವರು ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಆರಂಭಿಸಿದರು. ಇದು ದೇಶದ ಹೆಮ್ಮೆಯ ಪ್ರತೀಕವಾಗಿದೆ. ಈಗಾಗಲೇ ಎಂಪಿಎಂ ಕಾರ್ಖಾನೆ ಬಾಗಿಲು ಮುಚ್ಚಿದೆ. ಈಗ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಮುಚ್ಚಲು ಹೊರಟಿದ್ದಾರೆ. ಸದ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನೂರಾರು ಕೋಟಿ ನಷ್ಟದಲ್ಲಿದೆ. ವಿಐಎಸ್ಎಲ್ ರೋಗಗ್ರಸ್ತ ಕಾರ್ಖಾನೆ ಎನ್ನುವ ಹಣೆಪಟ್ಟಿಗೆ ಈಗಾಗಲೇ ಸೇರಿದೆ. ಸಾವಿರಾರು ಎಕೆರೆ ಪ್ರದೇಶದಲ್ಲಿರುವ ವಿಐಎಸ್ ಎಲ್ ಕಾರ್ಖಾನೆಯು ರಾಜ್ಯದ ಹೆಮ್ಮೆಯ ಒಂದು ಕಾರ್ಖಾನೆಯಾಗಿತ್ತು. ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಈಗ ಕೆಲವೇ ಕೆಲವು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆ ಎನಾದ್ರು ಪುನರ್ ಆರಂಭವಾಗುತ್ತದೆ ಎನ್ನುವ ಕಾರ್ಮಿಕರ ಕನಸು ಸದ್ಯ ನುಚ್ಚು ನೂರು ಆಗಿದೆ.
ಇದರಿಂದ ಆಕ್ರೋಶಗೊಂಡು ಕಾರ್ಮಿಕರು ಕೆಲಸದ ಜೊತೆಗೆ ಪ್ರತಿಭಟನೆ ಕೂಡಾ ನಡೆಸಿದ್ದಾರೆ. ಬೆಳಗ್ಗೆ ಡ್ಯುಟಿ ಮಧ್ಯಾಹ್ನದ ಬಳಿಕ ಕಾರ್ಖಾನೆ ಉಳಿಸಲು ಧರಣಿ ಮಾಡುತ್ತಿದ್ದಾರೆ. ಈ ಹಿಂದೆ 2016ರಲ್ಲಿ ಕೇಂದ್ರ ಸಚಿವ ಸಂಪುಟವು ವಿಐಎಸ್ಎಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದಕ್ಕೆ ಮುಂದಾಗಿತ್ತು. ಆದರೆ ಯಾರೂ ಕೂಡಾ ನಷ್ಟದಲ್ಲಿರುವ ಕಾರ್ಖಾನೆ ಮುನ್ನಡೆಸಲು ಬರಲಿಲ್ಲ. ಸೈಲ್ 16,000 ಕೋಟಿ ಬಂಡವಾಳ ಹೂಡಿಕೆ ಮಾಡಿ ಇದರ ಅಭಿವೃದ್ಧಿಗೆ ಯೋಜನೆ ರೂಪಿಸಿತ್ತು. ಆದ್ರೆ ಈ ಅಭಿವೃದ್ಧಿ ಯೋಜನೆಯು ಪುನುಷ್ಠಾನಕ್ಕೆ ಬರಲೇ ಇಲ್ಲ. ಇನ್ನು ಭಾರತೀಯ ಉಕ್ಕು ಪ್ರಾಧಿಕಾರದ ಆಡಳಿತ ಮಂಡಳಿಯು ಕಾರ್ಖಾನೆ ಮುಚ್ಚುವ ಪ್ರಸ್ತಾವನೆಗೆ ಅಂಗೀಕಾರ ದೊರೆತಿದೆ. ದಶಕಗಳಿಂದ ಕಾರ್ಖಾನೆ ಪುನಶ್ವೇತನವಾಗುತ್ತದೆ ಎನ್ನುವ ಕಾರ್ಮಿಕರ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ.
ಇದನ್ನೂ ಓದಿ:ಶಿವಮೊಗ್ಗ: ಗಾಜನೂರಿನ ಮೊರಾರ್ಜಿ ವಸತಿ ಶಾಲೆಯ ಮಕ್ಕಳು 9 ವಿದ್ಯಾರ್ಥಿಗಳು ಅಸ್ವಸ್ಥ, ಮೆಗ್ಗಾನ್ ಆಸ್ಪತ್ರೆಗೆ ದಾಖಲು
ನೂರು ವರ್ಷಗಳ ಇತಿಹಾಸ ಹೊಂದಿರುವ ದೇಶದ ಹೆಮ್ಮೆಯ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಬಾಗಿಲು ಮುಚ್ಚುವುದು ಗ್ಯಾರಂಟಿ ಆಗಿದೆ. ಇನ್ನೇನು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ವಿಐಎಸ್ ಎಲ್ ಕಾರ್ಖಾನೆ ಪುನಶ್ಚೇತನವಾಗದೇ ಬಂದ್ ಆಗುತ್ತಿರುವುದೇ ದೊಡ್ಡ ಚುನಾವಣೆಯ ಅಸ್ತ್ರವಾಗಲಿದೆ. ಈ ಎಲ್ಲ ಬೆಳವಣಿಗೆಯಿಂದ ಸದ್ಯ ಜಿಲ್ಲೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.
ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ