ಮೊಬೈಲ್ ಚಾರ್ಜ್ ವಿಚಾರದಲ್ಲಿ ಜಗಳ; ದೊಣ್ಣೆ ಏಟಿಗೆ ವ್ಯಕ್ತಿ ಸಾವು
ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಮನೆಗೆ ಬಂದ ವ್ಯಕ್ತಿಯು ಕಿರಿಕ್ ಮಾಡಿಕೊಂಡು ಮನೆಯ ಒಡೆಯನನ್ನೇ ಕೊಲೆ ಮಾಡಿದ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ: ಮನೆಗೆ ಬಂದ ವ್ಯಕ್ತಿಯೊಬ್ಬ ಮೊಬೈಲ್ ಚಾರ್ಜ್ ಮಾಡಿಕೊಳ್ಳುವ ವಿಚಾರವಾಗಿ ಮನೆಯ ಯಜಮಾನನೊಂದಿಗೆ ಕಿರಿಕ್ ಮಾಡಿಕೊಂಡಿದ್ದಲ್ಲದೆ ಆತನ ಜೀವವನ್ನೇ ತೆಗೆದುಬಿಟ್ಟ ಘಟನೆಯೊಂದು ಸಾಗರ ತಾಲೂಕಿನ ಮುರಳ್ಳಿ ಮರಾಠಿ ಗ್ರಾಮದಲ್ಲಿ ನಡೆದಿದೆ. ನವೆಂಬರ್ 7ರಂದು ನಡೆದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತಿಮ್ಮಪ್ಪ (52) ಕೊಲೆಯಾದ ವ್ಯಕ್ತಿಯಾಗಿದ್ದು, ಕೃತ್ಯದ ನಂತರ ಪರಾರಿಯಾಗಿದ್ದ ಆರೋಪಿ ಸಿದ್ದಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಸಿದ್ದಪ್ಪ ತನ್ನ ಮೋಬೈಲ್ ಚಾರ್ಜ್ ಮಾಡಿಕೊಳ್ಳಲು ತಿಮ್ಮಪ್ಪನ ಮನೆಗೆ ಬಂದಿದ್ದನು. ಮೊಬೈಲ್ ಜಾರ್ಜ್ ಮಾಡಿಕೊಳ್ಳುವ ವಿಚಾರದಲ್ಲಿ ಇಬ್ಬರ ನಡುವೆ ಹಳ್ಳಿಯ ಕಿರಿಕ್ ಶುರುವಾಗಿತ್ತು. ರಾತ್ರಿ ಸಮಯ ಆಗಿದ್ದರಿಂದ ಎಣ್ಣೆ ಹೊಡೆದಿದ್ದ ಸಿದ್ದಪ್ಪ ತಿಮ್ಮಪ್ಪಗೆ ಅವಾಜ್ ಹಾಕುತ್ತಾನೆ. ಈ ವಿಚಾರದಲ್ಲಿ ಸಿದ್ದಪ್ಪನು ತಿಮ್ಮಪ್ಪ ಮತ್ತು ಆತನ ಹೆಂಡತಿ ಲಕ್ಷ್ಮೀಯೊಂದಿಗೆ ಗಲಾಟೆ ಮಾಡುತ್ತಾನೆ. ಕುಡಿದ ಅಮಲಿನಲ್ಲಿದ್ದ ಸಿದ್ದಪ್ಪನು ಅಲ್ಲೆ ಇದ್ದ ದೊಣ್ಣೆಯನ್ನು ತೆಗೆದುಕೊಂಡು ಮನೆಗೆ ಅಳವಡಿಸಿದ ಡಿಶ್ ಬುಟ್ಟಿಗೆ ದೊಣ್ಣೆಯಿಂದ ಹೊಡೆಯುತ್ತಾನೆ. ಇದನ್ನು ನೋಡಿ ತಮ್ಮ ಮನೆ ವಸ್ತು ಯಾಕೆ ಹಾಳು ಮಾಡುತ್ತೀಯಾ ಎಂದು ಸಿದ್ದಪ್ಪನಿಗೆ ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಕೋಪಗೊಂಡ ಸಿದ್ದಪ್ಪನು ಕೈಯಲ್ಲಿದ್ದ ದೊಣ್ಣೆಯಿಂದ ತಿಮ್ಮಪ್ಪನ ಎಡಗಣ್ಣಿನ ಹುಬ್ಬಿಗೆ ಹಲ್ಲೆ ಮಾಡುತ್ತಾನೆ.
ಹಲ್ಲೆಯಿಂದಾಗಿ ತಲೆಗೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಣ್ಣು ಮತ್ತು ತಲೆ ಭಾಗಕ್ಕೆ ಹೆಚ್ಚು ಪೆಟ್ಟು ಬಿದ್ದ ಹಿನ್ನಲೆ ತಿಮ್ಮಪ್ಪನು ಚಿಕಿತ್ಸೆಗೆ ಫಲಕಾರಿಯಾಗದೆ ನ.9 ರಂದು ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ಧಾನೆ. ಮೃತನ ಹೆಂಡತಿ ನೀಡಿದ ದೂರಿನ ಮೇರೆಗೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಆಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಕಾರ್ಗಲ್ ಪೊಲೀಸರು ಆರೋಪಿಯ ಬಂಧನಕ್ಕೆ ತನಿಖೆ ಆರಂಭಿಸಿದ್ದರು. ಕೃತ್ಯದ ನಂತರ ತಲೆಮರೆಸಿಕೊಂಡಿದ್ದ ಸಿದ್ದಪ್ಪನನ್ನು ಸಾಗರ ಗ್ರಾಮಾಂತರ ಸಿಪಿಐ ಕೃಷ್ಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಬಂಧಿಸಲಾಗಿದೆ. ವಿಚಾರಣೆ ವೇಳೆ ಗಲಾಟೆ ಮತ್ತು ಹಲ್ಲೆ ಮಾಡಿರುವುದಾಗಿ ಆರೋಪಿಯು ತಪ್ಪು ಒಪ್ಪಿಕೊಂಡಿದ್ದಾನೆ. ತಿಮ್ಮಪ್ಪನು ಮೊಬೈಲ್ ಜಾರ್ಜ್ ಮಾಡಿಕೊಳ್ಳುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದನು. ಈ ಹಿನ್ನಲೆಯಲ್ಲಿ ಸಿಟ್ಟು ಬಂದು ತಿಮ್ಮಪ್ಪನ ಮೇಲೆ ಹಲ್ಲೆ ಮಾಡಿದ್ದೆ ಎಂದು ಸಿದ್ದಪ್ಪ ಪೊಲೀಸರ ತನಿಖೆ ವೇಳೆ ಹೇಳಿದ್ದಾನೆ.
ವಿಚಾರಣೆ ಬಳಿಕ ಕಾರ್ಗಲ್ ಪೋಲಿಸರು ಆರೋಪಿಯನ್ನು ಸಾಗರ ಕೋರ್ಟ್ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಹೀಗೆ ಒಂದೇ ಗ್ರಾಮದಲ್ಲಿದ್ದವರ ನಡುವೆ ಯಾವುದೇ ದ್ವೇಷ, ವೈಷಮ್ಯ ಇಲ್ಲದಿದ್ದರೂ ಕೇಲವ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿ ವ್ಯಕ್ತಿಯ ಜೀವವನ್ನೇ ಸಿದ್ದಪ್ಪನು ತೆಗೆದುಬಿಟ್ಟಿದ್ದಾನೆ.
ದ್ವೀಪ ಗ್ರಾಮ ಆಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ತಿಮ್ಮಪ್ಪನಿಗೆ ಪಕ್ಕದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸುವ ಪರಿಸ್ಥಿತಿ ಎದುರಾಗಿತ್ತು. ಸಾಗರ ಮತ್ತು ಶಿವಮೊಗ್ಗ ಸರಕಾರಿ ಆಸ್ಪತ್ರೆಗೆ ಬರಲು ರಸ್ತೆ ಮಾರ್ಗವಿಲ್ಲ. ರಾತ್ರಿ ಸಮಯದಲ್ಲಿ ಲಾಂಚ್ಗಳ ಸೇವೆ ಇರುವುದಿಲ್ಲ. ಈ ಹಿನ್ನಲೆಯಲ್ಲಿ ರಸ್ತೆ ಮಾರ್ಗದ ವ್ಯವಸ್ಥೆ ಇರುವ ಉಡುಪಿ ಜಿಲ್ಲಾಸ್ಪತ್ರೆಗೆ ತಿಮ್ಮಪ್ಪನನ್ನು ದಾಖಲಿಸಲಾಗಿತ್ತು. ಆದರೆ ತುರ್ತು ಮತ್ತು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನಲೆ ಚಿಕಿತ್ಸೆ ಪಲಕಾರಿಯಾಗದೇ ತಿಮ್ಮಪ್ಪನು ಮೃತಪಟ್ಟಿದ್ದಾನೆ.
ವರದಿ: ಬಸವರಾಜ್ ಯರಗಣವಿ, ಟಿವಿ 9 ಶಿವಮೊಗ್ಗ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ