ಶಿವಮೊಗ್ಗ: ಶನಿವಾರ ಶಿವಮೊಗ್ಗದ ಪೆಸಿಟ್ ಎಂಜಿನಿಯರಿಂಗ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಹತ್ತನೇ ತರಗತಿ ಬಾಲಕ ಸಿಡಿಸಿದ ರನ್ ದಿಗ್ಭ್ರಮೆ ಮೂಡಿಸಿದೆ. ಸಾಗರದ ತನ್ಮಯ್ (16 ವರ್ಷ) 165 ಬೌಲ್ ಗಳಲ್ಲಿ 407 ರನ್ ಬಾರಿಸಿ ಕ್ರಿಕೆಟ್ಲ್ಲಿ ಹೊಸ ಭಾಷ್ಯ ಬರೆದಿದ್ದಾನೆ. ಸದ್ಯ ಮಲೆನಾಡಿನ ತುಂಬೆಲ್ಲಾ ಈ ಹುಡುಗನ ಸಾಧನೆಯೇ ಗುಲ್ಲು.
ಸಾಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ತನ್ಮಯ್ ಶನಿವಾರ ನಡೆದ ವಲಯ ಮಟ್ಟದ U-16 ಕ್ರಿಕೆಟ್ ಟೂರ್ನಿಯಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾನೆ. ಈ ಲೀಗ್ ಕರ್ನಾಟಕ ಕ್ರಿಕೆಟ್ ಅಕಾಡೆಮಿ(KSCA) ಸುಪರ್ದಿಯಲ್ಲೇ ನಡೆಯುತ್ತೆ. ಬಾಲಕನ ಸಾಧನೆಯೂ ಸಹ ಅಕಾಡೆಮಿಯಲ್ಲಿ ದಾಖಲಾಗಿದೆ. ಶನಿವಾರ ಕ್ರಿಕೆಟ್ ಕ್ಲಬ್ ಅಫ್ ಸಾಗರ (CCS) ಹಾಗೂ NTPC ಭದ್ರಾವತಿ ನಡುವೆ ಪಂದ್ಯವಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಸಾಗರದ ತಂಡದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಗಳಾಗಿ ಅಂಶು ಹಾಗೂ ತನ್ಮಯ್ ಬಂದರು. ಇಬ್ಬರೂ ಜೊತೆಯಾಟ ಆಡಿದರು. ತನ್ಮಯ್ 165 ಬಾಲ್ ಗಳಿಗೆ 24 ಸಿಕ್ಸರ್ 48 ಬೌಂಡರಿಗಳನ್ನ ಸಿಡಿಸಿ ಒಟ್ಟು 407 ರನ್ನ ಪೇರಿಸಿದರು. ಎದುರಾಳಿ ಅಂಶು 127 ರನ್ ಗಳನ್ನು ಗಳಿಸಿದರು.
ಆದರೆ ಎನ್.ಟಿ.ಪಿ.ಸಿ. ಭದ್ರಾವತಿ ದ್ವಿತೀಯ ಇನ್ನಿಂಗ್ಸ್ ಆಡಿ 73 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಅಂಶು 5 ವಿಕೆಟ್ ಅಜಿತ್ 4 ವಿಕೆಟ್ ಪಡೆದರು.ಈ ಪಂದ್ಯ ಮುಗಿಯುತ್ತಿದ್ದಂತೆ ತನ್ಮಯ್ ಸ್ಕೋರ್ ಕಾಡ್ಗಿಚ್ಚಿನಂತೆ ಹರಡಿತ್ತು. ಸದ್ಯ ತನ್ಮಯ್ ಜೂನಿಯರ್ ಸಚಿನ್ ತೆಂಡೂಲ್ಕರ್ ಎಂಬ ಖ್ಯಾತಿ ಒಂದೇ ದಿನದಲ್ಲಿ ಪಡೆದುಕೊಂಡಿದ್ದಾರೆ. ಇಂತಹ ಅಮೋಘ ಸಾಧನೆ ಗೈದ ಮಗನ ಬಗ್ಗೆ ತಂದೆ ಮಂಜುನಾಥ್ ಮಾತನಾಡಿ, ಅವನ ಕಲಿಕಾ ಬದ್ಧತೆ ಯಶಸ್ಸು ಕಾಣಿಸಿದೆ ಎಂದರು. ನಾನು ಈ ಪಂದ್ಯಕ್ಕೆ ಹೋಗಲಿಕ್ಕೆ ಆಗಲಿಲ್ಲ. ಮಧ್ಯಾಹ್ನ ವಾಟ್ಸ್ ಆ್ಯಪ್ನಲ್ಲಿ ಫೋಟೋ ಮಾಹಿತಿ ಬಂತು. ಆಗ ಈತ ಮಾಡಿದ ಸ್ಕೋರ್ ಬಗ್ಗೆ ತಿಳೀತು. ಆತನ ಸಾಧನೆಗೆ ಸಹಕಾರಿಯಾದ ಸಾಗರ ಕ್ರಿಕೆಟ್ ಕ್ಲಬ್ ಹಾಗೂ ಕೋಚ್ ನಾಗೇಂದ್ರ ಪಂಡಿತ್ ಅವರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು.
ಮುಂದೆ ಭಾರತಕ್ಕೆ ಆಟವಾಡುವ ಬಯಕೆ ಇದೆ
ತನ್ಮಯ್ ಮಾತನಾಡಿ, ನಾನು ಪ್ರತಿದಿನ ಕ್ರಿಕೆಟ್ ಕೋಚಿಂಗ್ ತೆಗೆದುಕೊಳ್ಳುತ್ತಿದ್ದೆ. ಮುಂದೆ ಭಾರತಕ್ಕೆ ಆಟವಾಡುವ ಬಯಕೆ ಹೊಂದಿದ್ದೇನೆ ಎಂದರು. ಸುದ್ದಿ ತಿಳಿಯುತ್ತಿದ್ದಂತೆ ತನ್ಮಯ್ ನಿವಾಸಕ್ಕೆ ಆಗಮಿಸಿದ ಗೆಳೆಯರು ಹಾಗೂ ಹಿತೈಷಿಗಳು ಶುಭಕೋರಿದರು. ಮುಂದೆ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.
ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ
Published On - 11:45 am, Sun, 13 November 22